(ನ್ಯೂಸ್ ಕಡಬ) newskadaba.com, ಮಂಗಳೂರು, ಜ.8 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪೈಕಿ ಅತ್ಯುತ್ತಮ ಸೇವೆಗೈದ/ಸಾಧನೆಗೈದ ನಾಡಿನ ಜನತೆಯ ಮುಖದಲ್ಲಿ ಮುಗಳ್ನಗೆ ತಂದು ಸರಕಾರಿ ಕೆಲಸದಲ್ಲಿ ವಿನೂತನ ಪದ್ದತಿ, ನಾಗರಿಕ ಸ್ನೇಹಿ, ಗುಣಾತ್ಮಕ, ಭ್ರಷ್ಟಾಚಾರ ರಹಿತ ಕಾರ್ಯವೆಸಗಿದ ಅಧಿಕಾರಿ/ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡುವ ಬಗ್ಗೆ ಸರ್ಕಾರ ಯೋಜನೆಯನ್ನು ರೂಪಿಸಿದೆ. 2019-20ನೇ ಸಾಲಿನ ಜಿಲ್ಲಾವಾರು, ಇಲಾಖಾವಾರು ಮತ್ತು ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಅತ್ಯುನ್ನತ ಸೇವೆ ಸಲ್ಲಿಸಿದ/ಸಾಧನೆ ಮಾಡಿದ ರಾಜ್ಯ ಸರ್ಕಾರದ ಅರ್ಹ ಅಧಿಕಾರಿ/ಸಿಬ್ಬಂದಿಗಳಿಗೆ ಸರ್ವೋತ್ತಮಸೇವಾ ಪ್ರಶಸ್ತಿ – 2019ನ್ನು ಜನವರಿ 26 ರಂದು ನೀಡುವ ಕುರಿತು ಸರ್ಕಾರ ನಿರ್ದೇಶಿಸಿದೆ.
ನಾಮನಿರ್ದೇಶಕರನ್ನು ಆಯ್ಕೆ ಮಾಡಲು ಮಾರ್ಗಸೂಚಿಗಳು ಇಂತಿವೆ: ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಯಾವ ಮಾದರಿಯಲ್ಲಿ ಪ್ರಶಸ್ತಿಯನ್ನು ನೀಡಲಾಗುವುದೋ ಅದೇ ಮಾನದಂಡ ಮಾದರಿಯನ್ನು ಅನುಸರಿಸಿ ಪ್ರಶಸ್ತಿಯನ್ನು ನೀಡಲಾಗುವುದು. ಗ್ರೂಪ್-1, ಗ್ರೂಪ್-2, ಗ್ರೂಪ್-ಸಿ, ಮತ್ತು ಗ್ರೂಪ್-ಡಿ ನೌಕರರಿಗೆ ಜಿಲ್ಲಾ ಮಟ್ಟದಲ್ಲಿ ಒಟ್ಟು ಆರು ಅರ್ಹ ಜನರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ, ಗೃಹ ಇಲಾಖೆ ಮತ್ತು ಶಿಕ್ಷಣ ಇಲಾಖೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಇಲಾಖೆಗಳು ಮತ್ತು ಅದರ ಲಿಪಿಕ ಸಿಬ್ಬಂದಿ ವರ್ಗವು ಈ ಪ್ರಶಸ್ತಿ ಯೋಜನೆಯಲ್ಲಿ ಸೇರಿರುತ್ತದೆ, ಕನಿಷ್ಟ 5 ವರ್ಷ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ, ಈ ಯೋಜನೆಯು ಭಾರತೀಯ ಸೇವಾ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ. ಜಿಲ್ಲೆಯಲ್ಲಿರುವ ಅರ್ಹ ರಾಜ್ಯ ಸರಕಾರಿ ಅಧಿಕಾರಿಗಳು/ಸಿಬ್ಬಂದಿಗಳು/ನೌಕರರ ಸೂಕ್ತ ಶಿಫಾರಸ್ಸಿನೊಂದಿಗೆ ಹಾಗೂ ಪೂರಕ ದಾಖಲೆಗಳೊಂದಿಗೆ ನಾಮ ನಿರ್ದೇಶನ ಮಾಡಬೇಕು. ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಶಿಫಾರಸ್ಸು ಮಾಡಲ್ಪಡುವ ಅಧಿಕಾರಿ/ಸಿಬ್ಬಂಧಿಯ ಸಾಧನೆ ಬಗ್ಗೆ ಸ್ಪಷ್ಟವಾಗಿ ಲಗತ್ತಿಸಿದ ನಮೂನೆಯಲ್ಲಿ ನಮೂದಿಸಿ ತಮ್ಮ ಕಚೇರಿ ಮುಖ್ಯಸ್ಥರ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ಜನವರಿ 15 ರೊಳಗೆ ಸಲ್ಲಿಸಬೇಕು.
ಪ್ರಶಸ್ತಿ ವಿವರ ಹೀಗಿವೆ: ಜಿಲ್ಲಾವಾರು ಪುರಸ್ಕಾರ ಪ್ರಶಸ್ತಿ, ಪ್ರಶಸ್ತಿಗಳ ಸಂಖ್ಯೆ 10, ಪ್ರಶಸ್ತಿವಾರು ಮೊತ್ತ ರೂ. ಹತ್ತು ಸಾವಿರ, ಒಟ್ಟು ಒಂದು ಲಕ್ಷ ರೂಪಾಯಿ, ಮತ್ತು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ದ.ಕ ಜಿಲ್ಲೆ ಇವರ ಪ್ರಕಟಣೆ ತಿಳಿಸಿದೆ.