(ನ್ಯೂಸ್ ಕಡಬ) newskadaba.com, ಹೊಸಂಗಡಿ, ಡಿ.3 ತ್ಯಾಗವಿಲ್ಲದೆ ಬದುಕಿಲ್ಲ ಅದರಲ್ಲೂ ಜನರ ಸೇವೆಯಲ್ಲಿಯೇ ನಿರತರಾಗಿರುವ ವೈದ್ಯರಲ್ಲಿ ತ್ಯಾಗದ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ಹಿರಿಯ ಸಾಹಿತಿ ಡಾ|| ರಮಾನಂದ ಬನಾರಿ ಅಭಿಪ್ರಾಯಪಟ್ಟರು. ಹೊಸಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಹೈಲ್ಯಾಂಡ್ ಕಾಂಪ್ಲೆಕ್ಸ್‍ಗೆ ಸ್ಥಳಾಂತರಗೊಂಡ ಸುರಕ್ಷ ದಂತ ಚಿಕಿತ್ಸಾಲಯವನ್ನು ಉದ್ಘಾಟಿಸಿ ಮಾತನಾಡಿದರು.
ಭಗವದ್ಗೀತೆಯಲ್ಲಿ ಯಜ್ಞ, ದಾನ ಹಾಗೂ ತಪಸ್ಸು ಆದರ್ಶ ಮನುಷ್ಯ ಜೀವನದಲ್ಲಿರಬೇಕೆಂದು ತಿಳಿಸಲಾಗಿದೆ. ಆದರೆ ಈ ಮೂರರಲ್ಲಿಯೂ ದಾನವೊಂದೇ ಅಂತರ್ಗತವಾಗಿರುತ್ತದೆ. ವೃತ್ತಿಯೊಂದಿಗೆ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಡಾ|| ಮುರಲೀಮೋಹನ ಚೂಂತಾರು ಹಾಗೂ ಡಾ|| ರಾಜಶ್ರೀ ಮೋಹನ ಅವರ ಕೈಂಕರ್ಯ ಶ್ಲಾಘನೀಯ ಎಂದರು ಮತ್ತು ಹೊಸಂಗಡಿಯ ಪ್ರಗತಿಗೆ ವೈದ್ಯ ದಂಪತಿಗಳ ಸೇವೆ ಶ್ಲಾಘನೀಯ ಎಂದು ಅವರು ನುಡಿದರು. ಹಿರಿಯ ದಂತ ವೈದ್ಯರಾದ ಡಾ|| ಗಣಪತಿ ಭಟ್ ಕುಳಮರ್ವ ಮಾತನಾಡಿ, ಆಧುನಿಕ ತಂತ್ರಜ್ಞಾನಗಳೊಂದಿಗೆ ಸಜ್ಜೀಕರಿಸಿದ ಈ ಚಿಕಿತ್ಸಾಲಯ ದಂತ ವೈದ್ಯಕೀಯದ ಮಹಾ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದೆ. ಸಮಾಜ ಸೇವೆಯೊಂದಿಗೆ ಬದುಕನ್ನು ಪ್ರಕಾಶಮಾನವಾಗಿ ಬದುಕುವುದೇ ನಿಜವಾದ ಜೀವನ ಎಂದರು.
ಕಾರ್ಯಕ್ರಮದಲ್ಲಿ ವೈದ್ಯ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ|| ರಾಜಶ್ರೀ ಮೋಹನ, ಹಿರಿಯರಾದ ಲಕ್ಷ್ಮೀನಾರಾಯಣ ಭಟ್ ಚೂಂತಾರು, ಉಪಸ್ಥಿತರಿದ್ದರು. ಸಿರಿ, ಸ್ವಸ್ತಿ ಹಾಗೂ ಸಾನ್ವಿ ಪ್ರಾರ್ಥಿಸಿದರು. ಡಾ|| ಮುರಲೀ ಮೋಹನ ಚೂಂತಾರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಳೆದ 22 ವರ್ಷಗಳಿಂದ ಹೊಸಂಗಡಿಯ ಪರಿಸರದ ಜನತೆ ತೋರಿದ ಪ್ರೀತಿ, ವಾತ್ಸಲ್ಯ ಮತ್ತು ಗೌರವಗಳಿಗೆ ಚಿರಋಣಿಯಾಗಿರುತ್ತೇನೆ ಎಂದರು. ಕಾಸರಗೋಡು ಜಿಲ್ಲೆಯ ರೋಗಿಗಳ ಸೇವೆಗೆ ಸದಾಸಿದ್ಧರಾಗಿರುತ್ತೇವೆ ಮತ್ತು ಬದ್ಧರಾಗಿರುತ್ತೇವೆ ಎಂದು ನುಡಿದರು. ಕಾರ್ಯಕ್ರಮವನ್ನು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಸದಾಶಿವ ಆಳ್ವ, ಸಲೀಂ ಮತ್ತು ನೆಪೋಲಿಯನ್ ಮೊಂತೆರೋ ದೀಪ ಬೆಳಗಿಸಿ ಉದ್ಘಾಟಿಸುವುದರ ಮೂಲಕ ವೈದ್ಯರಿಗೆ ಯಾವುದೇ ಜಾತಿ, ಧರ್ಮ ಮತ್ತು ಮತದ ಭೇದವಿಲ್ಲ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಲಾಯಿತು. ನ್ಯಾ. ಗಣೇಶ ಸುಂದರ್ ವಂದನಾರ್ಪಣೆ ಮಾಡಿದರು. ಶ್ರೀ ರಾಮಕೃಷ್ಣ ಭಟ್ ಚೊಕ್ಕಾಡಿ ಇವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು. ಕಳೆದ 22 ವರ್ಷಗಳಿಂದ ಹೊಸಂಗಡಿಯ ರಿಫಾ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುರಕ್ಷ ದಂತ ಚಿಕಿತ್ಸಾಲಯವನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ಹೈಲ್ಯಾಂಡ್ ಕಾಂಪ್ಲೆಕ್ಸ್‍ಗೆ ಸ್ಥಳಾಂತರಗೊಳಿಸಲಾಗಿದೆ.