(ನ್ಯೂಸ್ ಕಡಬ) newskadaba.com, ಪುತ್ತೂರು, ಡಿ.14 ಮಕ್ಕಳ ಹಕ್ಕುಗಳ ರಕ್ಷಣೆಗೆ, ಸಮಾಜದ ಹೊಣೆ ಹಾಗೂ ಸರ್ಕಾರದ ಪರಿಣಾಮಕಾರಿ ಕಾನೂನಿನ ಅಗತ್ಯವಿದೆ. ಮಕ್ಕಳು ಯಾವುದೇ ತೊಂದರೆಗಳಿಗೆ ಒಳಪಡದಂತೆ ಆನಂದದಿಂದ, ಯಾವುದೇ ಭಯ, ಕೊರತೆ ಇಲ್ಲದೇ ಬದುಕಿ ಬೆಳೆಯಬೇಕು ಎಂದು ಮಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತೆ ಗಾಯತ್ರಿ ಎನ್ ನಾಯಕ್ ಹೇಳಿದರು.ಶುಕ್ರವಾರ ಮಿನಿವಿಧಾನಸೌಧ ಆವರಣದಲ್ಲಿರುವ ಎನ್.ಜಿ.ಒ ಹಾಲ್‍ನಲ್ಲಿ ನಡೆದ ಮಂಗಳೂರು ಮಹಾನಗರಪಾಲಿಕೆ ನೇತೃತ್ವದಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಲಾದ ಅಧಿಕಾರಿಗಳ ಜತೆಗಿನ ಮಕ್ಕಳ ಮುಖಾಮುಖಿ ಸಂವಾದವನ್ನು ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಹಲವಾರು ವಿಭಿನ್ನ ಪ್ರಶ್ನೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಗರದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ಹಾಗೂ ದೌರ್ಜನ್ಯ ಕುರಿತ ಪ್ರಶ್ನೆ ಹಾಗೂ ಆತಂಕ ಜಾಸ್ತಿಯಾಗಿತ್ತು. ಇದಲ್ಲದೇ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯ ಬಗೆಗಿನ ಪ್ರಶ್ನೆಗೆ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಯಿತು. ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವೀಣಾ ಪ್ರಶ್ನಿಸುತ್ತಾ, ಮದ್ಯಪಾನ, ಧೂಮಪಾನದಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಪಿಡುಗನ್ನು ಬೇರು ಸಮೇತ ಕಿತ್ತು ಹಾಕಬೇಕಾಗಿದೆ, ಇದಕ್ಕಾಗಿ ಮಕ್ಕಳು ರ್ಯಾಲಿ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಪೊಲೀಸ್ ಆಯುಕ್ತರ ಕಚೇರಿ ಪರವಾಗಿ ಭಾಗವಹಿಸಿದ್ದ ಶ್ರೀಕಲಾ ಅವರು ಮಾತನಾಡಿ ಗಾಂಜಾ, ಧೂಮಪಾನ ಸೇರಿದಂತೆ ಸಾಕಷ್ಟು ಪ್ರಕರಣಗಳನ್ನು ನಾವು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತಿದ್ದೇವೆ. ಮದ್ಯಪಾನ ಕೇರಳದಲ್ಲಿ ಸಂಪೂರ್ಣವಾಗಿ ನಿಷೇಧಿಸಿದೆ. ಆದರೆ ಅಲ್ಲಿಯವರು ಕರ್ನಾಟಕದಿಂದ ಕೊಂಡುಹೋಗುತ್ತಾರೆ. ಕೆಲವೊಂದು ಪ್ರಕರಣಗಳನ್ನು ಬೇಧಿಸುವ ಸಂದರ್ಭ ನಮಗೆ ಹಿರಿಯ ಅಧಿಕಾರಿಗಳು ಅಥವಾ ವ್ಯವಸ್ಥೆಯಿಂದ ಸಹಕರ ಸಿಗದೆಯೂ ತೊಂದರೆಯಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಮಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತೆ ಗಾಯತ್ರಿ ನಾಯಕ್ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಯಾರೂ ಅಡ್ಡಿಪಡಿಸುವುದಿಲ್ಲ ಆದರೆ ಮಕ್ಕಳಾಗಿರುವುದರಿಂದ ಯಾವುದೇ ರೀತಿಯ ರ್ಯಾಲಿ ಮಾಡುವುದಿದ್ದರೂ ಶಾಲೆಯ ಶಿಕ್ಷಕರ ಸಹಕಾರದಲ್ಲಿ ಮಾಡಬಹುದು ಎಂದರು.
ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ, ಜೀವಾವಧಿಯಂತಹ ಶಿಕ್ಷೆ ತಕ್ಷಣ ಯಾಕೆ ದೊರೆಯುವುದಿಲ್ಲ ಎಂದು ವಿದ್ಯಾರ್ಥಿನಿಯೊಬ್ಬರು ಪ್ರಶ್ನಿಸಿದರು. ಇದು ಅತ್ಯಂತ ಸೂಕ್ಷ್ಮ ಹಾಗೂ ಸಂಕೀರ್ಣವಾದ ವಿಷಯ. ಇಂತಹ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎನ್ನುವುದು ಎಲ್ಲರ ಬಯಕೆ ಆದರೆ ನಾವು ಸಂವಿಧಾನದಡಿ ಬದುಕುತ್ತಿದ್ದೇವೆ ನೇರವಾಗಿ ಯಾರನ್ನೂ ಗಲ್ಲಿಗೇರಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. ಹಾಗಾಗಿ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆ ಕಾನೂನು ರೂಪುಗೊಳ್ಳಬೇಕಿದೆ ಎಂದು ಗಾಯತ್ರಿ ನಾಯಕ್ ಹೇಳಿದರು. ವಿದ್ಯಾರ್ಥಿನಿ ಮುರ್ಶಿದಾ ಪ್ರಶ್ನಿಸುತ್ತಾ, ಕೆಲ ಸಮುದಾಯದಲ್ಲಿ 10 ನೇ ತರಗತಿ ಬಳಿಕ ಹೆಣ್ಣು ಮಕ್ಕಳನ್ನು ಶಾಲೆಗೆ ಹೋಗಲು ಪ್ರೋತ್ಸಾಹ ನೀಡುವುದಿಲ್ಲ ಎಂದರು. ಇದೊಂದು ಗಂಭೀರವಾದ ವಿಷಯ ಈ ಬಗ್ಗೆ ಮಹಾನಗರಪಾಲಿಕೆ ಗಮನ ಹರಿಸಲಿದೆ ಎಂದು ಹೇಳಿದ ಗಾಯತ್ರಿ ನಾಯಕ್ ವಿದ್ಯಾರ್ಥಿನಿಯ ಪೋಷಕರಿಗೆ ಆಕೆಯ ಶಿಕ್ಷಣ ಮುಂದುವರಿಕೆ ಕುರಿತಂತೆ ಮನವರಿಕೆ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಶ್ರೀನಿವಾಸ್, ಮನಪಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಜಿಲ್ಲಾ ಮಹಿಳಾ ರಕ್ಷಣಾ ಘಟಕದ ವೆಂಕಪ್ಪ ಎಂ. ಮಂಗಳೂರು ಉತ್ತರ ಬಿ.ಇ.ಒ ಆಶಾ ನಾಯಕ್, ಕೆ.ಎಸ್.ಆರ್.ಟಿ.ಸಿ ಸಹಾಯಕ ಟ್ರಾಫಿಕ್ ಮ್ಯಾನೇಜರ್ ನಿರ್ಮಲಾ, ಮನಪಾ ವಲಯ ಆಯುಕ್ತ ಅಬ್ದುಲ್ ರಹಿಮಾನ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನರೇಶ್ ಶೆಣೈ, ಇಂಜಿನಿಯರ್ ವಿಭಾಗದ ರಘುಪಾಲ್, ರೋಜ್‍ಗಾರ್ ಯೋಜನೆಯ ಚಿತ್ತರಂಜನ್, ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು