(ನ್ಯೂಸ್ ಕಡಬ) newskadaba.com ನವದೆಹಲಿ, ಆ.24, ಪರೀಕ್ಷೆಯಲ್ಲಿ ತನಗಿಂತ ಹೆಚ್ಚು ಅಂಕ ಪಡೆದಳು ಎಂಬ ಕಾರಣಕ್ಕೆ 8ನೇ ಕ್ಲಾಸ್ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಯ ನೀರಿನ ಬಾಟಲಿಗೆ ಸೊಳ್ಳೆ ಔಷಧಿ ಬೆರೆಸಿದ ಘಟನೆ ನಡೆದಿದೆ.
ಘಟನೆಯ ಬಳಿಕ ಪೊಲೀಸರಿಗೆ ಹೆದರಿದ ಆರೋಪಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಸದ್ಯ ಆಕೆಯ ಪರಿಸ್ಥಿತಿ ಗಂಭಿರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿರೋ ವಿದ್ಯಾರ್ಥಿನಿ ಸೋಮವಾರದಂದು ತನ್ನ ಕ್ಲಾಸ್‍ಮೇಟ್‍ನ ನೀರಿನ ಬಾಟಲಿಯಲ್ಲಿ ಸೊಳ್ಳೆ ಔಷಧಿ ಬೆರೆಸಿದ್ದಾಳೆ. ನಂತರ ಬಾಲಕಿ ಆ ಬಾಟಲಿಯಿಂದ ನೀರು ಕುಡಿದಿದ್ದು ವಾಂತಿಯಾಗಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾಲಕಿ ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಉಸ್ತುವಾರಿ ಭೂಪೇಂದ್ರ ಸಿಂಗ್ ಹೇಳಿದ್ದಾರೆ.
ಅಂದಾಜು 13-14 ವರ್ಷ ವಯಸ್ಸಿನ ಈ ಇಬ್ಬರು ಹುಡುಗಿಯರು ಒಂದೇ ತರಗತಿಯಲ್ಲಿ ಓದುತ್ತಿದ್ದಾರೆ. ಸಂತ್ರಸ್ತ ಬಾಲಕಿ ತನ್ನ ಬಾಟಲಿಯಿಂದ ನೀರು ಕುಡಿದ ನಂತರ ಏನೋ ಸೊಳ್ಳೆ ಔಷಧಿ ವಾಸನೆ ಬರುತ್ತಿದೆ ಎಂದು ತನ್ನ ಗೆಳತಿಗೆ ಹೇಳಿದ್ದಳು. ನಂತರ ಬಾಲಕಿಯ ಆರೋಗ್ಯದಲ್ಲಿ ಏರುಪೇರಾದಾಗ ಶಾಲೆಯವರು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ನಂತರ ಅವರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.