*ಎಲ್ಲೆಲ್ಲೂ ಸಂಕ್ರಾಂತಿ ಹಬ್ಬದ ಸಂಭ್ರಮ ಸಡಗರ* ✍ ಆಶಿತಾ ಎಸ್ ಗೌಡ

(ನ್ಯೂಸ್ ಕಡಬ) newskadaba.com, ವಿಶೇಷ ಲೇಖನ, ಜ.15  ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದಾಗಿದೆ.

ಭೂಮಿ ಮೇಲೆ ನಡೆಯುವ ಎಲ್ಲಾ ಚಟುವಟಿಕೆಗಳಿಗೂ ಸೂರ್ಯನೇ ಆಧಾರ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ಪ್ರವೇಶಿಸುವ ಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಕರೆಯಲಾಗುತ್ತದೆ. ಮತ್ತೊಂದೆಡೆ ಕರ್ನಾಟಕದಲ್ಲಿ ಸಂಕ್ರಾಂತಿ ಎಂದು ಆಚರಿಸಿದರೆ, ನೆರೆಯ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಭೋಗಿ, ಕನುಹಬ್ಬ ಎಂದು ಮೂರುದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ. ಮಕರ ಸಂಕ್ರಾಂತಿಯೂ ಸುಗ್ಗಿಯನ್ನು ಸಾರುವ ಹಬ್ಬವಾಗಿದ್ದು, ದ್ರಾವಿಡ ಸಂಪ್ರದಾಯವನ್ನು ಪಾಲಿಸುವವರಿಗೆ ಇದೊಂದು ವಿಶೇಷ ಸಂಭ್ರಮದ ದಿನವಾಗಿರುತ್ತದೆ. ಮುಖ್ಯವಾಗಿ
ಸಂಕ್ರಾಂತಿ ದಿನದಂದು ವಿವಾಹಿತ ಹಾಗೂ ಅವಿವಾಹಿತ ಹೆಣ್ಣುಮಕ್ಕಳು ಎಳ್ಳು-ಬೆಲ್ಲ, ಕೊಬ್ಬರಿ, ನೆಲಗಡಲೆ, ಕಬ್ಬು, ಬಾಳೆಹಣ್ಣು, ಸಕ್ಕರೆ ಅಚ್ಚು ಇತ್ಯಾದಿಗಳನ್ನು ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ. ಆಂಧ್ರದಲ್ಲಿ ಈ ದಿನದಂದು ಶ್ರೀರಾಮನ ಪೂಜೆ ಮಾಡಿ, ರೈತರು ಜಾನುವಾರುಗಳಿಗೆ ಮೈತೊಳೆದು, ಅದನ್ನು ಸಿಂಗರಿಸಿ ಮೆರವಣಿಗೆ ಮಾಡುತ್ತಾರೆ. ಅದರಲ್ಲೂ ಸಂಕ್ರಮಣದ ದಿನದ ಸಂಜೆ ಎತ್ತುಗಳಿಗೆ ಕಿಚ್ಚು ಹಾಯಿಸುವುದು ಈ ಹಬ್ಬದ ವಿಶೇಷವಾಗಿದೆ. ಇನ್ನು ಸಂಕ್ರಾಂತಿ ದಿನದಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ ಎಳ್ಳುದಾನ ಕೊಟ್ಟರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಹಾಗೆಯೇ ದೇವಾಲಯಗಳಲ್ಲಿ ಎಳ್ಳೆಣ್ಣೆ ಹಾಕಿ ದೀಪ ಬೆಳಗಬೇಕು. ಈ ದಿನ ನಾವು ಮಾಡಿದ ದಾನ ಧರ್ಮಗಳ ಪುಣ್ಯವು ಜನ್ಮ ಜನ್ಮದಲ್ಲೂ ಸದಾ ನಮಗೆ ಶ್ರೇಯಸ್ಸು ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ ಎಂದು ಹಿರಿಯರು ಹೇಳುತ್ತಾರೆ. `ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು’ ಎಂಬ ಕನ್ನಡದ ಗಾದೆಗೆ ಸಂಕ್ರಾಂತಿ ಹಬ್ಬವೇ ಮೂಲವಾಗಿರುವುದು ಎಂದು ಹಲವರು ಹೇಳುವುದುಂಟು. ಮಕರ ಸಂಕ್ರಾಂತಿಯ ದಿನದಂದು ದೇವತೆಗಳಿಗೆ ಹಗಲು ಹಾಗೂ ರಾಕ್ಷಸರಿಗೆ ರಾತ್ರಿ ಆಗುವುದೆಂದು ಪುರಾಣದಲ್ಲಿ ಹೇಳಿದ್ದಾರೆ. ಈ ಆನಂದಕ್ಕಾಗಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣವೆಂದು ಎಲ್ಲರು ಎಳ್ಳು ಬೆಲ್ಲವನ್ನು ಹಂಚಿ ಸಂಭ್ರಮಿಸುತ್ತಾರೆ . ಉತ್ತರ ಭಾರತದಲ್ಲಿಯೂ ಸಂಕ್ರಮಣ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಲಹಾಬಾದ್‍ನಲ್ಲಿ ಈ ವೇಳೆ ಸುಪ್ರಸಿದ್ಧವಾದ ಕುಂಭಮೇಳ ಕೂಡ ನಡೆಯುತ್ತದೆ.
ಎಲ್ಲೆಲ್ಲೂ ಸಂಕ್ರಾಂತಿ ಮಕರ ಸಂಕ್ರಾಂತಿ ಆಚರಣೆಗೆ ರಾಜ್ಯ, ಮತ, ಜಾತಿಯ ಭೇದವಿಲ್ಲ. ಭಾರತದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಅಸ್ಸಾಂ, ಬಿಹಾರ್, ಗುಜರಾತ್, ಮಹಾರಾಷ್ಟ್ರ, ಓರಿಸ್ಸಾ, ಪಂಜಾಬ್, ರಾಜಸ್ತಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂಕ್ರಾಂತಿ ಆಚರಣೆಗೊಳಪಡುತ್ತದೆ. ಆದರೆ ಆಯಾ ರಾಜ್ಯದಲ್ಲಿ ಬೇರೆ ಬೇರೆ ಹೆಸರುಗಳಿಂದ ಕೂಡ ಈ ಹಬ್ಬ ಕರೆಯಲ್ಪಡುತ್ತದೆ. ಅದರಂತೆ ಇಂದು ಎಲ್ಲೆಲ್ಲೂ ಸಂಕ್ರಾಂತಿ ಹಬ್ಬ ಸಂಭ್ರಮ ಮನೆ ಮಾಡಿದೆ….ರೈತರ ಮೊಗದಲ್ಲಿ ಮಂದಹಾಸ ಮೂಡಿಸುವ ಹಬ್ಬವು ಇದಾಗಿದೆ.

Also Read  ಈ 5 ರಾಶಿಯವರಿಗೆ ಧನಪ್ರಾಪ್ತಿ ಯೋಗ, ದಾಂಪತ್ಯದಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

“ಎಲ್ಲರಿಗೂ ಮತ್ತೊಮ್ಮೆ ಸಂಕ್ರಾಂತಿ ಹಬ್ಬದ ಶುಭಾಶಯಗಳು”

ಆಶಿತಾ ಎಸ್ ಗೌಡ 
ಬಿಳಿನೆಲೆ 

error: Content is protected !!
Scroll to Top