ಸ್ವಚ್ಚತೆ ಕಾಪಾಡಿಕೊಂಡು ವ್ಯಾಪಾರ ನಡೆಸಬೇಕು – ಆಯುಕ್ತ ಅಜಿತ್ ಕುಮಾರ್ ಹೆಗ್ಡೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.10  ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು, ಟ್ರಾಫಿಕ್‍ಗಳಿಗೆ ತೊಂದರೆ ನೀಡದೆ ಯಾವುದೇ ದೂರು ಬಾರದ ಹಾಗೆ ವ್ಯವಸ್ಥಿತವಾಗಿ ಬೀದಿ ವ್ಯಾಪಾರಿಗಳು ವ್ಯಾಪಾರ ನಡೆಸಿಕೊಂಡು, ಸುವ್ಯವಸ್ಥೆಯನ್ನು  ಕಾಪಾಡಿಕೊಂಡು ವ್ಯಾಪಾರ ನಡೆಸಬೇಕು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ  ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಹೇಳಿದರು.


ಗುರುವಾರ ನಗರದ ಪುರಭವನದಲ್ಲಿ ನಡೆದ  ಮಂಗಳೂರು ಮಹಾನಗರಪಾಲಿಕೆಯ ಬೀದಿ ಬದಿ ವ್ಯಾಪಾರಸ್ಥರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಸರಕಾರಿ ಸವಲತ್ತುಗಳ ಅರಿವು ಕಾರ್ಯಕ್ರಮದಲ್ಲಿ ಮಾತಾಡಿದರು. ಆರೋಗ್ಯ ಎಂಬುದು ಪ್ರತಿಯೊಬ್ಬರಿಗೂ ಅತೀ ಮುಖ್ಯವಾಗಿದ್ದು, ಆರೋಗ್ಯ ಉತ್ತಮವಾಗಿರಲು, ಆರೋಗ್ಯವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಬೀದಿಬದಿ ದುಡಿಯುವ ಕಾರ್ಮಿಕ/ ವ್ಯಾಪಾರಸ್ಥರಿಗೆ  ಹಲವು ಯೋಜನೆಗಳನ್ನು ನೀಡುತ್ತಿದೆ. ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸಮಾಜದಲ್ಲಿ ನಮ್ಮ ಸುತ್ತಮುತ್ತ ಬಡತನ ಇರುವಾಗ, ಅವರ ಹಸಿವಿನ ನೋವು ನೋಡುವಾಗ  ನಮಗೆ ಪಾಪಪ್ರಜ್ಞೆ ಕಾಡುತ್ತದೆ. ಸಮಾಜದಲ್ಲಿನ  ಬಡತನ ನಿರ್ಮೂಲನೆಯಾಬೇಕು, ಸಮಾನತೆಯಿಂದ ಬದುಕಬೇಕು, ಮುಂದಿನ ದಿನಗಳಲ್ಲಿ ಮಹಾನಗರಪಾಲಿಕೆಯಿಂದ ಬೀದಿ ಬದಿ ವ್ಯಾಪಾರಸ್ಥರಿಗೆ  ಇಂತಹ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು. ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರ ಸಂಘದಲ್ಲಿ ಯಾವುದೇ ಚುಣಾವಣೆ ನಡೆಯದೆ ಅವಿರೋಧ ಆಯ್ಕೆ ಮಾಡಲಾಗಿದ್ದು, ಈ ಕಾರಣಕ್ಕೆ ಬೀದಿ ಬದಿ ವ್ಯಾಪಾರಸ್ಥರ ಸಂಘಕ್ಕೆ ಆಯುಕ್ತರು ಅಭಿನಂದನೆಯನ್ನು ತಿಳಿಸಿದರು. ರಾಜ್ಯದಲ್ಲಿ ಮೊದಲ ಬಾರಿಗೆ ದ.ಕ ಜಿಲ್ಲೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಮಾರಾಟ ಪ್ರಮಾಣ ಪತ್ರಗಳನ್ನು ಮಾಡಲಾಗಿದ್ದು, ಒಟ್ಟು 308 ಪ್ರಮಾಣ ಪತ್ರಗಳಲ್ಲಿ ಕೆಲವು ಪ್ರಮಾಣ ಪತ್ರ ಹಾಗೂ ವ್ಯಾಪಾರಸ್ಥರ ಗುರುತಿನ ಚೀಟಿಯನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಉಪ ಆಯುಕ್ತ ಸಂತೋಷ್ ಕುಮಾರ್, ಜಿಲ್ಲಾ ಕಾರ್ಮಿಕ ಇಲಾಖೆ ಕಾರ್ಮಿಕ ಅಧಿಕಾರಿ ವಿಲ್ಮಾ, ಕೆ.ಎಂ.ಸಿ ಉಪ ವೈದ್ಯಕೀಯ ಅಧೀಕ್ಷಕ ದೀಪಕ್ ಪಡಿ, ಕೇಂದ್ರ ಕಾರ್ಮಿಕ ಇಲಾಖೆ ಇಎಸ್‍ಐ ವೈದ್ಯಾಧಿಕಾರಿ ಡಾ. ಭಾಗ್ಯಲಕ್ಷ್ಮೀ, ಜಿಲ್ಲಾ ಟಿಬಿ ಅಧಿಕಾರಿ ಡಾ, ಬದ್ರುದ್ದೀನ್,  ಜಿಲ್ಲಾ ಆಯುಷ್ಮಾನ್ ಭಾರತ್ ನೋಡಲ್ ಅಧಿಕಾರಿ ಡಾ.ರತ್ನಾಕರ್, ಡಾ. ನವೀನ್,  ಜಿಲ್ಲಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹಮ್ಮದ್ ಮುಸ್ತಫಾ ಉಪಸ್ಥಿತರಿದ್ದರು.

Also Read  ನೆಲ್ಯಾಡಿ: ಮತ್ತೆ ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ

error: Content is protected !!
Scroll to Top