(ನ್ಯೂಸ್ ಕಡಬ) newskadaba.com ಕಡಬ, ಆ .23, ಮನುಷ್ಯನಲ್ಲಿರುವ ರಾಕ್ಷಸಿ ಪ್ರವೃತ್ತಿ ಕಡಿಮೆಯಾದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಕೊಕ್ಕಡ ಪ.ಪೂ.ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ರೈ ಹೇಳಿದರು.
ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಆಶ್ರಯದಲ್ಲಿ ನಡೆದ 23ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಮರೋಪ ಸಮಾರಂಭದಲ್ಲಿ ಮಾತನಾಡಿ ಅವರು, ನಾವು ನಮ್ಮ ಜೀವನದ ಉದ್ದೇಶವನ್ನು ಅರಿತುಕೊಂಡು ಜೀವನ ನಡೆಸಿದಾಗ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ, ನಾವು ಪ್ರಕೃತಿಗೆ ವಿರುದ್ದವಾಗಿ ಬದುಕಬಾರದು, ನಮ್ಮ ಆಂತರಿಕ ಪ್ರವೃತ್ತಿ ಉತ್ತಮವಾಗಿರಬೇಕು, ಜೀವನದಲ್ಲಿ ಶ್ರೀ ಕೃಷ್ಣನ ತತ್ವ ಆದರ್ಶಗಳನ್ನು ಅಳವಡಿಸಿಕೊಂಡಾಗ ಖಂಡಿತಾ ಜೀವನದಲ್ಲಿ ಸುಖವನ್ನು ಕಾಣಲು ಸಾಧ್ಯ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಮಾತನಾಡಿ, ಹಿಂದೂಗಳು ಜಾಗೃತಿಯಲ್ಲಿರಬೇಕಾದರೆ ಇಂತಹ ಉತ್ಸವಗಳು ಕಾರಣವಾಗಿದೆ, ಆಚರಣೆಯಲ್ಲಿ ಮೇಲು, ಕೀಳು ಬಡವ, ಶ್ರೀಮಂತ ಎಂಬ ಭೇಧ ಮಾಡದೆ, ಎಲ್ಲರನ್ನೂ ಸಮಾನವಾಗಿ ಕಾಣುವಂತಾಗಬೇಕು ಈ ಮೂಲಕ ಶ್ರೀ ಕೃಷ್ಣನ ಚರಿತ್ರೆಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಶ್ರೀ ದುರ್ಗಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಸರಸ್ವತಿ ವಿದ್ಯಾಸಂಸ್ಥೆಯ ಸಂಚಾಲಕ ವೆಂಕಟ್ರಮಣ ರಾವ್, ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು ಮಾತನಾಡಿದರು. ವೇದಿಕೆಯಲ್ಲಿ ಕಡಬ ಪೊಲೀಸ್ ಠಾಣಾ ಬರಹಗಾರ ಸತೀಶ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರು ಕುಡಿಕೆ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಜನಾ ಮಂಡಳಿಯ ಕಾರ್ಯದರ್ಶಿ ಮನೋಹರ್ ರೈ ಬೆದ್ರಾಜೆ ಸ್ವಾಗತಿಸಿ, ಅಧ್ಯಕ್ಷ ಸೋಮಪ್ಪ ನಾೖಕ್ ವಂದಿಸಿದರು. ದಯಾನಂದ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂಡಳಿಯ ಸದಸ್ಯರಾದ ಸಚಿನ್, ದಯಾನಂದ್, ಆಕಾಶ್, ಚೇತನಾ, ಸಂತೋಷ್, ರಾಕೇಶ್ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು.