ದೇಶದಲ್ಲಿ ಸಮಾನತೆ, ಏಕತೆಯನ್ನು ರೂಪಿಸುವಲ್ಲಿ ಸಂವಿಧಾನ ಮುಖ್ಯ ಪಾತ್ರ ನಿರ್ವಹಿಸುತ್ತದೆ

 (ನ್ಯೂಸ್ ಕಡಬ) newskadaba.com, ಮಂಗಳೂರು , ನ.30. ನಮ್ಮ ದೇಶದಲ್ಲಿ ಸಮಾನತೆ, ಏಕತೆಯನ್ನು ರೂಪಿಸುವಲ್ಲಿ ನಮ್ಮ ಸಂವಿಧಾನ ಮಹತ್ವಪೂರ್ಣ ಮತ್ತು ಮುಖ್ಯಪಾತ್ರವನ್ನೇ ನಿರ್ವಹಿಸುತ್ತದೆ. ದೇಶದ ಪ್ರತಿಯೊಬ್ಬ ಪ್ರಜೆಯು ಘನತೆ, ಸ್ವಾತಂತ್ರ್ಯ, ಸ್ವಾಭಿಮಾನದಿಂದ ಬಾಳಲು ಸಂವಿಧಾನ ದಾರಿ ದೀಪವಿದ್ದಂತೆ ಎಂದು ಮಂಗಳೂರು ವಲಯದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ,ಅಪ್ಪಾಜಿ ಗೌಡ ಎಸ್.ಬಿ ಹೇಳಿದರು.

ಬುಧವಾರ ಕಾಲೇಜು ಶಿಕ್ಷಣ ಇಲಾಖೆ, ದ.ಕ ಜಿಲ್ಲಾಡಳಿತ ಮತ್ತು ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಒಂದು ದೇಶ ಸಂವಿಧಾನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮಟ್ಟದ ಅರಿವು ಕಾರ್ಯಕ್ರಮ ಹಾಗೂ ದ.ಕ ಜಿಲ್ಲಾ ಮಟ್ಟದ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ, ಭಾಷಣ ಮತ್ತು ದೇಶಭಕ್ತಿ ಗೀತೆ ಸ್ಫರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ ದೇಶದೆಲ್ಲೆಡೆ ಶಾಂತಿ ಸುವ್ಯವಸ್ಥೆ ಕಾಪಾಡಲು, ಸಮಾನತೆಯನ್ನು ಭದ್ರಗೊಳಿಸಲು ಸಂವಿಧಾನ ಅತ್ಯವಶ್ಯಕ ಎಂದು ಅವರು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತ ಡಾ.ಸಂತೋಷ್ ಕುಮಾರ್ ಅತಿಥಿಗಳಾಗಿ ಭಾಗವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಕೆನರಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಪಿ.ಅನಂತಕೃಷ್ಣ ಭಟ್ ಮಾತನಾಡಿ ಸಂವಿಧಾನದ ಪ್ರಾಮುಖ್ಯತೆಯನ್ನು ವಿವರಿಸಿದರು.

Also Read  ಚಾರ್ಮಾಡಿಯಲ್ಲಿ ರಾತ್ರಿ 10.30ರವರೆಗೆ ತೆರಳದ ಮತಗಟ್ಟೆ ಅಧಿಕಾರಿಗಳು ➤ ಅನುಮಾನಗೊಂಡು ಸೇರಿದ ಜನ, ಕೆಲಕಾಲ ಗೊಂದಲ ಸೃಷ್ಟಿ

ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ಬೆಳ್ಳಾಲ ಗೋಪಿನಾಥ್ ರಾವ್ ಮತ್ತು ಮಂಗಳೂರಿನ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರೊ. ಜೆಫ್ರಿ ರೋಡ್ರಿಗಸ್ ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ ಸ್ವಾಗತಿಸಿ ಪ್ರಸ್ತಾವನೆಯ ಮಾತುಗಳನ್ನು ಆಡಿದರು. ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ಡಾ.ಶಿವರಾಮ್.ಪಿ, ಡಾ.ಜಯಕರ ಭಂಡಾರಿ, ಡಾ. ಪ್ರಕಾಶ್‍ಚಂದ್ರ ಶಿಶಿಲ, ಡಾ, ಶರ್ಮಿಳಾ ರೈ ಮತ್ತು ಕುಕ್ಕೆ ಸುಬ್ರಹ್ಮಣ್ಯ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಬಾಲಕೃಷ್ಣ ಪೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿದ್ಯಾರ್ಥಿನಿ ಕುಮಾರಿ ತೇಜಸ್ವಿನಿ ನಿರೂಪಿಸಿ ಹಿರಿಯ ಗ್ರಂಥಪಾಲಕಿ ಡಾ.ಶೈಲಾರಾಣಿ. ಬಿ ವಂದಿಸಿದರು. ವಿವಿಧ ಪದವಿ ಕಾಲೇಜುಗಳಿಂದ ಆಗಮಿಸಿ ಸ್ಫರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

Also Read  ಮಾರ್ ಇವಾನಿಯೋಸ್- ಬಿ.ಇಡಿ. ಪ್ರಶಿಕ್ಷಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟ

error: Content is protected !!
Scroll to Top