(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.6 ಇಂದು ವಿಶ್ವ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಜಾಗತಿಕ ತಾಪಮಾನ. ಪರಿಸರ ಮಾಲಿನ್ಯ ಜಾಗತಿಕ ತಾಪಮಾನಕ್ಕೆ ಮುಖ್ಯ ಕಾರಣ ತಾಪಮಾನದಲ್ಲಿ ಹೆಚ್ಚಳವಾದಂತೆ ಸಮುದ್ರದ ನೀರಿನ ಮಟ್ಟ ಹೆಚ್ಚಾಗುತ್ತದೆ. ಮಾಲಿನ್ಯ ನಿಯಂತ್ರಿಸಲು ನಾವೆಲ್ಲರೂ ಸಕ್ರಿಯವಾದ ಪಾತ್ರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹೇಳಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಲಯನ್ಸ್ ಕ್ಲಬ್ ವೆಲೆನ್ಸಿಯಾ ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಜಾಗತಿಕ ತಾಪಮಾನ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ನಂತರ ಪರಿಸರ ರಕ್ಷಣೆಯ ಕುರಿತು ಪ್ರಮಾಣ ವಚನ ಬೋಧಿಸಿ ಮಾತನಾಡಿ, ತಾಪಮಾನ ಏರಿಕೆಯಾಗುತ್ತಿರುವ ಕಾರಣ ಹಾಗೂ ಅದರಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ, ನಮ್ಮೆಲ್ಲರಿಗೂ ಅಗತ್ಯವಿರುವ ಹಸಿರು ಪರಿಸರ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಭೂಮಿ ಮೇಲಿನ ಎಲ್ಲಾ ಜೀವ ಜಂತುಗಳ ರಕ್ಷಣೆ ನಮ್ಮ ಹೊಣೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಯನ್ಸ್ 317ಡಿ ಜಿಲ್ಲಾ ರಾಜ್ಯಪಾಲ ರೋನಾಲ್ಡ್ ಗೋಮ್ಸ್, ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಜಯಪ್ರಕಾಶ್ ನಾಯ್ಕ್, ವೆಲೆನ್ಸಿಯಾ ಲಯನ್ಸ್ ಘಟಕದ ಅಧ್ಯಕ್ಷ ಲೆಸ್ಲಿ ಡಿಸೋಜ, ಲಯನ್ಸ್ ಕಾರ್ಯದರ್ಶಿ ಓಸ್ವಾಲ್ಡ್ ಡಿಕುನ್ಹಾ, ಖಜಾಂಜಿ ಲಾರೆನ್ಸ್ ಸೆರಾವೊ ಹಾಗೂ ಸ್ಥಳೀಯ ಬದ್ರಿಯಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.