ಯುವಜನತೆಯಲ್ಲಿ ಸೇವಾ ಮನೋಭಾವನೆ ಇರಬೇಕು- ಎನ್.ಜಿ.ಮೋಹನ್

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.11   ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಬಾಳುವಾಗ ಯುವಜನತೆ ಸೇವಾ ಮನೋಭಾವನೆ ಬೆಳೆಸಿಕೊಳ್ಳುವ ಅಗತ್ಯ ಇದೆ ಎಂದು ಭಾರತ ಸ್ಕೌಟ್ಸ್ ಆಂಡ್ ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ.ಮೋಹನ್ ಹೇಳಿದರು.


ನಗರದ ರೋಶನಿ ನಿಲಯದಲ್ಲಿ ಡಿಸೆಂಬರ್ 5 ರಂದು ವಿಶ್ವ ಸಂಸ್ಥೆಯ ಅಂತರಾಷ್ಟ್ರೀಯ ಸ್ವಯಂಸೇವಾ ದಿನಾಚರಣೆ ಅಂಗವಾಗಿ ದಕ್ಷಿಣ ಕನ್ನಡ ನೆಹರೂ ಯುವ ಕೇಂದ್ರ ಸಂಘಟನೆ, ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ, ರೋಶನಿ ನಿಲಯ ಹಾಗೂ ವಿಶ್ವಸಂಸ್ಥೆ ಸ್ವಯಂಸೇವಕರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಎಲ್ಲರನ್ನು ಒಳಗೊಂಡ ಭವಿಷ್ಯಕ್ಕಾಗಿ ಸ್ವಯಂಸೇವಕರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಮ್ಮ ಕರಾವಳಿಯಲ್ಲಿ ಹಲವು ಮಂದಿ ಧೀಮಂತ ಮುಖಂಡರ ಸ್ವಯಂ ಸೇವಾ ಕಾರ್ಯಕ್ರಮದಿಂದಾಗಿ ಇಂದು ದಕ್ಷಿಣ ಕನ್ನಡ ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಕುದ್ಮುಲ್ ರಂಗರಾವ್, ಕರ್ನಾಡ್ ಸದಾಶಿವರಾವ್, ಉಳ್ಳಾಲ ಶ್ರೀನಿವಾಸ ಮಲ್ಯ, ಅಮ್ಮೇಂಬಳ ಬಾಳಪ್ಪ ಇತ್ಯಾದಿ ಹಲವಾರು ಮಂದಿ ಮಹನೀಯರನ್ನು ನಾವು ಮರೆಯುತ್ತಿದ್ದೇವೆ. ಇಂದಿನ ಯುವಕರು ಅವರ ಆದರ್ಶದಲ್ಲಿ ಬಾಳಬೇಕಾಗಿದೆ ಎಂದು ಮೋಹನ್ ಹೇಳಿದರು.

Also Read  ತೊಡಿಕಾನ ದೇವಳಕ್ಕೆ ದೇವರಗುಂಡಿಯಿಂದ ಪವಿತ್ರ ಜಲತೀರ್ಥ ಯಾತ್ರೆ


ರೋಶನಿ ನಿಲಯ ಸ್ಕೂಲ್ ಸೋಶಿಯಲ್ ವರ್ಕ್ ಕಾಲೇಜಿನ ಉಪ ಪ್ರಾಂಶುಪಾಲರಾದ ಜೆನಿಸ್ ಮೇರಿ. ಅವರು ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರೊಫೆಸರ್ ನಂದಕಿಶೋರ್ ಅವರು ವಿವಿಧ ಕಾಲೇಜುಗಳಿಂದ ಆಗಮಿಸಿದ ಸ್ವಯಂಸೇವಕರಿಗೆ ಸಮಾನತೆ ಮತ್ತು ಒಳಗೊಳ್ಳುವಿಕೆಗಾಗಿ ಜನರಿಗೆ ಅಧಿಕಾರ ಎಂಬ ವಿಚಾರದಲ್ಲಿ ಉಪನ್ಯಾಸ ನೀಡಿದರು.
ದಕ್ಷಿಣ ಕನ್ನಡ ನೆಹರೂ ಯುವ ಕೇಂದ್ರ ಸಂಘಟನೆ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟರಪೇಟೆ, ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಪ್ರೊ. ವಿನಿತಾ ರೈ ಉಪಸ್ಥಿತರಿದ್ದರು.

Also Read  ಬಂಟ್ವಾಳ: ಮನೆಮೇಲೆ ಮಗುಚಿಬಿದ್ದ ಲಾರಿ

error: Content is protected !!
Scroll to Top