ಜಿಲ್ಲೆಯಲ್ಲಿ ಶಾಂತಿ ಕದಡಲು ದುಷ್ಕರ್ಮಿಗಳ ಯತ್ನ: ಕಿಡಿಗೇಡಿಗಳ ಬಂಧನಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.13   ಸಿಎಎ, ಎನ್‍ಆರ್ ಸಿ ಮತ್ತು ಎನ್‍ಪಿಆರ್ ವಿರೋಧಿಸಿ ಈಗಾಗಲೇ ದೇಶದಾದ್ಯಂತ ಹೋರಾಟವು ತೀವ್ರಗೊಳ್ಳುತ್ತಿದೆ. ಈ ಪ್ರಯುಕ್ತ ದ.ಕ ಜಿಲ್ಲೆಯ ದೇರಳಕಟ್ಟೆಯಲ್ಲಿ ನಿನ್ನೆ ನಡೆದ ಬೃಹತ್ ಪ್ರತಿಭಟನೆಯ ಬಳಿಕ ಕುರ್ಚಿಗಳನ್ನು ತುಂಬಿದ ಲಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಈ ದುಷ್ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಎ.ಕೆ ಅಶ್ರಫ್ ತೀವ್ರವಾಗಿ ಖಂಡಿಸಿದ್ದಾರೆ.


ದೇರಳಕಟ್ಟೆಯಲ್ಲಿ ನಿನ್ನೆ ನಡೆದ ಪ್ರತಿಭಟನಾ ಸಭೆಯಲ್ಲಿ ಅಪಾರ ಸಂಖ್ಯೆಯ ಸರ್ವಧರ್ಮೀಯ ಸಮುದಾಯದ ಜನರು ಸೇರಿದ್ದರು. ಈ ಜನಸ್ತೋಮವನ್ನು ಕಂಡು ಸಹಿಸದ ಕಿಡಿಗೇಡಿಗಳು ಜಿಲ್ಲೆಯ ಶಾಂತಿ ಕದಡುವ ಪ್ರಯತ್ನವಾಗಿ ಮಧ್ಯರಾತ್ರಿ ವೇಳೆಯಲ್ಲಿ ಸಭೆಗೆ ತಂದ ಕುರ್ಚಿ ತುಂಬಿದ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರಿಂದ ಲಾರಿಯೊಂದಿಗೆ ತುಂಬಿಸಿದ ಕುರ್ಚಿ ಮತ್ತು ಆಸನ ಸಲಕರಣೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು ಲಕ್ಷಾಂತರ ರೂಪಾಯಿಯ ಸೊತ್ತು ನಾಶವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕಳೆದ ಡಿಸೆಂಬರ್ 19ರಂದು ನಡೆದ ಗೋಲಿಬಾರ್ ಘಟನೆ ಮತ್ತು ಎರಡು ದಿನಗಳ ಕಫ್ರ್ಯೂನಿಂದ ಜಿಲ್ಲೆಯ ಜನತೆ ತತ್ತರಿಸಿದ್ದು ಈ ಘಟನೆಯು ಮನಸ್ಸಿನಿಂದ ಮಾಸುವ ಮುನ್ನವೇ ದುಷ್ಕರ್ಮಿಗಳು ಮತ್ತೆ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣವನ್ನು ನಿರ್ಮಿಸಿದ್ದಾರೆ. ಆದ್ದರಿಂದ ದ.ಕ ಜಿಲ್ಲೆಯಲ್ಲಿ ಗಲಭೆಯ ವಾತಾವರಣ ಸೃಷ್ಟಿಸಿ ಶಾಂತಿ ಕದಡುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಇದೇ ಸಂದರ್ಭದಲ್ಲ್ಲಿ ಅವರು ಆಗ್ರಹಿಸಿದ್ದಾರೆ.

Also Read  ವಿಟ್ಲ: ಕೇರಳಕ್ಕೆ ಅಕ್ರಮ ಗೋಸಾಗಾಟ..! ➤ ಪಿಕಪ್‌ ತಡೆದು ಪೊಲೀಸರಿಗೊಪ್ಪಿಸಿದ ಹಿಂ.ಜಾ.ವೇ. ಕಾರ್ಯಕರ್ತರು

Nk Kukke

error: Content is protected !!
Scroll to Top