ಐಡಿಯಲ್ ಫ್ರೆಂಡ್ಸ್‌ ಕ್ಲಬ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ► ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಪೂರ್ಣಾನಂದನಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಆ .22,  ಕೇಪು ಐಡಿಯಲ್ ಫ್ರೆಂಡ್ಸ್‌ ಕ್ಲಬ್ ವತಿಯಿಂದ ವರ್ಷಂಪ್ರತಿ ನಡೆಸಲ್ಪಡುವ  11ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಕಾರ್ಯಕ್ರಮ ಆದಿತ್ಯವಾರ ಕುಟ್ರುಪ್ಪಾಡಿ ಗ್ರಾಮದ ಕೇಪು ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಿತು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಫ್ರೆಂಡ್ಸ್‌ ಕ್ಲಬ್ ನ ಅಧ್ಯಕ್ಷರಾದ ಮಹೇಶ್ ಕುಂಟೋಡಿ ಅಧ್ಯಕ್ಷತೆ ವಹಿಸಿದ್ದರು. ಕಡಬ ಸಿಎ ಬ್ಯಾಂಕಿನ ಅಧ್ಯಕ್ಷರಾದ ಸುಂದರ ಗೌಡ ಮಂಡೆಕರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಹಾಗು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿ ಶ್ರೀಕೃಷ್ಣನು ಲೋಕದ ಕಲ್ಯಾಣಕ್ಕಾಗಿ ಅವತಾರ ಎತ್ತಿದ ಮಹಾಪುರುಷ. ಅಧರ್ಮವನ್ನು ಹೋಗಲಾಡಿಸಿ ಭರತ ಭೂಮಿಯಲ್ಲಿ ಧರ್ಮವನ್ನು ಸಂಸ್ಥಾಪಣೆ ಮಾಡಿದ್ದಾನೆ. ಧರ್ಮದ ರಕ್ಷಣೆಗಾಗಿ ಕುರುಕ್ಷೇತ್ರ ಯುದ್ದದ ಹಾದಿಯನ್ನು ಬಳಸುವುದು ಕೂಡ ತಪ್ಪಲ್ಲ ಎಂದು ಜಗತ್ತಿಗೆ ಗೀತೆಯ ಮೂಲಕ ಸಾರಿದ್ದಾನೆ. ನಾವು ಅದನ್ನು ಜೀವನದಲ್ಲಿ ಅರಿತುಕೊಂಡು ಧರ್ಮದ ಹಾದಿಯಲ್ಲಿ ಬದುಕುವ ಜೊತೆಗೆ ಹಿಂದಿನ ಸಂಪ್ರದಾಯಗಳನ್ನು ಆಚಾರ ವಿಚಾರಗಳನ್ನು ಉಳಿಸಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುವುದಲ್ಲದೆ ಮುಂದಿನ ಪೀಳಿಗೆಗೆ ಆಚಾರಗಳ ಅರಿವನ್ನು ಮೂಡಿಸಿ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗುವಂತೆ ನಾವು ಪ್ರೇರೇಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇಪು ಫ್ರೆಂಡ್ಸ್‌ ಕ್ಲಬ್ನವರು ಕಳೆದ 10 ವರ್ಷಗಳಿಂದ ಇಲ್ಲಿಯ ಯುವ ಮುಂದಾಳು ಹರೀಶ್ ಕುಮಾರ್ ಕೋಡಿಬೈಲ್ರವರ ನೇತೃತ್ವದಲ್ಲಿ ವರ್ಷಂಪ್ರತಿ ವಿವಿಧ ಕಾರ್ಯಕ್ರಮಗಳೊಂದಿಗೆ ಎಲ್ಲರ ಸಹಕಾರದಿಂದ ವಿಜೃಂಭಣೆಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ಮಹೇಶ್ ರೈ ಯವರ ಮುಂದಾಳತ್ವದಲ್ಲಿ ಉತ್ಸವ ನಡೆಯುತ್ತಿದೆ. ಇಲ್ಲಿ ಸದಾ ಇಂತಹ ಕಾರ್ಯಕ್ರಮ ನಡೆಯುತ್ತಿರಲಿ. ನಾವು ಸದಾ ನಿಮ್ಮೊಂದಿಗಿದ್ದೇವೆ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕೊಕ್ಕಡ ಪ.ಪೂ ಕಾಲೇಜಿನ ಉಪನ್ಯಾಸಕರಾದ ವಿಶ್ವನಾಥ ರೈ ಪೆರ್ಲ ಶುಭಹಾರೈಸಿದರು. ಎಪಿಎಂಸಿ ಸದಸ್ಯೆ ಪುಲಸ್ತ್ಯ ರೈ, ನಿಕಟಪೂರ್ವ ಅಧ್ಯಕ್ಷ ಹರೀಶ್ ಕೋಡಿಬೈಲ್, ಕುಟ್ರುಪ್ಪಾಡಿ ಗ್ರಾ.ಪಂ.ಸದಸ್ಯ ಶಿವಪ್ರಸಾದ್ ಮೈಲೇರಿ, ಫ್ರೆಂಡ್ಸ್‌ ಕ್ಲಬ್ನ ಕಾರ್ಯದರ್ಶಿ ಸುರೇಶ್ ಕುಂಟೋಡಿ ಉಪಸ್ಥಿತರಿದ್ದರು.

Also Read  ಎತ್ತರ ಜಿಗಿತದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಈ ಸಂದರ್ಭದಲ್ಲಿ ಕಳೆದ ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪೂರ್ಣಾನಂದನನ್ನು ಸನ್ಮಾನಿಸಲಾಯಿತು. ಕಿಶೋರ್ ರೈ ಸ್ವಾಗತಿಸಿ, ನಿತೀಶ್ ಕೋಡಿಬೈಲ್ ವಂದಿಸಿದರು. ಹರೀಶ್ ರೈ ಮೈಲೇರಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top