ಅಸಮರ್ಪಕ ಒಳಚರಂಡಿ ಕಾಮಗಾರಿ : ಉಸ್ತುವಾರಿ ಕಾರ್ಯದರ್ಶಿ ಅಸಮಾಧಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.18    ಮಂಗಳೂರು ನಗರದಲ್ಲಿ ನಡೆಯುತ್ತಿರುವ ವಿವಿಧ ಒಳಚರಂಡಿ ಯುಜಿಡಿ ಕಾಮಗಾರಿಗಳನ್ನು ಅಸಮರ್ಪಕವಾಗಿ ನಡೆಸಲಾಗುತ್ತಿದ್ದು, ಇದನ್ನು ಸರಿಪಡಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್ ಸೂಚಿಸಿದ್ದಾರೆ.


ಅವರು ಮಂಗಳವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಇಲಾಖಾ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು. ಒಳಚರಂಡಿ ಪೈಪ್‍ಲೇನ್ ಹಾಕುವ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿರುವ ಮನೆ, ಸಂಕೀರ್ಣ ಸೇರಿದಂತೆ ಕಟ್ಟಡ ಸ್ವತ್ತುಗಳ ಮಾಹಿತಿ ಕಲೆ ಹಾಕಬೇಕಿದೆ. ಇದರಿಂದ ಯುಜಿಡಿ ಲೇನ್‍ಗೆ ಭವಿಷ್ಯದಲ್ಲಿ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ನಗರದಲ್ಲಿ ಸ್ಮಾರ್ಟ್‍ಸಿಟಿ, ಅಮೃತ್ ಯೋಜನೆ, ಎಡಿಬಿ 2ನೇ ಹಂತ ಸೇರಿದಂತೆ ವಿವಿಧ ಯೋಜನೆಗಳಡಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಮಂಗಳವಾರ ತಾನು ನಗರದ ಕೆಲವೆಡೆ ಖುದ್ದು ಒಳಚರಂಡಿ ಕಾಮಗಾರಿಗಳನ್ನು ಪರಿಶೀಲಿಸಿದಾಗ, ಯಾವುದೇ ಸರಿಯಾದ ಯೋಚನೆ ಇಲ್ಲದೇ, ಕಾಮಗಾರಿಗಳು ನಡೆಯುತ್ತಿರುವುದು ಕಂಡುಬಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಒಳಚರಂಡಿ ಕಾಮಗಾರಿ ನಡೆಯುವ ಮಾರ್ಗದಲ್ಲಿರುವ ಎಲ್ಲಾ ಸ್ವತ್ತುಗಳ ವಿವರಗಳನ್ನು ಅನುಷ್ಠಾನ ಸಂಸ್ಥೆಯು ಹೊಂದಿರಬೇಕು. ಈ ನಿಟ್ಟಿನಲ್ಲಿ ಸರಿಯಾದ ರೀತಿಯಲ್ಲಿ ವಿನ್ಯಾಸಗೊಳಿಸಿ ಕಾಮಗಾರಿ ಅನುಷ್ಠಾನಗೊಳಿಸುವಂತೆ ಪೊನ್ನುರಾಜ್ ಸೂಚಿಸಿದರು. ಎಡಿಬಿ 1 ನೇ ಹಂತದಲ್ಲಿ ನಡೆದಿರುವ ಒಳಚರಂಡಿ ಕಾಮಗಾರಿ ಮಿಸ್ಸಿಂಗ್ ಲಿಂಕ್ ಸರಿಪಡಿಸಲು ಕೆ.ಯು.ಐ.ಡಿ.ಎಫ್.ಸಿ.ಗೆ 58 ಕೋಟಿ ರೂ. ಅನುದಾನ ನೀಡಲಾಗಿದ್ದು, ಇದನ್ನು ಸಮರ್ಪಕ ರೀತಿಯಲ್ಲಿ ನಡೆಸಲು ಅವರು ತಿಳಿಸಿದರು.

Also Read  ಸುಬ್ರಹ್ಮಣ್ಯ ರೈಲ್ವೇ ನಿಲ್ದಾಣದಲ್ಲಿ 'ಒಂದು ನಿಲ್ದಾಣ ಒಂದು ಉತ್ಪನ್ನ' ಯೋಜನೆಯಡಿ ಸಿರಿ ಸಂಸ್ಥೆಯ ಮಳಿಗೆ ಉದ್ಘಾಟನೆ

error: Content is protected !!
Scroll to Top