ನಾಗ ಜಾಗದಲ್ಲಿ ಬನ ಬೇಕೇ; ಗುಡಿ ಏಕೆ? ✍ ಪೇರೂರು ಜಾರು

(ನ್ಯೂಸ್ ಕಡಬ) newskadaba.com, ವಿಶೇಷ ಲೇಖನ, ಜ.11    ಇದು ಕುಪ್ಪೆಪದವು ಎಂಬ ಊರು; ಇಲ್ಲೊಂದು ವಿಚಿತ್ರವಿದೆ. ಒಂದು ಜಾಗವನ್ನು ನಾಗನ ಜಾಗ ಎಂದು ವೈದಿಕರು ಮತ್ತು ಆಸಕ್ತ ಪಡೆ ಘೋಷಿಸಿದೆ. ಆದರೆ ಅಲ್ಲಿ ನಾಗ ಬನ ಬೇಕೆಂದು ಅವರು ಕೇಳುತ್ತಿಲ್ಲ. ಆಲಯ ಜೀರ್ಣೋದ್ಧಾರ ಅವರ ಮಹತ್ಕಾರ್ಯ.

ಈ ಊರ ವಿಶೇಷ
ಗುಪ್ಪೆಯಂತೆ ಒಂದು ಪದವು ಇರುವುದರಿಂದ ಇದು ಕುಪ್ಪೆಪದವು. ಕೆಳಕ್ಕೆ ಹೋದರೆ ಬೊಳಿಯ ಅಂದರೆ ಪಲ್ಗುಣಿ ನದಿಯಿಂದಾಗಿ ಬೊಳ್ಳ (ಪ್ರವಾಹ) ಬರುವ ಆಯಕಟ್ಟಿನ ಜಾಗ. ತುಳುನಾಡಿನ ಎಲ್ಲ ಬೊಳ್ಳದ ಜಾಗಗಳು ಇಂದು ಹೊಯಿಗೆ ಕಳ್ಳರಿಂದಾಗಿ ಹಿಂದಿನ ಕಾಲದ ನೆರೆ ಇಲ್ಲವೇ ಪ್ರವಾಹ ಕಾಣುತ್ತಿಲ್ಲ. ಬೊಳ್ಮಾರ್, ಬೊಳ್ಳೆ, ಬೊಳ್ಜೆ, ಬೊಳ್ವಾಯಿ, ಬೋಳಾರ, ಬೋಳೂರು, ಬೋಳ್ತೇರ್ (ಬೆಳ್ತಂಗಡಿ- ಬೊಳ್ಳ ಏರದ ಜಾಗ), ಬೊಳ್ಳಗಡಿ ಎಂದು ಇಂಥ ನೂರಾರು ಊರುಗಳು ತುಳುನಾಡಿನಲ್ಲಿವೆ. ಬೊಳಿಯದ ಸನಿಹವೇ ಇದೆ ಕಡೆಕಾರ್. ಅಂದರೆ ನದಿಯ ಹೆಜ್ಜೆಯ ನೀರು ನೆಲೆಯ ಪ್ರದೇಶ. ಕಾರ್ ಎಂದರೆ ನೀರಿನ ಕಾಲೂ ಹೌದು, ಕಾರ್ಗಾಲ ಮಳೆ ಕಾಲು ಜಾರಿ ಬೀಳುವ ಕಾಲವೂ ಹೌದು, ಅಂಥ ಕಾರ್ ಮಾಸವೂ ಅಹುದು. ಮಂಗಳೂರು, ಮಲ್ಪೆ ಬಳಿ ಮೊದಲಾದೆಡೆಯೂ ಕಡೆಕಾರ್ ಇವೆ. ಕುಪ್ಪೆ ಪದವಿನಲ್ಲಿ ಇನ್ನು ಕಿಲೆಂಜಾರ್ ಇದೆ. ಇದಕ್ಕೆ ಕಿಲೆಂಜಿ ನೊಣದ ಸಂಬಂಧವಿಲ್ಲದ ಕತೆಯೂ ಇದೆ. ಕೆಲ್ ಎಂದರೆ ತುದಿ, ಅಂಜ ಎಂದರೆ ಮಾರಿ ಬೊಳ್ಳದಲ್ಲಿ ಮಾತ್ರ ನೆರೆ ಬರಬಹುದಾದ ಜಾಗ. ಅರು ಎಂದರೆ ಅಂಚು ಸೇರಿ ಕಿಲೆಂಜಾರ್ ಆಗಿದೆ.
ಇಲ್ಲಿ ಕಲ್ಲಿನ ಕಲ್ಲಾಡಿವರೆಗೆ ಕಟ್ಟೆಮಾರ್, ಆಳದ ಗುಂಡಿಯ ಸಹಿತ ಇತ್ಯಾದಿ ಹತ್ತಾರು ಮರಿ ಪ್ರದೇಶಗಳಿವೆ. ಅದು ಆಚೆಗಿರಲಿ, ಈ ಹಳ್ಳಿಯ ಪದವು ಪ್ರದೇಶವು ಇಂದು ಪೇಟೆಯಾಗಿ ಬೆಳೆದಿದೆ. ಇಲ್ಲೇ ಕಿಲೆಂಜಾರು ಅರಮನೆ ಶಾಲೆಯ ಸಮೀಪ ಈಗ ನಾಗನ ಗುಮ್ಮ ಕಾಡಿದೆ.
ದೇವಿಯ ಗುಡಿಯ ಹಿಂದೆ
ಇಲ್ಲಿನ ಪೇಟೆಯ ಅಂಚಿನಲ್ಲಿ ಒಂದು ಸಣ್ಣ ಮೈದಾನದಂಥ ಜಾಗ. ಇದನ್ನು ನಾಲ್ಕು ದಶಕದ ಹಿಂದೆ ಮುಂಬಯಿಯ ಈಗ ದಿವಂಗತರಾಗಿರುವ ಬಜಪೆ ಮೂಲದ ಎಲ್. ವಿ. ಅಮೀನ್ ಎನ್ನುವವರಿಗೆ ಸ್ಥಳದ ಜೈನರು ಮಾರಿದ್ದಾರೆ. ಇಲ್ಲಿ ಊರವರಿಂದ ಕಟೀಲು ಮೇಳದ ಆಟ ಆಗುತ್ತಿತ್ತಾದ್ದರಿಂದ ನಡುವಿನ ತುಸು ಜಾಗವನ್ನು ಆಲಯಕ್ಕೆ ಕೊಡುಗೆ ಎಂದು ಹಾಕಿದ್ದೇ ಇಂದಿನ ಬಿಕ್ಕಟ್ಟಿಗೆ ಕಾರಣ. ಈ ಊರಿನಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವವರು ಬಿರುವರು, ಸಂಖ್ಯೆಯಲ್ಲಿ ಅನಂತರದವರು ಮುಸ್ಲಿಮರು. ಬಿರುವರನ್ನು ಮುಖ್ಯವಾಗಿ ಎತ್ತಿ ಕಟ್ಟುವ ಕೆಲಸ ಎಂದೋ ಆರಂಭವಾಗಿದೆ. ಬಿರುವರಿಗೆ ಮಾರಿದ ಜಾಗದಿಂದ ಈ ಶೋಷಣೆಯ ಹಿಂದೂ ಬಲೆ ಮತ್ತಷ್ಟು ವಿಸ್ತಾರವಾಗಿದೆ. ಈ ಜಾಗದವರ ಪರವಾಗಿ ಊರಲ್ಲಿರುವ ಪುರುಷೋತ್ತಮ ಪೂಜಾರಿಯವರನ್ನು ಸದಾ ಕಾಡಲು, ಅವರ ಮನೆಗೆ ಕಲ್ಲು ಹೊಡೆದು ಗಾಜು ಒಡೆಯಲು ಎಲ್ಲ ಆದ ಮೇಲೆ ಈಗ ನಿಮ್ಮಿಂದಲೇ ಜೀರ್ಣೋದ್ಧಾರ ಆಗಬೇಕು ಎಂದು ಈಗ ಒಪ್ಪಂದದ ಒತ್ತಡದವರೆಗೆ ಇದರ ಹಿಂದೆ ಹಿಂದೂ ಮನಸುಗಳು ಬಿರುವರನ್ನು ಮಾತ್ರ ಒಂದು ಆಗಲು ಬಿಡುತ್ತಿಲ್ಲ.

Also Read  ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಆಲಯ ಮತ್ತು ಪಾಳಯ
ಇಲ್ಲಿ ಆಟ ನಡೆಯುತ್ತಿದ್ದ ಜಾಗದಲ್ಲಿ ದೇವಿಯ ಗುಡಿಯನ್ನು ಕಟ್ಟಲು ಈ ಜಾಗದ ಬಿರುವರ ಮತ್ತು ಆ ಜನಾಂಗದವರ ಹೆಚ್ಚು ಸಹಕಾರವನ್ನು ಪಡೆಯಲಾಗಿದೆ. ಅಲ್ಲಿ ಮಾಧ್ಯರೊಬ್ಬರನ್ನು ಪೂಜೆಗೆ ನೇಮಿಸುವಲ್ಲೂ ಈ ಜಾಗ ಕೊಂಡ ಬಿಲ್ಲವರ ಸಂಬಂಧಿಯೊಬ್ಬರ ಸಹಕಾರವನ್ನು ಧಾರಾಳವಾಗಿ ಪಡೆಯಲಾಗಿದೆ. ಆಲಯಗಳಿಗೆ ದಲಿತ ಕಲ್ಲು ಹೊರುವ, ಕಲ್ಕುಡ ಕಲ್ಲು ಕೆತ್ತುವ, ಹಿಂದುಳಿದವರೆಲ್ಲ ಕೆಲಸ ಮಾಡಿ ಆಲಯ ಆದ ಮೇಲೆ ಗರ್ಭ ಗುಡಿಯಲ್ಲಿ ದೇವರ ಬಂಧನ; ಅಲ್ಲಿಗೆ ಆ ಜಾಗದವರಿಗಾಗಲಿ, ಅದನ್ನು ಕಟ್ಟಲು ದುಡಿದವರಿಗಾಗಲಿ ಪ್ರವೇಶವಿಲ್ಲ. ಇದನ್ನು ಕಂಡೇ ಕವಿ ಕುವೆಂಪುರವರು ದೇವರು ಸೆರೆಯಾಳ್, ದೇಗುಲ ಸೆರೆಮನೆ, ಕಾವಲು ಪೂಜಾರಿ (ಭಟ್ಟ) ಎಂದರು. ಅರಳಿಹ ಸುಮಗಳ (ಇಲ್ಲಿ ಜನರ ಕೂಡ ಆದೀತು) ಕತ್ತನು ಕೊಯ್ದು, ಕಗ್ಗಲ್ಲಿನ ಕಾರ್ಗತ್ತಲೆಗೊಯ್ದು ಏನು ಮಾಡುವೆ ಎಂದು ಪೂಜಾ ಭಟ್ಟರನ್ನು ಎಚ್ಚರಿಸಿದ್ದಾರೆ. ಕೊನೆಗೆ ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ ವಿಶ್ವ ಪಥಕೆ, ಮನುಜ ಮತಕೆ ಎಂದೂ ಕರೆ ಕೊಟ್ಟಿದ್ದಾರೆ. ಅದರೆ ಸರ್ವಾಂತರ್ಯಾಮಿ ದೇವರು ಇನ್ನೂ ಗರ್ಭ ಗುಡಿಯೊಳಗೇ ಇದ್ದಾನೆ, ಭಟ್ಟರು ಕರೆದರೆ ಮಾತ್ರ ಬಂದು ದಕ್ಷಿಣೆಗೆ ತಕ್ಕ ವರ ಕೊಡುತ್ತಾನೆ ಎಂದು ನಂಬಿದವರು ಎಲ್ಲೆಡೆ ಇದ್ದಾರೆ; ಕುಪ್ಪೆ ಪದವಿನಲ್ಲೂ ಇದ್ದಾರೆ.
ಬೇಲಿ ಕೀಳುವ ಮನ ಮಸಣ
ಈಗ ಈ ಬಿಲ್ಲವ ಕೊಂಡ ಜಾಗದ ಮೂಲ ವಾರಸುದಾರರು ಮುಂಬಯಿಯಲ್ಲಿದ್ದರೆ, ಸಂಬಂಧಿಕರು ಊರಲ್ಲಿದ್ದಾರೆ. ಈ ಆಲಯ ಕಟ್ಟುವಾಗ ಬಿಲ್ಲವನೊಬ್ಬನ ಹೆಸರು ಹೇಳಿ ಅದು ಆತನ ಗೋರಿ ಎಂದು ಗೇಲಿ ಮಾಡಿದವರೂ ಇದ್ದಾರೆ. ಈಗ ಜೀರ್ಣೋದ್ಧಾರದ ಮೂಲ ಉದ್ದೇಶ ಇಡೀ ಜಾಗ ಗುಳುಂ ಮಾಡುವುದು. ಈ ಜಾಗ ಕೊಂಡ ಬಿಲ್ಲವರು ಅದಕ್ಕೆ ಬೇಲಿ ಹಾಕುವಾಗ ಅದನ್ನು ಕಿತ್ತು ಹಾಕಿದ ಹಿಂದೂ ಸೇವಕರಿದ್ದಾರೆ. ಬಿಲ್ಲವ ಹಿಂದೂ ಅಲ್ಲವೋ? ಲಾಭ ಇರುವಾಗ ಲೆಕ್ಕಕ್ಕೆ ಮಾತ್ರ ಹಿಂದೂವೋ? ಇದರ ನಡುವೆ ಕೆಲವು ಆಸಕ್ತ ಹಿತಾಸಕ್ತರ ಮೂಲಕ ಆ ದೇವಾಲಯದಲ್ಲಿ ಪ್ರಶ್ನೆ ಎಲ್ಲ ನಡೆಯಿತು. ಜಾಗದವರಿಗೆ ಮೊದಲ ಮರ್ಯಾದೆ ಸಲ್ಲಬೇಕು ಎಂಬ ಪೂಸಿಯೊಡನೆ, ಇದೆಲ್ಲ ನಾಗನ ಜಾಗ, ಹಾಗಾಗಿ ದೊಡ್ಡ ದೇವಾಲಯ ಆಗಬೇಕು ಎಂದು ನುಡಿಯಾಗಿದೆ. ನಾಗನ ಜಾಗವಾದರೆ ಅಲ್ಲಿ ನಾಗಬನ ಇರಬೇಕು; ದೇವಸ್ಥಾನ ಏಕೆ? ಅವೆಲ್ಲ ನಂಬಿಕೆಯ ಪ್ರಶ್ನೆ ಎಂದರೆ ತಪ್ಪೇನೂ ಅಲ್ಲ. ಆದರೆ ಹಾಗೆ ಕೇಳುವವನು ದೇಶದ್ರೋಹಿ ಎಂಬ ಉಚಿತ ಲೇಬಲ್ ಹಚ್ಚಲು ಈಗ ಜನ ಇರುವುದರಿಂದ ಕಷ್ಟ ಕಷ್ಟ! ಭಾರತ ದೇಶದಲ್ಲಿ ಕೆಲವರು 36 ಮಹಡಿಯವರೆಗಿನ ಬಹು ಮಹಡಿ ಮನೆ ಹೊಂದಿದ್ದಾರೆ, ಕೆಲವರು ಡಜನ್‍ಗಟ್ಟಲೆ ಮನೆಗಳನ್ನು ಹೊಂದಿದ್ದಾರೆ ಮತ್ತೂ ಕೆಲವರು ಸರ್ವಜ್ಞನಂದಂತೆ ಸಾಲದ ಮನೆ ಹೊಂದಿ ಸಾಲದ ಹಾಲೋಗರ ಉಂಡು, ಈಗ ಕಿಬ್ಬದಿಯ ಕೀಲು ಮುರಿದಂತಾಗಿದ್ದಾರೆ. ಮತ್ತೆ ಕೆಲವರದು ದಾರಾವಿ ಕೊಳಚೆ ಗುಡಿಸಲು, ಮತ್ತೆ ಕೆಲವರದು ಕಾಡಿನ ತಡಸಲು, ಇನ್ನೂ ಕೆಲವರದು ಬಾಡಿಗೆ ಮನೆ, ಮತ್ತೆ 10 ಕೋಟಿಗೂ ಹೆಚ್ಚು ಜನರಿಗೆ ಮನೆಯೇ ಇಲ್ಲ. ಇಂಥ ಭಾರತದಲ್ಲಿ ದೇವರಿಗೆ ಜನರನ್ನು ಸುಲಿದು ಭವ್ಯ ಆಲಯ (ಮನೆ) ಕಟ್ಟಿ ಕೊಡುವವರಿಗೇನೂ ಕೊರತೆಯಿಲ್ಲ. ದೇವನೊಬ್ಬ ಇರುವ ಅವನೆಲ್ಲ ನೋಡುತ್ತಿರುವ! ಏನನ್ನು ನೋಡುತ್ತಿರು ಎಂದು ನನಗಂತೂ ಗೊತ್ತಿಲ್ಲ. ಕಳ್ಳ ಖದೀಮರ ಹಣ, ಕಿರೀಟ, ಹಾರ ತುರಾಯಿ ಒಪ್ಪಿಕೊಳ್ಳುವ ಅವನು ಏನು ನೋಡುತ್ತಿರುವ? ಹರಕೆಯ ಕುರಿಯನ್ನೋ, ಇಷ್ಟೆಲ್ಲ ಅನ್ಯಾಯ ನೋಡುವುದು ಸರಿಯಲ್ಲ ಎಂದು ಕಣ್ಣು ಮುಚ್ಚಿಕೊಂಡು ನಿದ್ರಿಸುತ್ತಿರುವನೇ? ಏಕೆಂದರೆ ಎಲ್ಲ ಆಲಯಗಳಲ್ಲಿ ಇಂದೆಲ್ಲ ಸುಪ್ರಭಾತ ಹಾಕಿ ದೇವರನ್ನು ಎಬ್ಬಿಸುತ್ತಾರೆ. ಎದ್ದು ಅಷ್ಟೇ ಬೇಗ ದೇವರು ಮಲಗಿ ಬಿಡುತ್ತಾನೆಯೇ?

Also Read  ➤➤ ವಿಶೇಷ ಲೇಖನ ಉಗ್ಗುವಿಕೆ ✍️ ಡಾ. ಮುರಲೀ ಮೋಹನ ಚೂಂತಾರು

✍ ಪೇರೂರು ಜಾರು

 

error: Content is protected !!
Scroll to Top