ಅಂಗಡಿ ಜಗಲಿಯಲ್ಲಿ ಆರಂಭವಾದ ಪ್ರಾಥಮಿಕ ಶಾಲೆಗೆ ಇದೀಗ ಬೆಳ್ಳಿ ಹಬ್ಬ ✍ಸದಾನಂದ ಆಲಂಕಾರು

(ನ್ಯೂಸ್ ಕಡಬ) newskadaba.com, ಕಡಬ, ಡಿ.31    ಸಮಾಜಕ್ಕೆ ಒಳಿತಾಗುವ ಕಾರ್ಯಕ್ಕೆ ಹತ್ತು ಹಲವು ವಿಘ್ನಗಳು ಎದುರಾಗುವುದು ಸಹಜ. ಅಂತಹ ಪರಿಸ್ಥಿತಿಯಲ್ಲಿ ಎದೆಗುಂದದೆ ಮುನ್ನುಗ್ಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುವುದನ್ನು ಆಲಂಕಾರು ಶ್ರೀಭಾರತಿ ಹಿರಿಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿ ಸಾಧಿಸಿ ತೋರಿಸಿಕೊಟ್ಟಿದೆ. ಒಂದು ಕಾಲದಲ್ಲಿ ಅಂಗೈಯಗಲ ಜಾಗವಿಲ್ಲದೆ ಅಂಗಡಿ ಜಗಲಿಯಲ್ಲಿ ಆರಂಭವಾದ ಪ್ರಾಥಮಿಕ ಶಾಲೆ ಯಾವಾಗ ಮುಚ್ಚಿ ಬಿಡುತ್ತದೋ ಎಂದು ಛೇಡಿಸುತ್ತಿದ್ದವರಿಗೆ ಇಂದು ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುವುದರ ಮೂಲಕ ಸಮರ್ಪಕವಾಗಿ ಉತ್ತರ ನೀಡಿದೆ. ಇದೀಗ ಬರೋಬ್ಬರಿ 5 ಎಕ್ರೆ ಆಸ್ತಿಯನ್ನು ಸಂಪಾದಿಸಿಕೊಳ್ಳುವುದರ ಮೂಲಕ ಸುಸಜ್ಜಿತ ಕಟ್ಟಡದೊಂದಿಗೆ ಜ.2ರಿಂದ 5ರವರೆಗೆ ಬೆಳ್ಳಿಹಬ್ಬವನ್ನು ಆಚರಿಸಿಲು ಸಿದ್ದಗೊಂಡಿದೆ.

1994-95 ಶ್ರೀಭಾರತಿ ಶಾಲೆಗೆ ಅವಿಷ್ಮರಣೀಯ ವರ್ಷವಾಗಿದೆ. ಶಾಲೆಗೆ ಸ್ವಂತ ಜಾಗ ಹಣದ ಮೂಲವಿರಲಿಲ್ಲ. ಆಲಂಕಾರು, ಮಂಡಲದ ಕುಂತೂರು, ಪೆರಾಬೆ, ಆಲಂಕಾರು, ರಾಮಕುಂಜ, ಹಳೇನೇರಂಕಿ, ಕೊೈಲ ಈ ಆರು ಗ್ರಾಮಗಳ ಜನತೆಯ ವಿಶ್ವಾಸಗಳೇ ಇದಕ್ಕೆ ಆಧಾರವಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಆಲಂಕಾರು ಮಂಡಲದ ಕಾರ್ಯವಾಹಕರಾಗಿದ್ದ ಶಂಕರ ಭಟ್ ನಿಸರ್ಗ, ಮತ್ತು ಸಹ ಕಾರ್ಯವಾಹಕರಾಗಿದ್ದ ಯದುಶ್ರೀ ಆನೆಗುಂಡಿ ಇವರುಗಳ ಪ್ರಯತ್ನ ಹಾಗೂ ಕಲ್ಲಡ್ಕ ಪ್ರಭಾರಕ ಭಟ್‍ರವರ ಮಾರ್ಗದರ್ಶನದಲ್ಲಿ ಈ ಶಾಲೆಯು ಪ್ರಾರಂಭವಾಯಿತು. 1ನೇ ತರಗತಿಯನ್ನು ಕಕ್ವೆ ತಿಮ್ಮಪ್ಪ ಗೌಡ ಮಗ ಮಹಾಬಲ ಗೌಡರ ಹೊಟೇಲಿನ ಜಗಲಿಯಲ್ಲಿ ಪ್ರಾರಂಭಿಸುವ ಮೂಲಕ ಶಾಲಾ ಇತಿಹಾಸಕ್ಕೆ ಮುನ್ನುಡಿ ಬರೆಯಲಾಗಿತ್ತು. ಪ್ರಾರಂಭದ ಶಿಕ್ಷಕರಾಗಿ ಶರ್ಮಿಲಾ ಆನೆಗುಂಡಿ ಮತ್ತು ವಿದ್ಯಾ ಕೋಡಿಲ, ಭವಾನಿ ಕೊಂತೂರು, ಉಜ್ವಲ ಮನವಳಿಕೆ ಕಾರ್ಯ ನಿರ್ವಹಿಸಿದರು. ಹೀಗೆ ಆರಂಭವಾದ ಶಾಲೆ ತನ್ನ ಯಶಸ್ವಿನ ಹೆಜ್ಜೆಯನ್ನು ಮುಂದಿಡುತ್ತ 1997-98ನೇ ಸಾಲಿನಲ್ಲಿ 90 ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತು. 1ರಿಂದ 4ತರಗತಿಗಳು ಆಲಂಕಾರು ಯುವಕ ಮಂಡಲದ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಮುಂದುವರಿಯಿತು. ದುರ್ಗಾಂಬ ಪ್ರೌಢ ಶಾಲೆಯ ಗಂಟೆನಾದ ಭಾರತಿ ಶಾಲೆಯ ಸಮಯ ಸರಣಿ. ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಹೊರವಲಯದ ಗುಡ್ಡಗಳು ಶೌಚಾಲಯ. ಶಿಕ್ಷಕರೇ ಸ್ವಚ್ಚತಾ ಪ್ರಮುಖರು. ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಬುತ್ತಿ ಊಟವೇ ಅನ್ನ ಯಜ್ಞ. ಮಕ್ಕಳ ಮನರಂಜನೆಗೆ ದುರ್ಗಾಂಬ ಪ್ರೌಢ ಶಾಲೆಯ ವೇದಿಕೆಯೇ ಆಸರೆ. 4 ವರ್ಷದವರೆಗೆ ತೂಗಡಿಸುವ ಪ್ಲಾಸ್ಟಿಕ್ ಬೋರ್ಡ್ ಯುವಕ ಮಂಡಲದ ಒಂದು ಮೇಜು, ಒಂದು ಚಿಕ್ಕ ಕಪಾಟು, 4-5 ರಟ್ಟಿನ ಪೆಟ್ಟಿಗೆ, ಒಟ್ಟು 10 ಚಿಕ್ಕ ಬೆಂಚುಗಳಲ್ಲಿ ಶಿಕ್ಷಣ ಪೂರೈಕೆ. ಯಾವುದೇ ಚಾರ್ಟ್, ಭಾವಚಿತ್ರ ಭೂಪಟ, ಅಂಗಳ, ಕ್ರೀಡಾಂಗಣಗಳಿಲ್ಲ. ಬಾಗಿಲುಗಳಿಲ್ಲದ ಕಿಟಕಿ, ವಿದ್ಯುತ್ ಕಾಣದ ಪಾರಿವಾಳ ವಾಸದ ಕೊಠಡಿಯಲ್ಲಿ ಪರಾವಲಂಬಿಯಾಗಿ 4 ವರ್ಷ ಸ್ಲೇಟು – ಕಡ್ಡಿಯಲ್ಲೇ ಭಾರತಿ ಶಾಲೆಯ ಬೆಳವಣಿಗೆ ನಡೆಯಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಲ್ಲಡ್ಕ ಪ್ರಭಾಕರ ಭಟ್‍ರವರ ಉಪಸ್ಥಿತಿಯಲ್ಲಿ ಹೊಸ ಆಡಳಿತ ಮಂಡಳಿ ರಚಿಸಲಾಯಿತು. ಶಕುಂತಳಾ ಶೆಟ್ಟಿಯವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಈಶ್ವರ ಗೌಡರನ್ನು ಸಂಚಾಲಕರಾಗಿ ಶ್ರೀಧರ ಬಲ್ಯಾಯರನ್ನು ಕೋಶಾಧಿಕಾರಿಯಾಗಿ ಆಯ್ಕೆ ಮಾಡಿ ಹಲವು ಸದಸ್ಯರೊಳಗೊಂಡ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಆದರೆ ಶಾಲೆಗೆ ಸ್ವಂತ ಜಾಗವಿಲ್ಲದ ಕಾರಣ ಆರಂಭಿಕ ಕೆಲ ವರ್ಷಗಳಲ್ಲಿ ಹಲವು ತೊಡಕುಗಳು ಎದುರಾದವು. ಈ ಎಲ್ಲಾ ಸಮಸ್ಯೆಗಳನ್ನು ಆಲಂಕಾರು ಗ್ರಾಮ ಪಂಚಾಯತ್‍ನ ಅಧ್ಯಕ್ಷ ಕಕ್ವೆ ದಾಮೋದರ ಗೌಡರವರ ನೇತೃತ್ವದ ಆಡಳಿತ ಮಂಡಳಿ ನಿವಾರಿಸಿತ್ತು. ಶಾಲೆಗಾಗಿ ಪಂಚಾಯತ್ ಜಾಗವನ್ನು ನೀಡಿತು. ಪರಿಣಾಮ 1998 ಜೂನ್ 1ರಂದು ಈಗಿನ ಕಟ್ಟಡದ ಪ್ರಾರಂಭಿಕ ಕೊಠಡಿಯಲ್ಲಿ ತರಗತಿ ಆರಂಭಿಸುವುದರೊಂದಿಗೆ 2003-04ನೇ ಸಾಲಿನಲ್ಲಿ ದಶಮಾನೋತ್ಸವ ಆಚರಿಸಿಕೊಂಡಿತು. ಇದರ ಸವಿನೆನಪಿಗಾಗಿ ಎರಡು ಕೊಠಡಿಗಳ ರಚನೆ ಶೌಚಾಲಯ, ಆಟದ ಮೈದಾನ ರಚಿಸಲಾಯಿತು. ಶ್ರೀರಾಘವೇಶ್ವರ ಭಾರತಿ ಮಹಾಸ್ವಾಮಿಗಳ ಆರ್ಶೀವಾದದಿಂದ ಹವ್ಯಕ ಪರಿಷತ್‍ನ ವತಿಯಿಂದ ಮಧ್ಯಾಹ್ನದ ಬೋಜನ ವ್ಯವಸ್ಥೆ ಅನ್ನಯಜ್ಞ ಪ್ರಾರಂಭವಾಯಿತು. ಈಗಿನ ಆಡಳಿತ ಮಂಡಳಿಯ ಅಧ್ಯಕ್ಷ ಸುರೇಶ್ ಕುಮಾರ್ ಕೂಡೂರು ಹಾಗೂ ಸರ್ವ ಸದಸ್ಯರ ಅವಿರತ ಶ್ರಮದಿಂದಾಗಿ ಮಹತ್ತರ ಕಾಮಗಾರಿಗಳು ನಡೆದಿವೆ. ಅಡುಗೆ ಕೊಠಡಿ, ಎಲ್ಲಾ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಕನ್ನಡದೊಂದಿಗೆ ಸ್ಪೋಕನ್ ಇಂಗ್ಲೀಷ್, ಪ್ರತೀ ತರಗತಿಗೆ ಗ್ರಂಥಾಲಯ, ಅಧ್ಯಾಪಕರ ಕೊಠಡಿ, ಪ್ರಾರ್ಥನೆ ಹಾಗೂ ಕಾರ್ಯಕ್ರಮಗಳಿಗಾಗಿ ದೊಡ್ಡ ಸಭಾಭವನ, ಸ್ವಂತ ನೀರಿನ ವ್ಯವಸ್ಥೆ, ಶಿಶು ಮಂದಿರ ಕೊಠಡಿಗಳನ್ನು ರಚಿಸಲಾಗಿದೆ. ವ್ಯವಸ್ಥಿತ ಪಿಠೋಪಕರಣಗಳು, ದೃಶ್ಯ ಮಾಧ್ಯಮಗಳನ್ನು ಅಳವಡಿಸಲಾಗಿದೆ.

10ಸಾವಿರಕ್ಕೂ ಅಧಿಕ ಜನಸಂಖ್ಯೆ ಸೇರುವ ನಿರೀಕ್ಷೆಯಲಿದ್ದೇವೆ.- ಸುರೇಶ್ ಕುಮಾರ್ ಕೂಡೂರು
ಇದೀಗ 320 ವಿದ್ಯಾರ್ಥಿಗಳ ಸಂಖ್ಯಾ ಬಲದೊಂದಿಗೆ ಹಾಗೂ ಎರಡು ಶಾಲಾ ಬಸ್‍ನ ವ್ಯವಸ್ಥೆಯೊಂದಿಗೆ ಶಾಲೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. 2018ರಲ್ಲಿ ಕೃಷ್ಣಕುಮಾರ್‍ವರ ಅಧ್ಯಕ್ಷತೆಯಲ್ಲಿ 25ನೇ ವರ್ಷಾಚರಣೆಯ ಶ್ರೀಭಾರತಿ ಶಾಲಾ ರಜತ ಸಂಭ್ರಮ ಸಮಿತಿ ರಚಿಸಲಾಗಿದೆ. ರಜತ ಸಂಭ್ರಮದ ಸವಿನೆನಪಿಗಾಗಿ ಪ್ರಥಮ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವವನ್ನು ನಡೆಸಲಿದ್ದೇವೆ. ಜೊತೆಗೆ ವ್ಯವಸ್ಥಿತ ಆಡಳಿತ ಕಚೇರಿ, ಶಿಕ್ಷಕರ ಕೊಠಡಿ 700 ಆಸನದ ಸಭಾಭವನ, ಸುಸಜ್ಜಿತ ಅಡುಗೆ ಕೊಠಡಿ ಮತ್ತು ಭೋಜನ ಶಾಲೆ, ವ್ಯವಸ್ಥಿತ ಶೌಚಾಲಯ, ಸ್ನಾನಗೃಹ ಏಕಕಾಲದಲ್ಲಿ ಇವುಗಳ ಲೋಕಾರ್ಪಣೆ ನಡೆಯಲಿದೆ. ಇವುಗಳಿಗೆ ಗ್ರಾನೈಟ್ ಟೈಲ್ಸ್ ಅಳವಡಿಸಿದ್ದವಾಗಿದ್ದು ಸೌಂಡ್ಸ್ ಹಾಗೂ ವಿದ್ಯುತ್‍ದೀಪದ ವ್ಯವಸ್ಥೆ, ಮಕ್ಕಳಿಗೆ ಕೈ ತೊಳೆಯುವ ವ್ಯವಸ್ಥೆ. ಶಾಲಾ ಕಂಪೌಂಡು ಮುಖದ್ವಾರ ನಿರ್ಮಾಣದ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ರಜತ ಸಂಭ್ರಮದ ದಿನಕ್ಕೆ ಈಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ 10ಸಾವಿರಕ್ಕೂ ಅಧಿಕ ಜನಸಂಖ್ಯೆ ಸೇರುವ ನಿರೀಕ್ಷೆಯಲಿದ್ದೇವೆ.
ಶಾಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕನಸಿ ಕೂಸಾಗಿತ್ತು_ ಯದುಶ್ರೀ ಆನೆಗುಂಡಿ ಶಿಕ್ಷಕ
ನಾವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದಾಗ ಸಂಘದ ನೇತೃತ್ವದಲ್ಲೇ ಒಂದು ಶಾಲೆ ಪ್ರಾರಂಭವಾಗಬೇಕು ಎಂಬ ನಮ್ಮ ಕಲ್ಪನೆಗೆ ಕಲ್ಲಡ್ಕ ಪ್ರಬಾಕರ ಭಟ್ ರವರು ಜೀವ ತುಂಬಿದರು. ಪ್ರಾರಂಭದ 4ವರ್ಷಗಳು ಶಾಲೆ ಅತ್ಯಂತ ಏಳು ಬೀಳುಗಳನ್ನು ಕಂಡಂತಹ ವರ್ಷವಾಗಿದೆ. ಶಾಲೆಯ ಪ್ರಾರಂಭದಿಂದ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಪಂಚಮುಖಿ ಶಿಕ್ಷಣದ ವ್ಯವಸ್ಥೆಯುಳ್ಳ ಶಿಕ್ಷಣ ಸಂಸ್ಥೆಯೊಂದರಲ್ಲಿ ನಾನು ನನ್ನ ಅಳಿಲ ಸೇವೆ ನೀಡುತ್ತಿದ್ದೇನೆ. ಸ್ವಯಂ ಸೇವಕರ ಕನಸಿನ ಕೂಸಿಗೆ ಇದೀಗ 25 ವರ್ಷಗಳು ತುಂಬಿರುವುದು ನನ್ನಲ್ಲಿ ಸಂತೃಪ್ತಿಯನ್ನು ತಂದಿದೆ. ಈ ಮೂಲಕ ನಮ್ಮ ಜೀವನದ ಸಾರ್ಥಕತೆಯನ್ನು ಕಂಡುಕೊಂಡಿದ್ದೇವೆ ಎಂದು ಶಿಕ್ಷಕ ಯದುಶ್ರೀ ಆನೆಗುಂಡಿ ಪ್ರತಿಕ್ರಿಯಿಸಿದರು.

error: Content is protected !!

Join the Group

Join WhatsApp Group