ಕರಾವಳಿ ಉತ್ಸವದಲ್ಲಿ ಸಾಂಸ್ಕೃತಿಕ ವೈಭವ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.7   ಪ್ರಸಕ್ತ ವರ್ಷದ ಕರಾವಳಿ ಉತ್ಸವ ಕಾರ್ಯಕ್ರಮದಲ್ಲಿ ಅತ್ಯುನ್ನತ ಗುಣಮಟ್ಟದ ಹಾಗೂ ವೈವಿಧ್ಯಮಯ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.


ಅವರು ಕರಾವಳಿ ಉತ್ಸವ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರದ ಲಾಲ್‍ಬಾಗ್ ಕರಾವಳಿ ಉತ್ಸವ ಮೈದಾನ ಹಾಗೂ ಕದ್ರಿ ಪಾರ್ಕ್‍ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತೀ ದಿನ ನಡೆಯಲಿವೆ, ಜನವರಿ ತಿಂಗಳ ಮೊದಲ ವಾರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿ ಶೀಘ್ರವೇ ದಿನಾಂಕ ಅಂತಿಮಗೊಳಿಸಲಾಗುವುದು ಎಂದು  ಹೇಳಿದರು. ಕರಾವಳಿ ಉತ್ಸವದ ಮೊದಲ ದಿನ ನಗರದ ನೆಹರೂ ಮೈದಾನದಿಂದ ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ ಕರಾವಳಿ ಉತ್ಸವ ಮೈದಾನದವರೆಗೆ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ವೈವಿಧ್ಯಮಯ ಕಲಾ ಪ್ರಕಾರಗಳ ಸಾಂಸ್ಕೃತಿಕ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಇದು ಮಂಗಳೂರು ನಗರದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ, ಸಾರ್ವಜನಿಕರಿಗೆ ನಾಡಿನ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ನುಡಿದರು. ಕರಾವಳಿ ಉತ್ಸವ ಪ್ರಯುಕ್ತ 10 ದಿನಗಳ ಕಾಲ ಉತ್ಸವ ಮೈದಾನ ಹಾಗೂ ಕದ್ರಿ ಪಾರ್ಕ್‍ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ಹಿರಿಮೆ ಹಾಗೂ ಸಾಂಪ್ರದಾಯಿಕ ಅಲ್ಲದೇ ಜನಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುವುದು. ಇದಕ್ಕಾಗಿ ತಕ್ಷಣದಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ಅವರು ಸೂಚಿಸಿದರು.

Also Read  ಉಳ್ಳಾಲ: ಗಾಂಜಾ ಮಾರಾಟಕ್ಕೆ ಯತ್ನ ➤ ಇಬ್ಬರ ಬಂಧನ

ಕರಾವಳಿ ಉತ್ಸವ ಪ್ರಯುಕ್ತ ಕ್ರೀಡಾಕೂಟ ಏರ್ಪಡಿಸಲಾಗುವುದು. ಕ್ರೀಡಾಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಬೇಕು. ಇದರಲ್ಲಿ ಜಿಲ್ಲೆಯ ಎಲ್ಲಾ ಕ್ರೀಡಾತಂಡಗಳು, ಶಿಕ್ಷಣ ಸಂಸ್ಥೆಗಳ ಕ್ರೀಡಾಪಟುಗಳು ಪಾಲ್ಗೊಳ್ಳಲು ಹಾಗೂ ಕ್ರೀಡಾಳುಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲು ಜಿಲ್ಲಾಧಿಕಾರಿಗಳು ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಸೂಚಿಸಿದರು. ಅದೇ ರೀತಿ ಎರಡು ದಿನಗಳ ಯುವ ಉತ್ಸವವನ್ನೂ ಪರಿಣಾಮಕಾರಿಯಾಗಿ ಆಯೋಜಿಸಬೇಕು, ಜಿಲ್ಲೆಯ ಎಲ್ಲಾ ಕಾಲೇಜುಗಳ ಯುವಕ-ಯುವತಿಯರು ಇದರಲ್ಲಿ ಭಾಗವಹಿಸಿ ಕಾರ್ಯಕ್ರಮ ನೀಡಬೇಕಿದೆ ಎಂದು ಸಿಂಧೂ ರೂಪೇಶ್ ತಿಳಿಸಿದರು. ಕರಾವಳಿ ಉತ್ಸವದ ಕೊನೆಯ ಮೂರು ದಿನಗಳಲ್ಲಿ ನಡೆಯುವ ಬೀಚ್ ಉತ್ಸವವನ್ನು ಪಣಂಬೂರು ಬೀಚ್‍ನಲ್ಲಿ ನಡೆಸಲಾಗುವುದು. ಬೀಚ್ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಬೇಕು. ಬೀಚ್‍ನಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಹೆಚ್ಚು ತಂಡಗಳು ಭಾಗವಹಿಸಲು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.

Also Read  ಮುಂಬೈ: ಸ್ವಂತ ಮಗನನ್ನೇ ಉಸಿರುಗಟ್ಟಿ ಕೊಂದ ತಾಯಿ...!!!


ಕರಾವಳಿ ಉತ್ಸವ ಪ್ರಯುಕ್ತ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಅಗತ್ಯ ಸಿದ್ಧತೆಗಳೊಂದಿಗೆ ಪರಿಣಾಮಕಾರಿಯಾಗಿ ನಡೆಸಬೇಕು. ಯಾವುದೇ ಕಾರಣಕ್ಕೂ ಕೊನೆಯ ಕ್ಷಣದಲ್ಲಿ ರದ್ದುಗೊಳಿಸುವ ಪ್ರಸಂಗ ಎದುರಾಗಬಾರದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಕರಾವಳಿ ಉತ್ಸವ ಪ್ರಯುಕ್ತ ರಚಿಸಲಾಗಿರುವ ಎಲ್ಲಾ ಉಪಸಮಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಸಾರ್ವಜನಿಕರೂ ಇದರಲ್ಲಿ ಪಾಲ್ಗೊಂಡು ಇದನ್ನು ಜನತೆಯ ಉತ್ಸವವನ್ನಾಗಿ ಮಾಡಬೇಕು ಎಂದು ಸಿಂಧೂ ಬಿ. ರೂಪೇಶ್ ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ, ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್, ಉಪ ಆಯುಕ್ತ ಸಂತೋಷ್, ತಹಶೀಲ್ದಾರ್ ಗುರುಪ್ರಸಾದ್, ಕರಾವಳಿ ಉತ್ಸವ ವಿವಿಧ ಉಪಸಮಿತಿಗಳ ಮುಖ್ಯಸ್ಥರು ಭಾಗವಹಿಸಿದ್ದರು.

error: Content is protected !!
Scroll to Top