(ನ್ಯೂಸ್ ಕಡಬ) newskadaba.com, ಮಂಗಳೂರು, ಜ.8 ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಶ್ವವಿದ್ಯಾನಿಲಯ ಕಾಲೇಜಿನ ಎನ್.ಎಸ್.ಎಸ್, ಮಾನವ ಹಕ್ಕುಗಳ ಸಂಘ, ಮಾನವಿಕ ಸಂಘ ಮತ್ತು ಮಾಧ್ಯಮ ವೇದಿಕೆಯ ಸಹಯೋಗದಲ್ಲಿ ‘ಹದಿಹರೆಯ ಮಾದಕ ವ್ಯಸನ ಮತ್ತು ಕಾನೂನುʼ ಎಂಬ ಕಾನೂನು ಅರಿವು ಕಾರ್ಯಕ್ರಮವನ್ನು ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ, ಅಪರಾಧ ಕೃತ್ಯಗಳ ಹೆಚ್ಚಳಕ್ಕೆ ಮಾನವೀಯ ಮೌಲ್ಯಗಳ ಅಧಃಪತನ ಕಾರಣ. ಇದಕ್ಕೆ ಕಾನೂನು, ಆಯೋಗಗಳು ಪರಿಹಾರವಲ್ಲ. ಜಿಲ್ಲೆಯ 2.5 % ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನದ ದಾಸರಾಗಿದ್ದಾರೆ. ಭಾರತದ ಶಕ್ತಿಯಾದ ಯುವಕರನ್ನು ದುರ್ಬಲರನ್ನಾಗಿಸುವ ಹುನ್ನಾರ ನಡೆಯುತ್ತಿದೆ ಎಂದರು. ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ.ಉದಯಕುಮಾರ್ ಎಂ.ಎ, ವಿದ್ಯೆ- ವಿವೇಕವನ್ನು ಮಸುಕು ಮಾಡುವ ಮಾದಕ ವಸ್ತು ಜಾಲ ಅಪಾಯ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಉದಯಾನಂದ ಎ ಮಾದಕ ವಸ್ತುಗಳ ಜಾಲದಲ್ಲಿ ತೊಡಗುವ ವಿದ್ಯಾರ್ಥಿಗಳಿಗೆ ಕಾನೂನು ವಿನಾಯಿತಿ ನೀಡುವುದಿಲ್ಲ. ಆಳವಾಗಿ ಬೇರು ಬಿಟ್ಟಿರುವ ಈ ಜಾಲದಿಂದ ಮುಕ್ತವಾಗಲು ಜಾಗೃತರಾಗಿರುವುದು ಮನುಷ್ಯತ್ವ ಋಣಾತ್ಮಕತೆಯಿಂದ ಹೊರಬರುವುದು ಮಾತ್ರ ಪರಿಹಾರ ಎಂದರು. ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದ ಅವರು ಮಾದಕ ಜಾಲದ ಕರಾಳ ರೂಪ ಬಿಚ್ಚಿಟ್ಟರು. ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎ.ಜಿ ಗಂಗಾಧರ್, ಎನ್‍ಎಸ್‍ಸಿಡಿಎಫ್ ಅಧ್ಯಕ್ಷ ಗಂಗಾಧರ ಗಾಂಧಿ, ಕಾಲೇಜಿನ ಮಾನವ ಹಕ್ಕುಗಳ ಸಂಘದ ಡಾ. ಲತಾ ಎ. ಪಂಡಿತ್, ಮಾಧ್ಯಮ ವೇದಿಕೆಯ ಡಾ. ಶಾನಿ ಕೆ.ಆರ್, ಮಾನವಿಕ ಸಂಘದ ಡಾ. ಕುಮಾರಸ್ವಾಮಿ, ಎನ್‍ಎಸ್‍ಎಸ್‍ನ ಸಂಯೋಜಕ ಡಾ. ಗಾಯತ್ರಿ ಎನ್, ಡಾ. ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.