‘ಕನ್ನಡ ಪುಸ್ತಕಗಳಿಂದ ಬೌದ್ದಿಕ ಶ್ರೀಮಂತಿಕೆ’

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.19     ಇಂದಿನ ಜಾಗತಿಕ ಸನ್ನಿವೇಶದಲ್ಲಿ ಕನ್ನಡ ಪುಸ್ತಕಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅದನ್ನು ಮೆಟ್ಟಿ ನಿಲ್ಲುವ ಕೆಲಸವನ್ನು ಪ್ರಕಾಶಕರು ಮಾಡುತ್ತಿದ್ದಾರೆ. ಕನ್ನಡ ಪುಸ್ತಕಗಳು ಆರ್ಥಿಕ ಶ್ರೀಮಂತಿಕೆ ನೀಡದಿರಬಹುದು  ಆದರೆ ಬೌದ್ದಿಕ ಶ್ರೀಮಂತಿಕೆ ಖಂಡಿತ ನೀಡುತ್ತಿದೆ. ಪುಸ್ತಕಗಳನ್ನು ಓದುವುದರಿಂದ  ಪ್ರತಿಯೊಬ್ಬರೂ ಬೌದ್ದಿಕವಾಗಿ ಶ್ರೀಮಂತರಾಗುತ್ತಾರೆ ಎಂದು ಆಕೃತಿ ಆಶಯ ಪ್ರಕಾಶನದ ಪ್ರಕಾಶಕ ಕಲ್ಲೂರು ನಾಗೇಶ್ ಹೇಳಿದರು.


ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಸಹಯೋಗದಲ್ಲಿ ರಚಿತವಾದ ಜಾಣ ಜಾಣೆಯರ ಬಳಗದ ವತಿಯಿಂದ ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಂತಹ ಪ್ರಕಾಶಕರೊಂದಿಗೆ ಸಂವಾದ ಎಂಬ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಜಾಣ ಜಾಣೆಯರ ಬಳಗದ ಸಂಚಾಲಕ ಪ್ರೊ. ಮೋಹನಾ ಆರ್. ಮಾತನಾಡಿ ಇಂದಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಕೇವಲ ಬೆರಳ ತುದಿಯಲ್ಲೇ ಜಗತ್ತಿನ ಯಾವುದೇ ಮೂಲೆಯಿಂದ ಮಾಹಿತಿಗಳನ್ನು ಕ್ಷಣ ಮಾತ್ರದಲ್ಲಿ ಪಡೆಯಬಹುದಾಗಿದೆ. ಆದರೆ ಯಾವುದೇ ವಿಷಯದ ಕುರಿತಾಗಿ ಸಂಪೂರ್ಣ ಜ್ಞಾನ ಪಡೆಯಬೇಕಾದರೆ ಅದು ಪುಸ್ತಕವನ್ನು ಓದುವುದರಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾದ ಅರ್ಥಶಾಸ್ತ್ರ ಉಪನ್ಯಾಸಕರಾದ ಪ್ರೊ. ಅಶೋಕ ಬಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಡಾ. ಯು ತಾರಾ ರಾವ್  ವಹಿಸಿದ್ದರು. ಜಾಣ ಜಾಣೆಯರ ಬಳಗದ ಪದಾಧ್ಯಕ್ಷರಾದ   ಧೀರಜ್, ಕು. ಪೂಜಾ, ದ್ವಿತೀಯ ಬಿ.ಕಾಂ  ಇದರ ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Also Read  ಮಂಗಳೂರು: ಗೂಡ್ಸ್ ರೈಲಿನಡಿ ಬಿದ್ದು 17 ಎಮ್ಮೆಗಳು ಮೃತ್ಯು

error: Content is protected !!
Scroll to Top