ನೂಜಿಬಾಳ್ತಿಲ ಶಾಲೆಯಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ, ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com, ಕಡಬ, ಡಿ.30    ನೂಜಿಬಾಳ್ತಿಲ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಡಿ.28ರಂದು ಶಾಲಾ ವಠಾರದಲ್ಲಿ ನಡೆಯಿತು.ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕರವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳಿಗಾಗಿ ಆಸ್ತಿ ಸಂಪಾದನೆ ಮಾಡುವುದಕ್ಕಿಂತ ಅವರನ್ನೇ ಆಸ್ತಿಯನ್ನಾಗಿ ಬೆಳೆಸಿ. ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರೊಂದಿಗೆ ಅವರ ಇಚ್ಚಾನುಸಾರ ಸಾಧನೆಗೆ ಸಹಕರಿಸಬೇಕು. ಮಕ್ಕಳನ್ನು ಬರೇ ಪಠ್ಯ ಚಟುವಟಿಕೆಗಳಲ್ಲಿ ಮಾತ್ರ ತೊಡಗಿಸಿಕೊಳ್ಳದೆ, ನಮಗೆ ಅನ್ನ ನೀಡುವ ಕೃಷಿಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಪುತ್ತೂರು ಎಸ್.ಆರ್.ಕೆ.ಲ್ಯಾಡರ್ಸ್‍ನ ಉದ್ಯಮಿ ಕೇಶವ ಎ. ರವರು ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಕಲಿಕೆ ಮತ್ತು ಕ್ರೀಢೆಯು ಮಕ್ಕಳ ಜೀವನಕ್ಕೆ ಪೂರಕವಾಗಿವೆ. ವಿದ್ಯಾರ್ಥಿಗಳಲ್ಲಿರುವ ವಿಶೇಷ ಗುಣವನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಎ.ಪಿ.ಜೆ.ಅಬ್ದುಲ್ ಕಲಾಂರವರು ಬಡವರಾಗಿದ್ದರೂ ಅವರಲ್ಲಿನ ಜ್ಞಾನ ಶಕ್ತಿ ಸಾಧನೆಗೆ ಪ್ರೇರಣೆ ನೀಡಿದೆ. ಅದೇ ರೀತಿ ವಿದ್ಯಾರ್ಥಿಗಳು ತಮ್ಮ ಶಕ್ತಿಯ ಬಗ್ಗೆ ಪೂರ್ತಿ ಭರವಸೆ ಇಟ್ಟುಕೊಂಡು ಮುಂದೆ ಸಾಗಿ ದೇಶ ಸೇವೆಗೆ ಕಠಿಬದ್ಧರಾಗುವಂತೆ ಕರೆ ನೀಡಿದರು. ನೂಜಿಬಾಳ್ತಿಲ ಕ್ಲಸ್ಟರ್ ಸಿ.ಆರ್.ಪಿ. ಗೋವಿಂದ ನಾಯಕ್‍ರವರು ಮಾತನಾಡಿ, ಶಾಲಾ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಪೋಷಕರಿಗೆ ತಮ್ಮ ಮಕ್ಕಳ ಸಾಮರ್ಥ್ಯದ ಬಗ್ಗೆ ಮೌಲ್ಯ ಮಾಪನ ಮಾಡಲು ವಾರ್ಷಿಕೋತ್ಸವದ ಮೂಲಕ ಸಾಧ್ಯವಿದೆ. ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇದ್ದೇ ಇದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಪೋಷಕರು, ಶಿಕ್ಷಕರಿಂದ ಆಗಬೇಕೆಂದು ಹೇಳಿದರು. ನಿವೃತ್ತ ಮುಖ್ಯ ಶಿಕ್ಷಕ ಎ.ಎಚ್. ಶ್ರೇಯಾನ್ಸ್‍ರವರು ಮಾತನಾಡಿ, ಮಕ್ಕಳ ಭವಿಷ್ಯಕ್ಕೆ ಪ್ರಾಥಮಿಕ ಶಾಲೆ ಅಡಿಪಾಯವಾಗಿದೆ. ನನ್ನ ಬಾಳ್ವೆಯೂ ಈ ಶಾಲೆಯಿಂದಲೇ ಆರಂಭಗೊಂಡಿದ್ದು ಶಿಕ್ಷಕನಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದ್ದೇನೆ. ನಿವೃತ್ತಿಯಾದರೂ ಈ ಶಾಲೆಯ ಬಗ್ಗೆ ಅಪಾರ ಗೌರವವಿಟ್ಟುಕೊಂಡಿದ್ದೇನೆ. ಇಲ್ಲಿನ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೂ ನನ್ನ ಮೇಲೆ ಅಪಾರ ಪ್ರೀತಿ ಇದ್ದು ಆಗಾಗ ಶಾಲೆಗೆ ಭೇಟಿಕೊಡುತ್ತಿದ್ದೇನೆ ಎಂದರು. ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕರವರು ಮಾತನಾಡಿ, ಗ್ರಾಮೀಣ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿ ಶಾಲೆ ಅಭಿವೃದ್ಧಿಹೊಂದಲು ಜನಪ್ರತಿನಿಧಿಗಳು, ಶಾಲಾ ಅಭಿವೃದ್ಧಿ ಸಮಿತಿ, ಶಿಕ್ಷಕರು ಹಾಗೂ ಪೋಷಕರ ಸಹಭಾಗಿತ್ವ ಬೇಕಾಗಿದೆ. ಎಲ್ಲರೂ ನಮ್ಮ ಶಾಲೆ ಎಂಬ ಒಮ್ಮತಾಭಿಪ್ರಾಯದಿಂದ ಕೈ ಜೋಡಿಸಿದರೆ ಮಾತ್ರ ಸಾಧ್ಯವಾಗಬಹುದು. ಈ ಶಾಲೆಯಲ್ಲಿ ಈಗ 130 ವಿದ್ಯಾರ್ಥಿಗಳಿದ್ದು ಮಕ್ಕಳ ಸಂಖ್ಯೆ ಹೆಚ್ಚಿಸುವ ಸಲುವಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಬೇಕೆಂದು ಹೇಳಿದರು.

ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಗೀತಾ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಿಕ್ಷಕಿ ಶಿಲ್ಪಾ ಕ್ರೀಡಾ ಸಾಧಕರ ಪಟ್ಟಿ ವಾಚಿಸಿದರು. ಶಿಕ್ಷಕಿ ಶ್ರೀಲತಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಲೂಸಿ ಸಿ.ಕೆ., ಶಿಕ್ಷಕರಾದ ಶೈಲಾ ಟಿ.ಐ, ಸಚಿದೇವಿ, ಶಾರೀರಿಕ ಶಿಕ್ಷಕ ಬಾಲಕೃಷ್ಣ ಎಂ, ಟಿ.ಜಿ.ಟಿ ಶಿಕ್ಷಕಿ ಶ್ರೀಲತಾ ಎ.ಎಸ್., ಪದವೀಧರೆ ಶಿಕ್ಷಕಿ ಗೀತಾ ಎಂ.ಬಿ., ಅತಿಥಿ ಶಿಕ್ಷಕಿ ಶಿಲ್ಪಾ, ಗೌರವ ಶಿಕ್ಷಕಿ ಕಾವ್ಯರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ದೇವಪ್ಪ ಬರಮೇಲುರವರು ಪ್ರಾಯೋಜಿಸಿದ್ದರು. ನೂಜಿಬಾಳ್ತಿಲ ಒಕ್ಕೂಟದ ಅಧ್ಯಕ್ಷ ಪುರುಷೋತ್ತಮ ಹಾಗೂ ತಂಡದವರು ಅಡುಗೆ ತಯಾರಿಸಿದ್ದರು. ಅಂಚೆಪಾಲಕ ಜಿನೇಂದ್ರ ಜೈನ್ ಪಾಕತಜ್ಞರಾಗಿ ಹಾಗೂ ಶಾಲಾ ಅಡುಗೆ ಸಿಬ್ಬಂದಿಗಳು ಸಹಕರಿಸಿದರು.ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಕಮಲಾಕ್ಷಿ ಬರೆಮೇಲು, ಸದಸ್ಯರಾದ ರಜಿತಾ ಪದ್ಮನಾಭ, ಬಾಲಕೃಷ್ಣ ಗೌಡ ಉಳಿಪ್ಪು, ಪುರುಷೋತ್ತಮ ಮಿತ್ತಂಡೇಲು, ವಿದ್ಯಾರ್ಥಿ ನಾಯಕ ವಿನೀತ್ ಪಿ.ಎಸ್., ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು. ವಿದ್ಯಾರ್ಥಿನಿ ತೃಪ್ತಿ ವಾರ್ಷಿಕೋತ್ಸವ ವರದಿ ಹಾಗೂ ಸಿಂಚನ ಸಾಂಸ್ಕೃತಿಕ ಚಟುವಟಿಕೆಗಳ ವರದಿ ಮಂಡಿಸಿದರು. ಪ್ರಭಾರ ಮುಖ್ಯಶಿಕ್ಷಕಿ ಲೂಸಿ ಸಿ.ಕೆ.ಸ್ವಾಗತಿಸಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಲಕ್ಷ್ಮಣ ಗೌಡ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಎಂ. ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಸ್.ಡಿ.ಎಂ.ಸಿ. ಸದಸ್ಯರಾದ ಹೊನ್ನಮ್ಮ, ಸುಧೀಶ್, ಯಶೋಧರ, ಶೇಖರ ಗೌಡ ಎಲುವಾಳೆ, ಸಂತೋಷ ಕುಮಾರ್ ಹಾರ್ಪಳ, ಚಂದ್ರಶೇಖರ ನಡುವಾಲು, ಕೃಷ್ಣ, ಪ್ರೇಮ, ನೀಮಾ, ಸುಮಯ್ಯ, ಭಾರತಿ, ಕಲ್ಯಾಣಿಯವರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಅಡೆಂಜ ಶಾಲಾ ಶಿಕ್ಷಕಿ ತಾರಾ (ಎಲಿಯಮ್ಮ), ಶಾಲಾ ಪದನಿಮಿತ್ತ ಸದಸ್ಯೆಯಾದ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅಮೀನಾ ಕೆ., ನಾಮನಿರ್ದೇಶಿತ ಸದಸ್ಯೆ ಶೈಲಾ ಟಿ.ಐ., ವಿದ್ಯಾರ್ಥಿ ನಾಯಕ ವಿನೀತ್ ಪಿ.ಎಸ್., ಸೇರಿದಂತೆ ಶಾಲಾ ಅಭಿವೃದ್ಧಿ ಸಮಿತಿಯವರು ಶ್ರೀ ಕ್ಷೇತ್ರ ಧ. ಗ್ರಾಮಾಭಿವೃದ್ಧಿ ಯೊಜನೆಯ ನೂಜಿಬಾಳ್ತಿಲ ಒಕ್ಕೂಟದ ಸದಸ್ಯರು, ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು, ಪೋಷಕರು, ವಿದ್ಯಾರ್ಥಿಗಳು, ಊರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಎಸ್.ಡಿ.ಎಂ.ಸಿ., ಸಿಆರ್ ಪಿ ಹಾಗೂ ಶಿಕ್ಷಕರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡಿದಲ್ಲಿ ವಿದ್ಯಾಕ್ಷೇತ್ರ ಯಶಸ್ವಿಯಾಗಿ ನಡೆಯಲಿದೆ. ಈ ಸರಕಾರಿ ಶಾಲೆಯಲ್ಲಿ ಪರಿಣತಿ ಹೊಂದಿದ ಶಿಕ್ಷಕರಿದ್ದು ಮಕ್ಕಳ ಸಂಖ್ಯೆಯೂ ಹೆಚ್ಚಳಗೊಂಡು ಉತ್ತಮ ಮಾದರಿ ಶಾಲೆಯಾಗಿ ಪ್ರಜ್ವಲಿಸಲಿ. ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕರವರ ಇಚ್ಚಾಶಕ್ತಿ ಉತ್ಸಾಹ ಈ ಶಾಲೆಗೆ ಪ್ರೇರಣೆಯಾಗಲಿ.

ಸದಾನಂದ ಗೌಡ ಸಾಂತ್ಯಡ್ಕ, ಅಧ್ಯಕ್ಷರು ಗ್ರಾ.ಪಂ. ನೂಜಿಬಾಳ್ತಿಲ

ದೃಷ್ಠಿ ದೋಷವಿದ್ದರೂ ತನ್ನ ಸಾಧನೆ ಮೂಲಕ ಎಸ್‍ಆರ್ ಕೆ ಲ್ಯಾಡರ್ಸ್ ಉದ್ಯಮ ನಡೆಸುತ್ತಿರುವ ಕೇಶವ ಎ.,ರವರು ಸುಮಾರು 50ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿ ಅವರ ಬಾಳಿಗೆ ಬೆಳಕಾಗಿದ್ದಾರೆ. ಅಲ್ಲದೇ ತನ್ನ ದುಡಿಮೆಯಲ್ಲಿ ಅಲ್ಪಭಾಗವನ್ನು ಸಮಾಜಕ್ಕೂ ನೀಡುತ್ತಿರುವ ಕೇಶವರವರು ಶಾಲೆಯ ವಾರ್ಷಿಕೋತ್ಸವಕ್ಕೆ 10 ಸಾವಿರ ರೂ., ಧನ ಸಹಾಯ ನೀಡಿ ಸಹಕರಿಸಿದ್ದಾರೆ. ಅವರ ಉದಾರ ಕೊಡುಗೆಗೆ ಅಭಾರಿಯಾಗಿದ್ದೇವೆ.

ಲಕ್ಷ್ಮಣ ಗೌಡ, ಅಧ್ಯಕ್ಷರು, ಎಸ್‍ಡಿಎಂಸಿ

error: Content is protected !!

Join the Group

Join WhatsApp Group