(ನ್ಯೂಸ್ ಕಡಬ) newskadaba.com ಕಡಬ, ಆ.24, ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಡಬದಲ್ಲಿನ ಅರಕ್ಷಕ ಠಾಣೆಯಲ್ಲಿ ಸಿಬಂದಿಗಳ ಕೊರತೆ ಒಂದೆಡೆಯಾದರೆ, ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಠಾಣಾ ಕಟ್ಟಡದ ಮೇಲ್ಚಾವಣಿಯಿಂದ ನೀರಿನ ಒರತೆ ಉಂಟಾಗಿ ಠಾಣೆಯ ಒಂದು ಭಾಗದಲ್ಲಿ ನೀರು ಶೇಖರಗೊಳ್ಳುತ್ತಿದೆ.
ಕಡಬ ಠಾಣೆಯಲ್ಲಿ ಬಹುತೇಕ ಮೂಲಭೂತ ವ್ಯವಸ್ಥೆ ಇದೆ. ಪೊಲೀಸ್ ಜೀಪೊಂದು ಬಳುವಳಿಯಾಗಿ ಬಂದಿರುತ್ತದೆ. ಪೊಲೀಸರಿಗೆ ನೂತನ ವಸತಿಗೃಹ ನಿರ್ಮಾಣವಾಗುತ್ತಿದೆ. ಠಾಣೆಯಲ್ಲಿ ಕಂಪ್ಯೂಟರ್ ಇತ್ಯಾದಿ ವ್ಯವಸ್ಥೆಗಳು ಇವೆ. ಈ ಹಿಂದೆ ಇದ್ದೆ ಇದ್ದ ಹಳೆಯ ಕಟ್ಟಡವನ್ನು ಬಿಟ್ಟು ನೂತನ ಕಟ್ಟಡ ನಿರ್ಮಾಣವಾಗಿ ಎಂಟು ವರ್ಷಗಳಾಗುತ್ತಾ ಬಂದಿದೆ. ಕಟ್ಟಡದ ಎದುರು ಪೊಲೀಸರಿಗೆ ಆಟವಾಡಲು ಒಂದು ಟೆನ್ನಿಸ್ ಕೋರ್ಟ್ ಕೂಡಾ ಇದೆ. ಇಷ್ಟೆಲ್ಲಾ ಇದ್ದರೂ ಠಾಣಾ ಕಟ್ಟಡ ಮಾತ್ರ ಕಳಪೆ ಕಾಮಗಾರಿಯ ಹಿನ್ನೆಯಲ್ಲಿ ಸೋರುತ್ತಿದೆ. ಲಕ್ಷಾಂತರ ರೂ ವ್ಯಯ ಮಾಡಿ ಅಂದಿನ ಬಿಜೆಪಿ ಸರಕಾರದ ಗೃಹ ಮಂತ್ರಿ ದಿ|ಡಾ.ವಿ.ಎಸ್.ಆಚಾರ್ಯ ಅವರಿಂದ 2009 ರಲ್ಲಿ ಉದ್ಘಾಟನೆಗೊಂಡ ಕಟ್ಟಡ ಈಗ ಮಧ್ಯದಲ್ಲೇ ಸೋರುತ್ತಿದೆ. ದಾಖಲೆಗಳ ಕೊಠಡಿ ಮತ್ತು ಜೈಲು ಕೊಠಡಿಯ ಮಧ್ಯೆ ಇರುವ ಕಾರಿಡಾರ್ ಈಗ ಮಳೆ ಬಂದರೆ ಸಾಕು ನೀರಿನಿಂದ ತುಂಬುತ್ತದೆ. ದಾಖಲೆಗಳು ನೀರಿನ ತೇವದಿಂದ ಹಾನಿಯಾಗುತ್ತಿದೆ.
ಈ ಹಿಂದೆ 26 ಗ್ರಾಮಗಳು ಈ ಠಾಣೆಯ ವ್ಯಾಪ್ತಿಗೆ ಒಳಪಟ್ಟಿತ್ತು. ಇತ್ತೀಚೆಗೆ ಬೆಳ್ಳಾರೆ ಠಾಣೆ ಅಸ್ಥಿತ್ವಕ್ಕೆ ಬಂದ ಬಳಿಕ ಇದರ ವಿಸ್ತಾರ ಕಡಿಮೆಯಾಗಿ 19 ಗ್ರಾಮಗಳಿಗೆ ಸೀಮಿತಗೊಂಡರೂ ಇಲ್ಲಿನ ಸಿಬಂದಿ ಕೊರತೆ ಮಾತ್ರ ಜೀವಂತವಾಗಿದೆ. ಕಡಬ, ಚಾರ್ವಾಕ, ಬಲ್ಯ, ನೂಜಿಬಾಳ್ತಿಲ, ಕೊೖಲ, 102 ನೇ ನೆಕ್ಕಿಲಾಡಿ, ಬಂಟ್ರ, ಹಳೆನೇರೆಂಕಿ, ರಾಮಕುಂಜ, ಐತ್ತೂರು, ಕುಂತೂರು, ಪೆರಾಬೆ, ದೋಳ್ಪಾಡಿ, ಆಲಂಕಾರು, ಕೋಡಿಂಬಾಳ, ಕುಟ್ರುಪ್ಪಾಡಿ, ಬಿಳಿನೆಲೆ, ಕೊಂಬಾರು ಮುಂತಾದ ಗ್ರಾಮಗಳನ್ನೊಳಗೊಂಡ ಈಗಿನ ಕಡಬ ಠಾಣೆ ಮೂಲಭೂತ ಸೌಕರ್ಯಗಳ ಕೊರತೆ ಇಲ್ಲದಿದ್ದರೂ ಸಿಬಂದಿಕೊರತೆಯಿಂದಾಗಿ ಠಾಣಾ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಇಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆ ಭರ್ತಿಯಾಗಿದೆ, ಎಎಸ್ಐ ಹುದ್ದೆ ಮೂರು ಭರ್ತಿಯಾಗಿದ್ದರೂ ಈ ಪೈಕಿ ಒಬ್ಬರು ನಿಯೋಜನೆಯಲ್ಲಿ ಪುತ್ತೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಯಮ ಪ್ರಕಾರ ಮುಖ್ಯವಾಗಿ ಇಲ್ಲಿಗೆ 18 ಜನ ಪೋಲೀಸ್ ಸಿಬ್ಬಂದಿಗಳಿರಬೇಕು. ಆದರೆ ಕೇವಲ 12 ಪೋಲೀಸ್ ಸಿಬ್ಬಂದಿಗಳು ಮಾತ್ರ ಕರ್ತವ್ಯದಲ್ಲಿದ್ದಾರೆ. ಉಳಿದಂತೆ 6 ಸಿಬಂದಿಗಳ ಹುದ್ದೆ ಖಾಲಿ ಇದೆ. ಠಾಣಾ ವ್ಯಾಪ್ತಿಯ ಗ್ರಾಮಗಳಿಗೆ ಬೀಟ್ ಗೆ ಕಳುಹಿಸಲು ಇಲ್ಲಿ ಬೇಕಾದಷ್ಟು ಪೋಲೀಸರಿಲ್ಲ. ಇನ್ನು ಸುಳ್ಯ, ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ, ಬಂಟ್ವಾಳ ಅಥವಾ ಮಂಗಳೂರಿನಲ್ಲಿ ಮೊದಲಾದೆಡೆ ಗಲಾಟೆ, ಸಂಘರ್ಷಗಳು ನಡದರೆ ಅಲ್ಲಿಗೂ ಕರ್ತವ್ಯಕ್ಕೆ ತೆರಳಿದಾಗ ಠಾಣೆ ಖಾಲಿ ಖಾಲಿಯಾಗಿರುತ್ತದೆ. ಇದರಿಂದಾಗಿ ಕೆಲವೊಮ್ಮೆ ಸಾರ್ವಜನಿಕರ ಅಹವಾಲು ಸ್ವೀಕರಿಸಲೂ ಸಿಬಂದಿಗಳು ಇಲ್ಲದಂತಾಗುತ್ತದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಠಾಣೆಯಲ್ಲಿ ಹದಿನೈದು ಜನ ಹೋಂಗಾರ್ಡ್ ಗಳನ್ನು ನೇಮಿಸಕೊಳ್ಳಲಾಗಿದೆ. ಆದರೆ ಇವರಿಗೆ ಪೊಲೀಸರಷ್ಟು ಪ್ರಭಾವಶಾಲಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
ಇಲ್ಲಿರುವ ಹೋಂಗಾರ್ಡ್ ಗಳು ಕರ್ತವ್ಯ ನಿರ್ವಹಿಸುತ್ತಿರುವುದುರಿಂದ ಅವರ ಹಿತದೃಷ್ಟಿಯಿಂದ ಇಲ್ಲಿನ ಆರಕ್ಷಕ ಉಪನಿರೀಕ್ಷಕ ಪ್ರಕಾಶ್ ದೇವಾಡಿ ಒಂದು ಉತ್ತಮ ನಿರ್ಧಾರಕ್ಕೆ ಬಂದಿದ್ದಾರೆ. ಪೊಲೀಸರಿಂದಲೇ ಗಂಜಿ ಚಟ್ನಿ ವ್ಯವಸ್ಥೆ ಮಾಡಿಸಿದ್ದಾರೆ. 20 ರೂ ಕೊಟ್ಟರೆ ಸಾಕು ಪೊಲೀಸರಿಗೆ ಹೊಟ್ಟೆ ತುಂಬ ಗಂಜಿ ಚಟ್ನಿ ಸಿಗುತ್ತದೆ. ಇದೇ ಮೊತ್ತದಲ್ಲಿ ಒಂದು ಲೋಟ ಟಿ ಕೂಡಾ ಲಭ್ಯವಿದೆ. ವಿಶೇಷವೆಂದರೆ ಸ್ವತಃ ಠಾಣಾಧಿಕಾರಿಯವರ ಇವರೊಟ್ಟಿಗೆ ಸಹಭೋಜನ ಮಾಡಿ ಉಳಿತಾಯದ ಪ್ರೇರಣೆ ನೀಡುತ್ತಾರೆ. ನೈತಿಕ ಸ್ಥೈರ್ಯ ತುಂಬುತ್ತಾರೆ. ಇವರೊಂದಿಗೆ ಹೋಂಗಾರ್ಡ್ ಗಳು, ಪೊಲೀಸರು ಸೇರಿದಂತೆ ಒಟ್ಟು 25 ಕ್ಕೂ ಹೆಚ್ಚು ಸಿಬ್ಬಂದಿಗಳು ಗಂಜಿ ಊಟಕ್ಕೆ ಮೊರೆ ಹೋಗುತ್ತಾರೆ. ಇದೊಂದು ಉತ್ತಮ ಬೆಳವಣಿಗೆ, ಮಾದರಿ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಮುಖ್ಯವಾಗಿ ಪೋಲೀಸ್ ಸಿಬಂದಿಗಳ ಕೊರತೆ ಇದೆ, ಕ್ಲಿಷ್ಟಕರ ಪರಿಸ್ಥಿಯಲ್ಲಿ ತುಂಬಾ ಕಷ್ಟವಾಗುತ್ತಿದೆ. ಈಗ ಹೋಂಗಾರ್ಡ್ ಗನ್ನು ನೇಮಿಸಿಕೊಂಡು ಸುಧಾರಿಸಲಾಗುತ್ತಿದೆ. ಶೀಘ್ರದಲ್ಲಿ ಪೋಲೀಸ್ ಸಿಬಂದಿಗಳ ನೇಮಕವಾಗಲಿದೆ ಎನ್ನುವ ಆಶಾಭಾವನೆ ಇದೆ. ಇನ್ನು ಕಟ್ಟಡ ಸೋರಿಕೆಯಿಂದಾಗಿ ಕಡತಗಳಿಗೆ ಹಾನಿಯಾಗುತ್ತಿದೆ. ಠಾಣಾ ಕಟ್ಟಡದ ಮೇಲೆ ಶೀಟು ಹೊದಿಸಲು ಚಿಂತನೆ ಇದೆ ಎಂದು ಆರಕ್ಷಕ ಉಪನಿರೀಕ್ಷಕರು ಪ್ರಕಾಶ್ ದೇವಾಡಿಗ ತಿಳಿಸಿದ್ದಾರೆ.