ಜ.19 ರಿಂದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.1  ಜಿಲ್ಲೆಯಲ್ಲಿ ಜನವರಿ 19 ರಿಂದ 22 ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಹೇಳಿದರು.

Nk Kukke

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 2020-21 ನೇ ಸಾಲಿನ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ 1,49,713 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ನಿವಾಸಿ ಹಾಗೂ ವಲಸೆ ಸೇರಿ 22,80,499 ಜನಸಂಖ್ಯೆಯಿದ್ದು, 4,56,843 ಮನೆಗಳಿವೆ ಎಂದರು. ಸದರಿ ಕಾರ್ಯಕ್ರಮದ ಯಶಸ್ಸಿಗೆ 921 ಲಸಿಕಾ ಕೇಂದ್ರ, 31 ಟ್ರಾನ್ಸಿಟ್ ಲಸಿಕಾ ಕೇಂದ್ರ, 6 ಸಂಚಾರಿ ತಂಡ, 3820 ಸಿಬ್ಬಂದಿಯನ್ನು ಲಸಿಕೆ ನೀಡಲು ಹಾಗೂ ಮೇಲ್ವಿಚಾರಕರನ್ನಾಗಿ 187 ಮಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕಾಗಿ 184 ವಾಹನಗಳ ಅವಶ್ಯಕತೆ ಇದೆ ಎಂದ ಅವರು, ಪಲ್ಸ್ ಪೋಲಿಯೋ ಲಸಿಕಾ ಗುಣಮಟ್ಟ ಕಾಪಾಡಲು ಲಸಿಕೆ ಹಾಕುವ 5 ದಿನ ಮುಂಚಿತವಾಗಿ ಮತ್ತು ಕಾರ್ಯಕ್ರಮದ ದಿನಗಳಂದು ಜಿಲ್ಲೆಯಾದ್ಯಂತ ಸತತವಾಗಿ 2 ಗಂಟೆಗಳಿಗಿಂತ ಹೆಚ್ಚು ಕಾಲ ವಿದ್ಯುತ್ ಸ್ಥಗಿತಗೊಳಿಸದಂತೆ ತಮ್ಮ ಅಧೀನ ಕಚೇರಿಗಳಿಗೆ ಸೂಚಿಸಬೇಕೆಂದು ಮೆಸ್ಕಾಂ ಅಧಿಕಾರಿಗೆ ತಿಳಿಸಿದರು. ಲಸಿಕಾ ಕಾರ್ಯಕ್ರಮಕ್ಕೆ ಅಂಗನವಾಡಿ ಕೇಂದ್ರಗಳಲ್ಲಿ ಬೂತ್‍ಗಳನ್ನು ತೆರೆಯಲು ಅಗತ್ಯ ಕ್ರಮವಹಿಸಬೇಕು.  ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಬೇಕು ಹಾಗೂ ಅಂಗನವಾಡಿ ವ್ಯಾಪ್ತಿಯಲ್ಲಿ ಬರುವ ತಾಯಂದಿರಿಗೆ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಬೇಕು. ಎಲ್ಲ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಣೆ ನಡೆಸಬೇಕು  ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ ಅವರು, ನಗರಸಭೆ ವತಿಯಿಂದ ಅಗತ್ಯವಾದ ಕುಡಿಯುವ ನೀರು, ಆಹಾರ, ಸ್ಥಳೀಯ ಸಾರಿಗೆ ಇತ್ಯಾದಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಅವರು ಸೂಚಿಸಿದರು.

Also Read  ಕೊಕ್ಕಡ: ಮಹಿಳೆ ಅನುಮಾನಾಸ್ಪದ ಸಾವು ➤‌ ಪತಿ ಕೊಲೆಗೈದಿರುವ ಶಂಕೆ

ಎಲ್ಲ ಖಾಸಗಿ ನರ್ಸಿಂಗ್ ಹೋಂ ಮಾಲೀಕರು ಮತ್ತು ಮಕ್ಕಳ ತಜ್ಞರು ತಮ್ಮ ಸಂಪರ್ಕಕ್ಕೆ ಬರುವ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕುವಂತೆ ವ್ಯವಸ್ಥೆ ಮಾಡಬೇಕು. ಅಂತೆಯೇ ಜಿಲ್ಲಾ ಶಸ್ತ್ರಚಿಕಿತ್ಸಕರು ತಮ್ಮ ಅಧೀನದಲ್ಲಿ ಬರುವ ಶುಶ್ರೂಷಕ ತರಬೇತಿಯ ವಿದ್ಯಾರ್ಥಿಗಳನ್ನು ಲಸಿಕದಾರರನ್ನಾಗಿ ನಿಯೋಜನೆ ಮಾಡಬೇಕು ಎಂದು ಹೇಳಿದರು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಪೋಲಿಯೋ ಬೂತ್‍ಗಳನ್ನು ತೆರೆಯಲು ಸೂಕ್ತವಾದ ಶಾಲಾ ಕೊಠಡಿಗಳ ವ್ಯವಸ್ಥೆ ಮಾಡಬೇಕು, ಕಾರ್ಯಕ್ರಮದ  ಬಗ್ಗೆ ಎಲ್ಲ ಶಾಲೆಗಳಿಗೆ, ನರ್ಸರಿ ಶಾಲೆಗಳಿಗೆ, ಶಿಶು ಮಂದಿರಗಳಿಗೆ  ಹಾಗೂ  ಶಾಲೆಗಳಲ್ಲಿ ನಡೆಯುವ ಪೋಷಕ-ಶಿಕ್ಷಕ ಸಭೆಯಲ್ಲಿ ಪೋಷಕರಿಗೆ ಮಾಹಿತಿ ನೀಡಬೇಕು ಎಂದು ಎಲ್ಲ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಮಾತನಾಡಿದ ಅವರು 2019 -20ನೇ ಸಾಲಿನಲ್ಲಿ ಇನ್‍ಟೆನ್ಸಿಫೈಡ್ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಎರಡನೇ ಸುತ್ತು ಜನವರಿ 3 ರಿಂದ 13 ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಗುರುತಿಸಲ್ಪಟ್ಟ ಫಲಾನುಭವಿಗಳಿಗೆ ಈ ಅಭಿಯಾನದ ಮೂಲಕ ಲಸಿಕೆಯನ್ನು ನೀಡಲಾಗುವುದು. ಅಭಿಯಾನದಲ್ಲಿ ಮಕ್ಕಳು ಮತ್ತು ಗರ್ಭಿಣಿ ತಾಯಂದಿರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಹಾಗೂ  ಕಾರ್ಯಕ್ರಮ ಯಶಸ್ವಿಗೊಳಿಸಲು ಕರೆ ನೀಡಿದರು. ಸಭೆಯಲ್ಲಿ ಕುಟುಂಬ ಕಲ್ಯಾಣಧಿಕಾರಿ ಡಾ. ಸಿಕಂದರ್ ಪಾಷಾ, ಆರ್ ಸಿಎಚ್ ಅಧಿಕಾರಿ ಡಾ. ರಾಜೇಶ್,  ಪದವಿ ಪೂರ್ವ ಶಿಕ್ಷಣ ಇಲಾಖೆಯ ಇಸುಬು ಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ, ಪ್ರಭಾರ ವೈದ್ಯಕೀಯ ಅಧೀಕ್ಷಕರು ಲೇಡಿಗೋಷನ್ ಆಸ್ಪತ್ರೆ ಡಾ. ಶಕುಂತಲಾ. ಆರೋಗ್ಯಧಿಕಾರಿ ಮಹಾನಗರಪಾಲಿಕೆ ಡಾ.ಮಂಜಯ್ಯ ಶೆಟ್ಟಿ, ಇತರ ಇಲಾಖಾ ಅಧಿಕಾರಿಗಳು, ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು, ನರ್ಸಿಂಗ್ ಕಾಲೇಜುಗಳ ಮುಖ್ಯಸ್ಥರು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Also Read  ಯುವಜನತೆ ಕೌಶಲ್ಯ ಬಳಸಿಕೊಂಡು ಸ್ವ-ಉದ್ಯೋಗ ಮಾಡಲು ಕರೆ

error: Content is protected !!
Scroll to Top