(ನ್ಯೂಸ್ ಕಡಬ) newskadaba.com ಬೆಂಗಳೂರು, ಆ .23, ಬಿಎಸ್ ಯಡಿಯೂರಪ್ಪ ವಿರುದ್ಧ ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಸಂಬಂಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರ ಹೈಕೋರ್ಟ್ ನಲ್ಲಿ ನಡೆಯಲಿದೆ. ಎಫ್ಐಆರ್ ಗೆ ಮಧ್ಯಂತರ ತಡೆ ಕೋರಿ ಸಲ್ಲಿಸಿರುವ ಮನವಿ ಕುರಿತು ಇಂದು ವಾದ ನಡೆಯಲಿದೆ.
ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ ಸಿಗುತ್ತೋ ಇಲ್ಲವೋ ಅನ್ನೋದು ಇಂದು ನಿರ್ಧಾರವಾಗಲಿದೆ. ಯಡಿಯೂರಪ್ಪ ಪರ ಹಿರಿಯ ವಕೀಲ ಸಿವಿ ನಾಗೇಶ್ ಹಾಗೂ ಎಸಿಬಿ ಪರ ಮಾಜಿ ಅಡ್ವೋಕೇಟ್ ಜನರಲ್ ರವಿ ವರ್ಮಾ ಕುಮಾರ್ ವಾದ ಮಂಡಿಸಲಿದ್ದಾರೆ. ಇಂದು ನಡೆಯಲಿರುವ ವಿಚಾರಣೆ ಯಡಿಯೂರಪ್ಪ ಪಾಲಿಗೆ ಅತ್ಯಂತ ಮಹತ್ವ ಪೂರ್ಣವಾಗಿದೆ. ಗುರುವಾರ ಬಿಎಸ್ವೈ ವಿಚಾರಣೆಗೆ ಹಾಜರಾಗುವ ಅನಿವಾರ್ಯತೆ ಇದ್ದು ಇಂದು ಪ್ರಕರಣದಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಲ್ಲಿ ಸರ್ಕಾರದ ಎಲ್ಲ ತಂತ್ರಗಾರಿಕೆ ತಲೆಕೆಳಗಾಗಲಿದೆ. ಒಂದು ವೇಳೆ ಮಧ್ಯಂತರ ತಡೆ ಸಿಗದಿದ್ದಲ್ಲಿ ಯಡಿಯೂರಪ್ಪಗೆ ಸಂಕಷ್ಟ ಎದುರಾಗಲಿದೆ. ಇನ್ನೂ ಇದೇ ಪ್ರಕರಣದಲ್ಲಿ ಇತ್ತ ವಿಚಾರಣೆಗೆ ಹಾಜರಾಗುವಂತೆ ಕೆಎಎಸ್ ಅಧಿಕಾರಿ ಬಸವರಾಜೇಂದ್ರಗೆ ಎಸಿಬಿ ಎರಡನೇ ಬಾರಿಗೆ ನೋಟಿಸ್ ನೀಡಿದೆ.