(ನ್ಯೂಸ್ ಕಡಬ) newskadaba.com, ಮಂಗಳೂರು , ನ.30. 2019-20ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಉಚಿತ ಜಾನುವಾರು ವಿಮಾ ಯೋಜನೆ, ಹೈಡ್ರೋಫೋನಿಕ್ಸ್ ಘಟಕ ಸ್ಥಾಪನೆ, ಮೇವು ಕತ್ತರಿಸುವ ಯಂತ್ರ ವಿತರಣೆ, ಮೈಸೂರಿನ ಪಿಂಜರಾಪೋಲ್ ಮತ್ತು ಇತರೆ ಗೋಶಾಲೆಗಳಲ್ಲಿ ಬೆಂಬಲ ನೀಡುವ ಕಾರ್ಯಕ್ರಮ, ಮಹಿಳೆಯರಿಗಾಗಿ ಪಶುಸಂಗೋಪನಾ ಕಾರ್ಯಕ್ರಮ (ಹೈನುಗಾರಿಕೆ 3ಕುರಿ/ಮೇಕೆ), ಜಲಕೃಷಿ ವಿಧಾನದಲ್ಲಿ ಮೇವು ಉತ್ಪಾದನಾ ಮಾಡುವ ವಿಧಾನದ ಕುರಿತು ರೈತರಿಗೆ ಉಚಿತ ತರಬೇತಿ, ಪ.ಜಾತಿ/ಪ.ಪಂಗಡದ ಶ್ರೇಯೋಭಿವೃದ್ಧಿ ಯೋಜನೆ, ಗಿರಿರಾಜ ಕೋಳಿ ಮರಿ ವಿತರಣೆ, ಸಹಕಾರ ಕುಕ್ಕುಟ ಮಹಾಮಂಡಲದ ಕಾರ್ಯಕ್ರಮಗಳು, ರಾಷ್ಟ್ರೀಯ ಜಾನುವಾರಿ ಮಿಷನ್, ರಾಷ್ಟ್ರೀಯ ಜಾನುವಾರು ಮಿಷನ್, ವಿಮೆಗೆ ಒಳಪಡದ ಜಾನುವಾರುಗಳು ಆಕಸ್ಮಿಕ ಮರಣ ಹೊಂದಿದ್ದಲ್ಲಿ ಪರಿಹಾರಧನ ವಿತರಣೆ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ದ.ಕ ಜಿಲ್ಲೆಗೆ ಗುರಿ ನಿಗದಿಪಡಿಸಲಾಗಿದೆ.
ಪಶುಪಾಲನಾ ಇಲಾಖೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಫಲಾನುಭವಿ ಆಧಾರಿತ ಕಾರ್ಯಕ್ರಮಗಳು ಇಂತಿವೆ : ಉಚಿತ ಜಾನುವಾರು ವಿಮಾ ಯೋಜನೆ \ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರ ಜಾನುವಾರುಗಳಿಗೆ ಉಚಿತವಾಗಿ ವಿಮೆ ಮಾಡಲು ರೂ.30ಲಕ್ಷ ಅನುದಾನ ಬಿಡುಗಡೆಯಾಗಿದೆ. ಈವರೆಗೆ ರೂ. 23.66 ಲಕ್ಷ ವಿನಿಯೋಗಿತವಾಗಿರುತ್ತದೆ. ಆಸಕ್ತ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರು ಈ ಯೋಜನೆಯಡಿ ಜಾನುವಾರುಗಳಿಗೆ ಉಚಿತವಾಗಿ ವಿಮೆ ಮಾಡಿಸಬಹುದು.
ಹೈಡ್ರೋಫೋನಿಕ್ಸ್ ಘಟಕ ಸ್ಥಾಪನೆ:- ಪ್ರಸಕ್ತ ಸಾಲಿನಲ್ಲಿ ಪ.ಜಾ-2, ಪ.ಪಂ-1, ಸಾಮಾನ್ಯ-8 ಫಲಾನುಭವಿಗಳಿಗೆ ಜಲಕೃಷಿ ವಿಧಾನದಲ್ಲಿ ಮೇವು ಉತ್ಪಾದನಾ ಘಟಕ ಸ್ಥಾಪನೆಗೆ ಸಹಾಯಧನ ನೀಡಲಾಗುವುದು. ಈ ಕಾರ್ಯಕ್ರಮದಡಿ ಘಟಕ ವೆಚ್ಚ ರೂ. 57400 ಗಳಾಗಿದ್ದು ಪ.ಜಾ/ಪ.ಪಂಗಡದವರಿಗೆ ರೂ 56400 ಸಹಾಯಧನ ಮತ್ತು ಸಾಮಾನ್ಯ ವರ್ಗದವರಿಗೆ ರೂ. 51660 ಸಹಾಯಧನ ನೀಡಲಾಗುತ್ತದೆ.
ಹವಮಾನ ಬದಲಾವಣೆ ಯೋಜನೆಯಡಿ ಮೇವು ಕತ್ತರಿಸುವ ಯಂತ್ರ ವಿತರಣೆ:- ಈ ಯೋಜನೆಯಡಿ ಶೇ 50 ರಷ್ಟು ಸಹಾಯಧನದಲ್ಲಿ ರೈತರಿಗೆ 2 ಹೆಚ್.ಪಿ ಮೇವು ಕತ್ತರಿಸುವ ಯಂತ್ರ ವಿತರಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 100 ಫಲಾನುಭವಿಗಳಿಗೆ 2 ಹೆಚ್.ಪಿ ಮೇವು ಕತ್ತರಿಸುವ ಯಂತ್ರ ವಿತರಿಸಲಾಗಿರುತ್ತದೆ.
ಮಹಿಳೆಯರಿಗಾಗಿ ಪಶುಸಂಗೋಪನಾ ಕಾರ್ಯಕ್ರಮ: ಹೈನುಗಾರಿಕೆ, ಕುರಿ/ಮೇಕೆ ಸಾಕಾಣಿಕೆ ಮಾಡಲು ಸಹಾಯಧನ ನೀಡಲಾಗುತ್ತದೆ. ಭೌತಿಕ 124 ಆರ್ಥಿಕ ರೂ. 20.58 ಲಕ್ಷ ನಿಗಧಿಯಾಗಿರುತ್ತದೆ. ಪ.ಜಾ/ಪ.ಪಂ ಫಲಾನುಭವಿಗಳಿಗೆ ಹೈನುಗಾರಿಕೆ, ಕುರಿ/ಮೇಕೆ ಸಾಕಾಣಿಕೆಗೆ ಶೇ. 90 ರಷ್ಟು ಸಹಾಯಧನ, ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಹೈನುಗಾರಿಕೆಗೆ ಶೇ. 30 ರಷ್ಟು, ಕುರಿ/ಮೇಕೆ ಸಾಕಾಣಿಕೆಗೆ ಶೇ 67 ರಷ್ಟು ಸಹಾಯಧನ ನೀಡಲಾಗುತ್ತದೆ.
ಮೈಸೂರಿನ ಪಿಂಜರಪೋಲ್ ಮತ್ತು ಇತರೆ ಗೋಶಾಲೆಗಳಿಗೆ ಬೆಂಬಲ ನೀಡುವ ಕಾರ್ಯಕ್ರಮ:– ಈ ಯೋಜನೆಯಡಿ 50 ಕ್ಕೂ ಹೆಚ್ಚು ಜಾನುವಾರುಗಳನ್ನು ಸಾಕಾಣಿಕೆ ಮಾಡುತ್ತಿರುವ ಖಾಸಗಿ ಗೋಶಾಲೆಗಳಲ್ಲಿನ ಜಾನುವಾರುಗಳ ದೈನಂದಿನ ನಿರ್ವಹಣೆಗಾಗಿ ಪ್ರತಿ ಜಾನುವಾರುವಿಗೆ ದಿನಕ್ಕೆ ರೂ. 17.50 ರಂತೆ ಒಂದು ವರ್ಷಕ್ಕೆ ಅನುದಾನ ನೀಡಲಾಗುತ್ತದೆ. ಹಾಗೂ ಜಾನುವಾರುಗಳ ಚಿಕಿತ್ಸೆಗಾಗಿ, ಗೋಬರ್ ಗ್ಯಾಸ್ ಘಟಕ ಸ್ಥಾಪನೆ ಮತ್ತು ಮೇವು ಅಭಿವೃದ್ಧಿಗಾಗಿ ಸಹಾಯಧನ ನೀಡಲಾಗುತ್ತದೆ.ಜಲಕೃಷಿ ವಿಧಾನದಲ್ಲಿ ಮೇವು ಉತ್ಪಾದನೆ ಮಾಡುವ ವಿಧಾನದ ಕುರಿತು ರೈತರಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು.
ಗಿರಿರಾಜ ಕೋಳಿ ಮರಿ ವಿತರಣೆ:– ಜಿಲ್ಲಾ ಪಂಚಾಯತ್ ಯೋಜನೆಯಡಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಉಚಿತವಾಗಿ ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗೆ ಶೇ. 90 ರಷ್ಟು ಸಹಾಯಧನದಲ್ಲಿ 10 ಕೋಳಿಮರಿಗಳನ್ನು ವಿತರಿಸಲಾಗುವುದು.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಶ್ರೇಯೋಭಿವೃದ್ಧಿ ಯೋಜನೆ (ರಾಜ್ಯ ವಲಯ):- ಈ ಯೋಜನೆಯಡಿ ಹೈನುಗಾರಿಕೆ, ಕುರಿ/ಮೇಕೆ, ಹಂದಿ ಮಾಂಸ ಮಾರಾಟ ಮಳಿಗೆ ಸ್ಥಾಪನೆಗೆ ಸಹಾಯಧನ ನೀಡಲಾಗುತ್ತದೆ. ಈ ಕಾರ್ಯಕ್ರಮದಡಿ ಭೌತಿಕ 23, ಆರ್ಥಿಕ ರೂ. 11.61 ಲಕ್ಷ ನಿಗಧಿಯಾಗಿದ್ದು ಆಯ್ಕೆಯಾದ ಫಲಾನುಭವಿಗಳಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುತ್ತದೆ.
ಅಸೀಲ್ ಕ್ರಾಸ್/ನಾಟಿಕೋಳಿ ಸಾಕಾಣಿಕೆ:- ಜಿಲ್ಲೆಗೆ 388 ಗುರಿ ನಿಗಧಿಯಾಗಿದ್ದು ಪ್ರತಿ ತಾಲ್ಲೂಕಿನ 2 ಗ್ರಾಮಗಳಲ್ಲಿನ 44 ಫಲಾನುಭವಿಗಳನ್ನು (ಒಂದು ಹಳ್ಳಿಗೆ 22 ರಂತೆ) ಆಯ್ಕೆ ಮಾಡಲಾಗುತ್ತದೆ. ಹಾಗೂ ಆಯ್ಕೆಯಾದ ಪ್ರತಿ ಫಲಾನುಭವಿಗಳಿಗೆ 38 ಕೋಳಿಗಳನ್ನು ಉಚಿತವಾಗಿ ನೀಡಲಾಗುತ್ತದೆ.
22 ವಾರದ ಬಿ.ವಿ-380 ತಳಿಯ ಕೋಳಿ ಸಾಕಾಣಿಕೆ:– ಈ ಕಾರ್ಯಕ್ರಮದಡಿ ಜಿಲ್ಲೆಯಲ್ಲಿನ 2 ಗ್ರಾಮಗಳಲ್ಲಿನ 22 ಫಲಾನುಭವಿಗಳಿಗೆ ಪಂಜರದ ಜೊತೆಗೆ 22 ವಾರದ ಬಿ.ವಿ-380 ತಳಿಯ 20 ಕೋಳಿಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತದೆ. (ಘಟಕ ವೆಚ್ಚ ರೂ. 52,000.00 ಸಾಮಾನ್ಯ ವರ್ಗದವರಿಗೆ ರೂ. 26000.00 , ಪ.ಜಾ/ಪ.ಪಂ ರೂ. 46800.00 ಸಹಾಯಧನ ನೀಡಲಾಗುತ್ತದೆ.
ರಾಷ್ಟ್ರೀಯ ಜಾನುವಾರು ಮಿಷನ್:– ಕುರಿ ಮೇಕೆ ಮತ್ತು ಹಂದಿ ಸಾಕಾಣಿಕೆ ಮಾಡಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 90 ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಸಾಮಾನ್ಯ ವರ್ಗದ ರೈತರ ಜಾನುವಾರುಗಳಿಗೆ ಶೇ. 50 ರಷ್ಟು ಸಹಾಯಧನದಲ್ಲಿ , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರ ಜಾನುವಾರುಗಳಿಗೆ ಶೇ. 70 ರಷ್ಟು ಸಹಾಯಧನದಲ್ಲಿ ವಿಮೆ ಮಾಡಲಾಗುತ್ತದೆ.
ವಿಮೆಗೆ ಒಳಪಡದ ಜಾನುವಾರುಗಳ ಆಕಸ್ಮಿಕ ಮರಣ ಹೊಂದಿದ್ದಲ್ಲಿ ಪರಿಹಾರಧನ ವಿತರಣೆ:– ವಿಮೆ ಮಾಡದ ಜಾನುವಾರುಗಳು ಮರಣ ಹೊಂದಿದ್ದಲ್ಲಿ ಗರಿಷ್ಠ ರೂ. 10000 ಸಹಾಯಧನ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು (ಆಡಳಿತ), ಪಶುಪಾಲನಾ ಇಲಾಖೆ, ಕೊಡಿಯಾಲ್ ಬೈಲ್, ಜೈಲ್ ರೋಡ್, ಮಂಗಳೂರು (0824-2492337) ಅಥವಾ ತಾಲ್ಲೂಕು ಮಟ್ಟದ ಪಶು ಆಸ್ಪತ್ರೆ (ಬಂಟ್ವಾಳ-232512, ಬೆಳ್ತಂಗಡಿ-232067, ಮಂಗಳೂರು-2492369, ಪುತ್ತೂರು-230664, ಸುಳ್ಯ-230412) ಅಥವಾ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯಲ್ಲಿನ ಪಶುವೈದ್ಯರನ್ನು ಸಂಪರ್ಕಿಸಬಹುದು ಎಂದು ಉಪ ನಿರ್ದೇಶಕರು (ಆಡಳಿತ), ಪಶುಪಾಲನಾ ಇಲಾಖೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.