(ನ್ಯೂಸ್ ಕಡಬ) newskadaba.com, ಕಡಬ, ಡಿ.9 ಮನೆಯಿಂದ ಒಂದು ಕೆ.ಜಿ ಪ್ಲಾಸ್ಟಿಕ್ ತೆಗೆದುಕೊಂಡು ಬಂದರೆ ಒಂದು ಕೆ.ಜಿ ಕುಚ್ಚಲು ಅಕ್ಕಿ ಉಚಿತ ವಿತರಣೆ ಇಂತಹ ವಿಷಯಾಧರಿಸಿದ ಕಾರ್ಯಕ್ರಮವೊಂದು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಭಾನುವಾರ ಕಾರ್ಯರೂಪಕ್ಕೆ ತಂದು ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್ ನಿರ್ಮೂಲನ ಜಾಗೃತಿ ಮೂಡಿಸಲಾಯಿತು.
ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ ಎನ್ನುವ ವಿಚಾರದಲ್ಲಿ ಜನರಿಗೆ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಇಂತಹ ಜಾಗೃತಿ ಕಾರ್ಯಕ್ರಮಕ್ಕೆ ಭಿನ್ನವಾಗಿ ಪ್ರೌಢಶಾಲೆ, ಅಮರ ಸಂಘಟನಾ ಸಮಿತಿ ಸುಳ್ಯ , ರಾಮಕುಂಜ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆಯ ರೂಪದಲ್ಲಿ ಜಾಗೃತಿ ಮೂಡಿಸುವಲ್ಲಿ ಸಫಲವಾಗಿದೆ. ಸುಮಾರು 200 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಒಟ್ಟು 280 ಕೆ ಜಿ ಪ್ಲಾಸ್ಟಿಕ್ ಸಂಗ್ರವಾಯಿತು. ಶಾಲಾ ಹತ್ತನೇ ತರಗತಿಯ ರಿತಿಕ್ 27 ಕೆ.ಜಿ ಸಂಗ್ರಹಿಸಿ ಪ್ರಥಮ, 8 ನೇ ತರಗತಿಯ ದೀಕ್ಷಿತ್ 23 ಕೆ.ಜಿ ದ್ವಿತೀಯ ಸ್ಥಾನ ಪಡೆದುಕೊಂಡು ಕೆ.ಜಿ ಗೆ ಸರಿಸಮನವಾಗಿ ಅಕ್ಕಿ ಪಡೆದುಕೊಂಡರು. ಇನ್ನುಳಿದಂತೆ ವಿದ್ಯಾರ್ಥಿಗಳು ಕೆ.ಜಿ ಅಳತೆಯಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್‍ಗೆ ಅಕ್ಕಿ ವಿತರಿಸಲಾಯಿತು. ಸಂಗ್ರಹಿಸಿದ ಪ್ಲಾಸ್ಟಿಕ್‍ನ್ನು ರಾಮಕುಂಜ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು. ಶಾಲಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ರಾಮಕುಂಜ ಗ್ರಾಮ ಪಂಚಾಯಿತಿ ಪಿಡಿಓ ಜೆರಾಲ್ಡ್ ಮಸ್ಕರೆನಸ್ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್ ಕೆ ಅಧ್ಯಕ್ಷತೆ ವಹಿಸಿದ್ದರು. ಅಮರ ಸಂಘಟನಾ ಸಮಿತಿ ಸುಳ್ಯ ಅಧ್ಯಕ್ಷ ಶಿವಪ್ರಸಾದ್, ಶ್ರೀ ರಾಮಕುಂಜೇಶ್ವರ ವಿದ್ಯಾವರ್ದಕ ಸಭಾ ಕಾರ್ಯದರ್ಶಿ ರಾಧಕೃಷ್ಣ ಕುವೆಚ್ಚಾರು ಉಪಸ್ಥಿತರಿದ್ದರು. ಶಿಕ್ಷಕ ಬಾಲಚಂದ್ರ ಮುಂಚಿತ್ತಾಯ ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರು. ಪ್ರೌಢಶಾಲಾ ಮುಖ್ಯಗುರು ಸತೀಶ್ ಭಟ್ ಪ್ರಸ್ತಾವಿಸಿದರು. ಅಮರ ಸಂಘಟನಾ ಸಮಿತಿ ಸುಳ್ಯ ಪ್ರಮುಖರಾದ ರಕ್ಷಿತ್ ಸ್ವಾಗತಿಸಿದರು. ಶಿವಪ್ರಸಾದ್ ವಂದಿಸಿದರು. ರಂಜಿತ್ ನಿರೂಪಿಸಿದರು.
ರಾಧಕೃಷ್ಣ ಕುವೆಚ್ಚಾರು, ಕಾರ್ಯದರ್ಶಿ , ಶ್ರೀ ರಾಮಕುಂಜೇಶ್ವರ ವಿದ್ಯಾವರ್ದಕ ಸಭಾ
ವಿದ್ಯಾರ್ಥಿಗಳಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಅರಿವು ಮೂಡಿಸುವ ವಿಶಿಷ್ಟ ಕಾರ್ಯಕ್ರಮ ಇದಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ಇಂತಹ ಕಾರ್ಯಕ್ರಮ ಅಯೋಜಿಸಲು ಕೈಜೋಡಿಸಿರುವ ಅಮರ ಸಂಘಟನಾ ಸಮಿತಿ ಸುಳ್ಯ , ರಾಮಕುಂಜ ಗ್ರಾಮ ಪಂಚಾಯಿತಿಗೆ ಕೃತಜ್ಞತೆಗಳು.
ರಜನಿಕಾಂತ್, ಗೌರವಾಧ್ಯಕ್ಷ, ಅಮರ ಸಂಘಟನಾ ಸಮಿತಿ ಸುಳ್ಯ
ಸಂಘಟನೆಯ ಮೂಲಕ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಜಿಲ್ಲೆಯ ವಿವಿದೆಡೆ ಹಮ್ಮಿಕೊಳ್ಳಲಾಗುತ್ತಿದೆ. ವಿಷಪೂರಿತ ಪ್ಲಾಸ್ಟಿಕ್ ನಿರ್ಮೂಲನೆಗೆ ಹಸಿವು ನೀಗಿಸುವ ಅಕ್ಕಿ ನೀಡುವಂತಹ ಪ್ಲಾಸ್ಟಿಕ್ ನಿರ್ಮೂಲನೆಯ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮವನ್ನು ಅಯೋಜಿಸುವ ಅಲೋಚನೆಯನ್ನು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ಕಾರ್ಯಕ್ರಮಕ್ಕೆ ಉತ್ತಮ ಬೆಂಬಲ ಸಿಕ್ಕಿದೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿದಾಗ ಕಾರ್ಯಕ್ರಮ ಯಶಸ್ವಿ ಸಾದ್ಯ ಎಂಬುವುದು ನಮ್ಮ ಆಶಯವಾಗಿದೆ.