ಆಲಂಕಾರು ಸಿ.ಎ ಬ್ಯಾಂಕಿನ ದೀನ ದಯಾಳು ರೈತ ಸಭಾಭವನ ಉದ್ಘಾಟನೆ ➤ಸಹಕಾರಿ ರಂಗದಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ: ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ್ ವೈದ್ಯ ಅಭಿಮತ

(ನ್ಯೂಸ್ ಕಡಬ) newskadaba.com, ಆಲಂಕಾರು, ಡಿ.9  ಗ್ರಾಮೀಣ ಭಾಗದ ಶಸಸ್ತೀಕರಣದ ರುವಾರಿಗಳಾಗಿರುವ ಸಹಕಾರಿ ಸಂಘಗಳಲ್ಲಿ ಇತ್ತೀಚೆಗೆ ರಾಜಕೀಯ ಹಸ್ತಕ್ಷೇಪಗಳು ನಡೆಯುವುದರಿಂದ ಸಹಕಾರಿ ರಂಗಕ್ಕೆ ಹಿನ್ನೆಡೆಯಾಗುತ್ತಿದೆ ಇದು ಸರಿಯಲ್ಲ ಎಂದು ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷ ರಮೇಶ್ ವೈದ್ಯ ಹೇಳಿದರು.


ಅವರು ಶನಿವಾರ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಛೇರಿ ಪ್ರಾಂಗಣದಲ್ಲಿ ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ದೀನ ದಯಾಳು ರೈತ ಸಭಾಭವನದ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ರಾಜ್ಯದಲ್ಲಿ ಪ್ರಥಮ ಬಾರಿಗೆ ಮಣ್ಣು ಪರೀಕ್ಷಾ ಕೇಂದ್ರವನ್ನು ತೆರೆಯುವುದರೊಂದಿಗೆ ರೈತರ ಅನುಕೂಲಕ್ಕಾಗಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಮಾಡಿ ರಾಜ್ಯಕ್ಕೆ ಮಾದರಿಯಾಗಿದೆ. ಸಹಕಾರಿ ಸಂಘಗಳನ್ನು ಭಾವನಾತ್ಮಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಸಹಕಾರ ಭಾರತಿ ದೇಶಾದ್ಯಂತ ಯುವ ಪಡೆಯನ್ನು ಕಾರ್ಯರೂಪಕ್ಕೆ ಇಳಿಸಿ ಸಹಕಾರಿ ಕ್ಷೇತ್ರವನ್ನು ಸುಸಂಸ್ಕೃತವಾಗಿ ಕಟ್ಟಿ ಬೆಳೆಸುವಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಮುಂದೆ ಸಹಕಾರಿ ರಂಗಕ್ಕೆ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಸ್ಪಂದನೆ ದೊರೆತು ಇಪ್ಪತ್ತೊಂದನೆ ಶತಮಾನ ಭಾರತದ ಶತಮಾನವಾಗಲಿದೆ ಎಂದು ರಮೇಶ್ ವೈದ್ಯ ಹೇಳಿದರು. ಪ್ರಧಾನ ಕಛೇರಿಯ ಹವಾನಿಯಂತ್ರಿತ ವ್ಯವಸ್ಥೆಯನ್ನು ಉದ್ಘಾಟಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ ದೇಶದಲ್ಲಿ ಕಟ್ಟಕಡೆಯ ರೈತನಿಗೂ ಸವಲತ್ತುಗಳನ್ನು ಮುಟ್ಟಿಸುವ ಕಾರ್ಯವನ್ನು ಸಹಕಾರಿ ಸಂಘಗಳು ಮಾಡುತ್ತಿವೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನಿಷ್ಟ ಪ್ರಾದೇಶಿಕ ಭಾಷೆ ಗೊತ್ತಿದಲ್ಲದ ಸಿಬ್ಬಂದಿಗಳಿಂದಾಗಿ ಅನ್ಯಾಯವಾಗುತ್ತಿದೆ. ಆದರೆ ಪ್ರಾಮಾಣಿಕ ಸೇವೆ ಮಾಡುವ ಸಹಕಾರಿ ಸಂಘಗಳಿಗೆ ಆದಾಯ ತೆರಿಗೆ, ಸೇವಾ ತೆರಗೆಗಳನ್ನು ವಿಧಿಸುವ ನೋಟೀಸ್‍ಗಳ ಮೂಲಕ ಪ್ರಹಾರ ನಡೆಸಲಾಗುತ್ತಿದೆ. ಈ ಸಮಸ್ಯೆಯಿಂದ ಸಂಘಗಳನ್ನು ಪಾರು ಮಾಡಲು ಕೇಂದ್ರ ಸರಕಾರದ ಸಚಿವ ಮಟ್ಟದಲ್ಲಿ ರಮೇಶ್ ವೈದ್ಯ ಹಾಗೂ ಕೊಂಕೋಡಿ ಪದ್ಮನಾಭ ಅವರು ಪ್ರಯತ್ನಿಸಬೇಕು ಎಂದರು.

Also Read  ಉಪ್ಪಿನಂಗಡಿಯಿಂದ ಕಳವಾದ ದ್ವಿಚಕ್ರ ವಾಹನ ಶನಿವಾರಸಂತೆಯಲ್ಲಿ ಪತ್ತೆ ➤ ಮಾಲಕ ದೇವರ ಮೊರೆಹೋಗಿ ಹೊರಬರುತ್ತಲೇ ನಡೆಯಿತು ಪವಾಡ..!

ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಯೋಜನೆಯಡಿ ಸ್ಥಾಪಿಸಲಾಗಿರುವ ಮಣ್ಣುಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿದ ಸಹಕಾರ ಭಾರತಿಯ ರಾಷ್ಟ್ರೀಯ ಸಹ ಸಂಘಟನಾ ಪ್ರಮುಖ್ ಕೊಂಕೋಡಿ ಪದ್ಮನಾಭ ಮಾತನಾಡಿ ಆಲಂಕಾರು ಪ್ರಾ.ಕೃಷಿ ಪತ್ತಿನ ಸಹಕಾರಿ ಸಂಘವನ್ನು ಕಟ್ಟಿ ಬೆಳೆಸಿ ರಾಜ್ಯದ ಉತ್ತಮ ಸಹಕಾರಿ ಸಂಘ ಎನ್ನುವ ಹಂತಕ್ಕೆ ತಲುಪಿಸಲು ಕಳೆದ 28 ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ರಮೇಶ್ ಭಟ್ ಅವರು ನೀಡಿದ ಪ್ರಾಮಾಣಿಕ ಹಾಗೂ ನಿಷ್ಕಳಂಕ ಸೇವೆಯೇ ಕಾರಣ ಎಂದರು. ರೈತ ಸಭಾಭವನಕ್ಕೆ ಅನುದಾನ ಒದಗಿಸಿದ ಮಹನೀಯರ ಹಾಗೂ ಸಂಸ್ಥೆಗಳ ನಾಮಫಲಕವನ್ನು ಅನಾವರಣ ಮಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕ ಎಸ್.ಅಂಗಾರ ಮಾತನಾಡಿ ಸಹಕಾರಿ ಸಂಘಗಳು ಇಂದು ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಿವೆ, ಇನ್ನು ಇವುಗಳು ಸರಕಾರ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವಂತಾಗಬೇಕು, ಸರಕಾರದ ವಿವಿಧ ನಿಗಮ ಮಂಡಳಿಗಳಿಂದ ದೊರೆಯುವ ಅನೇಕ ಸವಲತ್ತುಗಳು ಇಂದು ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಅನುಷ್ಟಾನವಾಗುತ್ತಿರುವುದರಿಂದ ಜನ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ನಿಗಮಗಳ ಯೋಜನೆಗಳು ಸಹಕಾರಿ ಸಂಘಗಳ ಮುಖಾಂತರ ಅನುಷ್ಟಾನ ಮಾಡುವ ನಿಟ್ಟಿನಲ್ಲಿ ಸರಕಾರದ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.


ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್ ಸಂಸ್ಥೆಯಲ್ಲಿ ಅಳವಡಿಸಿದ ಸೋಲಾರ್ ಘಟಕವನ್ನು ಉದ್ಘಾಟಿಸಿದರು. ದ.ಕ ಜಿಲ್ಲಾ ಸಹಕಾರಿ ಯೂನಿಯನ್‍ನ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಶುಭ ಹಾರೈಸಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೆಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸರ್ವೋತ್ತಮ ಗೌಡ, ಪ್ರಮೀಳಾ ಜನಾರ್ಧನ್, ತಾಲೂಕು ಪಂಚಾಯಿತಿ ಸದಸ್ಯರಾದ ತೇಜಸ್ವಿನಿ ಎಸ್ ಗೌಡ, ತಾರಾ ತಿಮ್ಮಪ್ಪ ಪೂಜಾರಿ, ಸಂಘದ ವ್ಯಾಪ್ತಿಯ ಗ್ರಾ.ಪಂ ಅಧ್ಯಕ್ಷರುಗಳಾದ ಪ್ರಶಾಂತ್ ಆರ್.ಕೆ, ಸುನಂದ ಬಾರ್ಕುಲಿ, ಹೇಮಾಮೋಹನ್‍ದಾಸ್ ಶೆಟ್ಟಿ, ಸುಗುಣ ಅತಿಥಿಗಳಾಗಿ ಭಾಗವಹಿಸಿದದ್ದರು. ಸಂಘದ ಉಪಾಧ್ಯಕ್ಷ ರಮೇಶ್ ಎನ್.ಸಿ, ನಿರ್ದೆಶಕರಾದ ಪೂವಪ್ಪ ನಾಯ್ಕ್, ಸುಧಾಕರ ರೈ, ಕುಂಞ ಮುಗೇರ, ಮಧುಕುಮಾರ್, ಜಯಕರ ಪೂಜಾರಿ, ಮೋನಪ್ಪ ಬೊಳ್ಳರೋಡಿ, ಪೂರ್ಣಿಮಾ ಹಿರಿಂಜ, ಮಮತಾ ಆನೆಗುಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಳೆದ 28 ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ಸಂಘವನ್ನು ಅತ್ಯುನ್ನತ ಸ್ಥಾನಕ್ಕೇರಿಸಿದ ರಮೇಶ್ ಭಟ್ ಉಪ್ಪಂಗಳ ಅವರನ್ನು ಸನ್ಮಾನಿಸಲಾಯಿತು. ದಯಾನಂದ ರೈ ಮನವಳಿಕೆ ಪರಿಚಯಿಸಿದರು. ಕಟ್ಟಡ ನಿರ್ಮಾಣ ಮಾಡಿರುವ ಮಾಸ್ಟರ್ ಪ್ಲಾನರಿಯ ಪ್ರಭಾಕರ್, ಇಂಟೀರಿಯರ್ ಡೆಕೊರೇಟರ್ ಅಜಯ್‍ಕೃಷ್ಣ ಮತ್ತಿತರರನ್ನು ಗೌರವಿಸಲಾಯಿತು.

Also Read  ಮಾನವೀಯತೆ ಮೆರೆದ ಮಹಿಳಾ ಪೊಲೀಸ್ ➤ ಬಡ ವೃದ್ಧೆಗೆ ಹೊಸ ಬಟ್ಟೆ ಕೊಟ್ಟು ಮನೆಗೆ ಬಿಟ್ಟು ಬಂದ ಅಧಿಕಾರಿ

ಸಂಘದ ಅಧ್ಯಕ್ಷ ರಮೇಶ ಭಟ್ಟ ಉಪ್ಪಂಗಳು ಪ್ರಸ್ತಾವನೆ ಗೈದು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರೈ ಮನವಳಿಕೆ ವಂದಿಸಿದರು. ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು. ಕೇಂದ್ರ ಸರಕಾರದ ಫಸಲ್ ಬೀಮಾ ಯೋಜನೆಯಲ್ಲಿ ರೈತರಿಗೆ ಅನುಕೂಲವಾಗುತ್ತಿದೆ. 2017-18 ರಲ್ಲಿ ನಮ್ಮ ಸಂಘದ 253 ಸದಸ್ಯರು 10,11,000 ರೂ ವಿಮಾಕಂತು ಪಾವತಿಸಿದ್ದರು, ಇವರಿಗೆ 1,56,70,000 ರೂ ಪರಿಹಾರ ದೊರಕಿದೆ, ನಮ್ಮ ಸಂಘದ ಸದಸ್ಯರೊಬ್ಬರಿಗೆ ಸುಮಾರು ಎಂಟು ಲಕ್ಷ ರೂ ತನಕ ಪರಿಹಾರ ಸಿಕ್ಕಿದೆ. ಈ ಬಾರಿ 2018-19 ರ ಸಾಲಿನಲ್ಲಿ 1461 ಸದಸ್ಯರು ಒಟ್ಟು 40,67,000 ರೂ ಕಂತು ಪಾವತಿಸಿದ್ದಾರೆ. ಪಾವತಿಸಿದ ರೈತರಿಗೆ ನಾಲ್ಕೈದು ಪಟ್ಟು ಜಾಸ್ತಿ ಪರಿಹಾರ ಸಿಗುವ ನಿರೀಕ್ಷೆ ಇದೆ. ಆದ್ದರಿಂದ ಈ ಯೋಜನೆ ರೈತ ಸ್ನೇಹಿಯಾಗಿದೆ ಎಂದು ರಮೇಶ್ ಭಟ್ ಹೇಳಿದರು.

Also Read  ಮೃಗಾಲಯದಲ್ಲಿದ್ದ 6 ತಿಂಗಳ ಆನೆ ಮರಿ ಅನಾರೋಗ್ಯದಿಂದ ಸಾವು

 

error: Content is protected !!
Scroll to Top