(ನ್ಯೂಸ್ ಕಡಬ) newskadaba.com ಉಡುಪಿ, ಆ.23, ಹರ್ನಿಯಾ ಶಸ್ತ್ರಚಿಕಿತ್ಸೆಗೆಂದು ಭಾನುವಾರ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಸ್ವಾಮೀಜಿಗಳು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೆ ವಿಶ್ರಾಂತಿ ಪಡೆದ ಬಳಿಕ ಬುಧವಾರ ಡಿಸ್ಚಾರ್ಜ್ ಆಗಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ್ದಾರೆ.
ಶಿಷ್ಯ ವೃಂದದ ಜೊತೆ ಕಾರಿನಲ್ಲಿ ಆಗಮಿಸಿದ ಸ್ವಾಮೀಜಿ ಮಠದ ಬಡಗು ಮಾಳಿಗೆಯ ಪಕ್ಕದ ಗೆಸ್ಟ್ ಹೌಸಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಆರೋಗ್ಯವಾಗಿದ್ದೇನೆ. ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ನನ್ನನ್ನು ಚೆನ್ನಾಗಿ ನೋಡಿಕೊಂಡರು. ಹೆಚ್ಚು ಮಾತನಾಡಬಾರದೆಂದು ವೈದ್ಯರು ಸಲಹೆ ನೀಡಿದ್ದಾರೆ ಎಂದು ಹೇಳಿದರು.
ಸ್ವಾಮೀಜಿ ಆಪ್ತ ಸಹಾಯಕ, ವಿಷ್ಣು ಮಾತನಾಡಿ, ಇನ್ಫೆಕ್ಷನ್ ಆಗುವ ಸಾಧ್ಯತೆಯಿರುವುದರಿಂದ ಒಂದು ವಾರಗಳ ಕಾಲ ಸ್ವಾಮೀಜಿ ಭಕ್ತರನ್ನು ಕೂಡಾ ಭೇಟಿಯಾಗುವುದಿಲ್ಲ. ಎರಡು ದಿನಕ್ಕೊಮ್ಮೆ ಕೆಎಂಸಿ ವೈದ್ಯರೇ ಮಠಕ್ಕೆ ಆಗಮಿಸಿ ಸ್ವಾಮೀಜಿಯ ಆರೋಗ್ಯ ತಪಾಸಣೆ ಮಾಡಲಿದ್ದಾರೆ ಎಂದು ಹೇಳಿದರು. ಗಂಜಿ ಮತ್ತು ಹಾಲು ಸೇವನೆ ಮಾಡಲು ವೈದ್ಯರು ಸಲಹೆ ನೀಡಿದ್ದಾರೆ. ಆಪರೇಷನ್ ನಂತರ ಎರಡು ಬಗೆಯ ಮಾತ್ರೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.