(ನ್ಯೂಸ್ ಕಡಬ) newskadaba.com, ಮಂಗಳೂರು, ಜ.15 ಇಂದು ವಿವಿಧ ಸಂಘಟನೆಗಳಿಂದ ಸಿಎಎ / ಎನ್‍ಆರ್ ಸಿ ವಿರೋಧಿಸಿ ಪ್ರತಿಭಟನೆ ಮಂಗಳೂರು ಹೊರವಲಯದ ಅಡ್ಯಾರ್ ನಲ್ಲಿ ಆಯೋಜನೆಗೊಂಡಿರುವುದರಿಂದ ಜಿಲ್ಲೆಯ ಕಾನೂನು ಮತ್ತು ಶಿಸ್ತು ಸಿದ್ಧತೆಗಳ ಪರಿಶೀಲಿಸಲು ಮಂಗಳವಾರ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಜಿಲ್ಲಾಧಿಕಾರಿಗಳು ಮಾತನಾಡಿ, ಅಗತ್ಯ ಭದ್ರತೆ ಹಾಗೂ ಸಂಚಾರ ಮಾರ್ಪಾಡು ವ್ಯವಸ್ಥೆಗೆ ಈಗಾಗಲೇ ಸಿದ್ಧತೆ ಮಾಡಲಾಗಿದೆ. ಬುಧವಾರ ಬೆಳಿಗ್ಗೆಯಿಂದ ಸಮಾರಂಭ ಮುಗಿಯುವವರೆಗೆ ಯಾವುದೇ ಲೋಪವಿಲ್ಲದೇ ಸಿದ್ಧತೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚಿಸಿದರು. ಪೊಲೀಸ್ ಉಪ ಆಯುಕ್ತ ಅರುಣಾಂಶು ಗಿರಿ ಮಾತನಾಡಿ, ಸಮಾವೇಶದಲ್ಲಿ ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇದ್ದು, ಭಾರೀ ಜನಸಂದಣಿ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾರ್ಪಾಡು ಮಾಡಲಾಗುವುದು ಎಂದರು. ಎನ್‍ಎಂಪಿಟಿ, ಎಂಆರ್ ಪಿಎಲ್ ಸಂಸ್ಥೆಗಳಿಂದ ಬರುವ ಹಾಗೂ ಅಲ್ಲಿಗೆ ಹೋಗುವ ಟ್ಯಾಂಕರ್, ಘನ ವಾಹನಗಳನ್ನು ಈ ಮಾರ್ಗದಲ್ಲಿ ಕಳುಹಿಸದಂತೆ ಅಲ್ಲಿನ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಅಗ್ನಿಶಾಮಕ, ಅಂಬ್ಯುಲೆನ್ಸ್ ಸೇರಿದಂತೆ ಅಗತ್ಯ ಸಂಖ್ಯೆಯ ತುರ್ತು ವಾಹನಗಳನ್ನು ಕಾರ್ಯಕ್ರಮ ಸ್ಥಳದಲ್ಲಿ ನಿಯೋಜಿಸಲು ಅವರು ಸೂಚಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕಾರ್ಯಕ್ರಮ ಭದ್ರತೆಗೆ ಕರೆತರಬೇಕಾಗಿರುವುದರಿಂದ ವಾಹನ ಹಾಗೂ ಕೆಎಸ್‍ಆರ್ ಟಿಸಿ ಬಸ್ಸುಗಳನ್ನು ಒದಗಿಸಲು ಆರ್ ಟಿಓ ಹಾಗೂ ಕೆಎಸ್‍ಆರ್ ಟಿಸಿ ಅಧಿಕಾರಿಗಳಿಗೆ ಡಿಸಿಪಿ ತಿಳಿಸಿದರು. ಸಭೆಯಲ್ಲಿ ಸಿಐಎಸ್‍ಎಫ್ ಡೆಪ್ಯುಟಿ ಕಮಾಂಡೆಂಟ್ ಅಶುತೋಷ್ ಗೌರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶುಮೋಹನ್, ನಗರಪಾಲಿಕೆ ಉಪ ಆಯುಕ್ತ ಸಂತೋಷ್, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.