(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13 ಮಕ್ಕಳು ಸಮುದಾಯದ ಆಸ್ತಿ, ಯಾವುದೇ ಕಾರಣಕ್ಕೂ ಮಕ್ಕಳು ಯಾವುದೇ ತೊಂದರೆಗಳಿಗೆ ಈಡಾಗದಂತೆ ಸ್ವಚ್ಚಂದವಾಗಿ, ಆನಂದದಿಂದ, ಎಂತಹದೇ ಭಯ, ಕೊರತೆ ಇಲ್ಲದೇ ಬದುಕಿ ಬೆಳೆಯಬೇಕಾಗುತ್ತದೆ. ಅಂತಹ ವಾತಾವರಣವನ್ನು ಸೃಷ್ಠಿಸುವುದು ಆಯಾ ದೇಶದ ರಾಜ್ಯದ, ಪಂಚಾಯತಿ, ಸಮುದಾಯ ಮತ್ತು ಪ್ರತಿ ಕುಟುಂಬಗಳ ಜವಾಬ್ದಾರಿ.
ಈ ನಿಟ್ಟಿನಲ್ಲಿ ಮಕ್ಕಳ ಬದುಕು, ರಕ್ಷಣೆ, ವಿಕಾಸ, ಭಾಗವಹಿಸುವಿಕೆಯ ವಿಚಾರಗಳನ್ನು ನಮ್ಮ ದೇಶದಲ್ಲಿ ಜಾರಿಗೊಳಿಸುತ್ತೇವೆ ಎಂದು ಹೇಳಿ ಭಾರತ ಸರ್ಕಾರ 1992 ರಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಹಾಕಿ ತನ್ನ ಬದ್ಧತೆಯನ್ನು ತೋರಿಸಿದೆ. ಮಕ್ಕಳ ಭಾಗವಹಿಸುವಿಕೆಯಲ್ಲಿ ಪ್ರಮುಖವಾಗಿ ಗ್ರಾಮ ಮಟ್ಟದಲ್ಲಿ ಮಕ್ಕಳ ಗ್ರಾಮ ಸಭೆಯನ್ನು ನಡೆಸುವುದರ ಮೂಲಕ ಮಕ್ಕಳ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಆದರೆ ನಗರದ ಮಕ್ಕಳಿಗೆ ತಮ್ಮ ಸ್ಥಳೀಯಾಡಳಿತದ ಜೊತೆಗೆ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ಇಲ್ಲದ ಕಾರಣ ಪ್ರಪ್ರಥಮ ಬಾರಿಗೆ ಮಂಗಳೂರು ಮಹಾನಗರ ಪಾಲಿಕೆಯು ಅಧಿಕಾರಿಗಳೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮವನ್ನು ಇಂದು 10 ಗಂಟೆಗೆ ಸರಿಯಾಗಿ ಮಿನಿ ವಿಧಾನ ಸೌಧದ ಆವರಣದಲ್ಲಿರುವ ಎನ್.ಜಿ.ಒ ಹಾಲ್ ನಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ನೆರವೇರಿಸುವರು. ಅಧ್ಯಕ್ಷತೆಯನ್ನು ಉಪ ಆಯುಕ್ತೆ ಗಾಯತ್ರಿ ಎನ್ ನಾಯಕ್ ವಹಿಸಲಿರುವರು. ಮುಖ್ಯ ಅತಿಥಿಯಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜ ಭಾಗವಹಿಸಲಿದ್ದಾರೆ ಎಂದು ದ.ಕ ಜಿಲ್ಲಾ ಮಕ್ಕಳ ಹಕ್ಕುಗಳ ಮಾಸೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.