ಸೆಲೆಬ್ರಿಟಿಗಳಿಗೆ ಅಚ್ಚುಮೆಚ್ಚಾದ ಕಪ್ಪು ಬಣ್ಣ

(ನ್ಯೂಸ್ ಕಡಬ) newskadaba.com, ವಿಶೇಷ ಲೇಖನ, ಡಿ.2  ಹಿಂದೆಲ್ಲಾ ಕಪ್ಪು ಎಂದರೆ ಅಶುಭ, ನಿಷಿದ್ಧ, ಪ್ರತಿಭಟನೆ ಮುಂತಾದ ಅರ್ಥಗಳಿರುವುದರಿಂದ ಅದನ್ನು ತೊಡಲು ಎಲ್ಲರೂ ಹಿಂದೆಮುಂದೆ ನೋಡುತ್ತಿದ್ದರು. ಆದರೆ ಈಗ ಜನರ ಮನಸ್ಥಿತಿ, ನಂಬಿಕೆಗಳು ಬದಲಾಗುತ್ತಿವೆ. ಜನರು, ಕಪ್ಪು ಬಣ್ಣದ ಉಡುಗೆಯನ್ನು ಹುಟ್ಟು ಹಬ್ಬ, ಪೂಜೆ, ಮದುವೆ, ಹಬ್ಬ ಮತ್ತು ಹರಿದಿನಗಳಲ್ಲಿ ಉಡುತ್ತಿರಲಿಲ್ಲ. ಆದರೆ ಈಗೀಗ ಆ ಭಾವನೆ ದೂರವಾಗುತ್ತಿದೆ. ಕಪ್ಪು ಬಣ್ಣದ ಬಗೆಗಿನ ಅಭಿಪ್ರಾಯ ಬದಲಾಗುವುದಕ್ಕೆ ಕಪ್ಪು ಬಣ್ಣದ ಉಡುಗೆ ತೊಟ್ಟರೆ ಸಪೂರವಾಗಿ ಕಾಣಿಸುತ್ತೇವೆ ಎಂಬ ನಂಬಿಕೆಯೂ ಕಾರಣವಾಗಿದೆ.

ಕಪ್ಪು ಬಣ್ಣದ ಲಂಗ – ರವಿಕೆ – ದುಪ್ಪಟಾ, ಉದ್ದ ಲಂಗ, ಲಂಗ ದಾವಣಿ, ಸೀರೆ, ಘಾಗ್ರಾ ಚೋಲಿ, ಗೌನ್ ಗಳು, ಅನಾರ್ಕಲಿ, ಚೂಡಿದಾರ, ಹೀಗೆ ಬಗೆಬಗೆಯ ಉಡುಪಿನಲ್ಲಿ ಹಿಂದಿ ಚಿತ್ರ ನಟಿಯರಾದ ಶ್ರದ್ಧಾ ಕಪೂರ್, ಡಯಾನಾ ಪೆಂಟಿ, ಕಿಯಾರ ಅಡ್ವಾಣಿ, ಕೃತಿ ಸನೋನ್, ಆಲಿಯಾ ಭಟ್, ಸಾರ ಅಲಿ ಖಾನ್, ಕರೀನಾ ಕಪೂರ್, ಕತ್ರಿನಾ ಕೈಫ್, ಕಾಜೋಲ…, ವಿಶ್ವ ಸುಂದರಿ ಮಾನುಷಿ ಶಿಲ್ಲರ್ ಸೇರಿದಂತೆ ಅನೇಕ ನಟಿಯರು, ಗಾಯಕಿಯರು ಮತ್ತು ಇತರ ಸೆಲೆಬ್ರಿಟಿಗಳು ಕಾಣಿಸಿಕೊಂಡಿರುವುದನ್ನು ಅನೇಕರು ನೋಡಿರಬಹುದು.

Also Read  ಬಜೆಟ್ ಬಳಿಕ ಚಿನ್ನದ ದರ ಕುಸಿತ

ರೆಡ್ ಕಾರ್ಪೆಟ್ ಇವೆಂಟ್, ಅವಾರ್ಡ್ ಫಂಕ್ಷನ್, ಪಾರ್ಟಿ, ಸಿನಿಮಾ ಪ್ರಮೋಷನ್, ಫ್ಯಾಷನ್ ಶೋ, ರಾಂಪ್ ವಾಕ್, ಹೀಗೆ ಎಲ್ಲೆಲ್ಲೂ ಬ್ಲಾಕ್ ಬ್ಯೂಟಿಗಳು ರಾರಾಜಿಸುತ್ತಿದ್ದಾರೆ. ತೊಟ್ಟ ಉಡುಗೆಯೇ ಇಷ್ಟು ಗ್ರಾಂಡ್ ಆಗಿದ್ದ ಮೇಲೆ ಪ್ರತ್ಯೇಕವಾಗಿ ಜಗಮಗಿಸುವ ಆಭರಣಗಳು, ಆಕ್ಸೆಸರೀಸ್ ಮತ್ತು ಬ್ರೈಟ್ ಮೇಕಪ್ ಮಾಡಬೇಕಾಗಿಲ್ಲ. ಸರಳವಾದ ಕೇಶ ವಿನ್ಯಾಸ, ಕಡಿಮೆ ಆಕ್ಸೆಸರೀಸ್, ಲೈಟ್ ಮೇಕಪ್ ಮತ್ತು ಸಿಂಪಲ್ ಆಭರಣಗಳನ್ನು ತೊಟ್ಟರೆ ಸಾಕು. ಇವುಗಳಲ್ಲಿ ಸ್ಲಿವ್ಲೆಸ್, ಕ್ರಾಪ್ ಟಾಪ್ ಅಥವಾ ಬ್ಯಾಕ್ ಲೆಸ್ ರವಿಕೆಗಳ ಆಯ್ಕೆಗಳೂ ಇವೆ. ಲಂಗಗಳಲ್ಲಿ ಸೈಡ್ ಸ್ಲಿಟ್, ಸೆಮಿ ಟ್ರಾನ್ಸ್ಪರೆಂಟ್, ಫಿಶ್ ಕಟ್, ಡಬಲ್ ಲೇಯರ್ಡ್, ಹೀಗೆ ವೈವಿಧ್ಯಮಯ ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

Also Read  ವೀರೇಂದ್ರ ಹೆಗ್ಗಡೆ ಅವರಿಂದ 'ಮಂದಾರ' ಪ್ರಾಯೋಗಿಕ ಪತ್ರಿಕೆ ಅನಾವರಣ !

ಕಪ್ಪು ಎಂದಾಕ್ಷಣ, ಈ ಬ್ಲಾಕ್ ಬ್ಯೂಟಿಗಳು ತಲೆಯಿಂದ ಕಾಲವರೆಗೆ ಬರೀ ಕಪ್ಪು ಬಣ್ಣದ ಒನ್ ಪೀಸ್ ಅಥವಾ ಟೂ ಪೀಸ್ ಡ್ರೆಸ್ ತೊಟ್ಟಿರುತ್ತಾರೆ ಎಂದು ಯೋಚಿಸಬಾರದು. ಸಂಪೂರ್ಣವಾಗಿ ಕಪ್ಪು ಬಣ್ಣದ ಬಟ್ಟೆಯಿಂದ ಉಡುಗೆ ಹೊಲಿದಿದ್ದರೂ ಅದರಲ್ಲಿ ಸ್ವರ್ಣದ ಬಣ್ಣದ ಕಸೂತಿ, ಮುತ್ತು-ರತ್ನ-ಗಾಜು-ಕನ್ನಡಿ ಅಥವಾ ಇನ್ನಿತರ ಹೊಳೆಯುವಂಥ ವಸ್ತುಗಳು, ಬಣ್ಣಗಳ ಚಿತ್ತಾರ, ಪಟ್ಟಿ ಅಥವಾ ಚಿಕ್ಕ-ಪುಟ್ಟ ಚಿಹ್ನೆಗಳು, ಮುಂತಾದವುಗಳನ್ನು ಮೂಡಿಸಿರುವ ಉಡುಗೆಯಾಗಿರುತ್ತದೆ.

error: Content is protected !!
Scroll to Top