(ನ್ಯೂಸ್ ಕಡಬ) newskadaba.com, ಮಂಗಳೂರು, ನ.28. ಗಡಿಯಲ್ಲಿ ದೇಶ ಕಾಯುವ ಯೋಧರಂತೆ, ಸಮಾಜದ ಸೈನಿಕರಾಗಿ ಗೃಹ ರಕ್ಷಕದಳ ಕಾರ್ಯ ನಿರ್ವಹಿಸುತ್ತಿದೆ ಎಂದು ದ.ಕ. ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಷಾ ಹೇಳಿದರು.
ಬುಧವಾರ ಜಿಲ್ಲಾ ಗೃಹ ರಕ್ಷಕದಳ ಕಚೇರಿ ಆವರಣ, ಮೇರಿಹಿಲ್ ಇಲ್ಲಿ ನಡೆದ ದ.ಕ ಜಿಲ್ಲಾ ಗೃಹ ರಕ್ಷಕದಳದ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ-2019 ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಭದ್ರತಾ ವ್ಯವಸ್ಥೆ, ಸಂಚಾರ ನಿರ್ವಹಣೆ ಹಾಗೂ ವಿಪತ್ತುಗಳ ಸಂದರ್ಭದಲ್ಲಿ ಗೃಹರಕ್ಷಕರು ಶ್ಲಾಘನೀಯ ಸೇವೆ ನೀಡಿದ್ದಾರೆ. ಹಲವಾರು ಜಂಜಾಟಗಳ ನಡುವೆ ಸಮಾಜದ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳುತ್ತಾ, ಉತ್ತಮ ನಿರ್ಣಾಯಕ ಪಾತ್ರವಾಗಿ ರೂಪುಗೊಳ್ಳುವಲ್ಲಿ ಗೃಹರಕ್ಷಕದಳ ಯಶಸ್ವಿಯಾಗಿದೆ. ಇದರ ಜೊತೆಗೆ ಕೆಲಸ ಕಾರ್ಯಗಳನ್ನು ಬದಿಗೊತ್ತಿ, ವಿವಿಧ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅವಕಾಶ ಇಲಾಖೆ ನೀಡಿದೆ. ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿ, ಮುಂದೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಪ್ರತಿಯೊಬ್ಬರ ಭಾಗವಹಿಸುವಿಕೆಯಿಂದ ಕ್ರೀಡಾ ಸ್ಪೂರ್ತಿಯನ್ನು ಕಾಣಬಹುದು. ಪ್ರತಿ ದಿನ ರಾತ್ರಿ ಹಗಲೆನ್ನದೆ ಕಾರ್ಯನಿರತರಾಗಿ ಕೆಲಸದಲ್ಲಿ ತೊಡಗಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಾನಸಿಕವಾಗಿಯೂ, ದೈಹಿಕವಾಗಿಯು ಸದೃಢವಾಗಿಸಲು ಕ್ರೀಡೆಗಳು ಬಹಳ ಮುಖ್ಯವಾಗುತ್ತವೆ ಎಂದರು. ಕ್ರೀಡೆಯಲ್ಲಿ ಗೆಲುವು ಸಾಧಿಸುವುದರ ಜೊತೆಗೆ ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕು. ಕ್ರೀಡೆಯಲ್ಲಿ ಪಾಲ್ಗೊಂಡಾಗ ನಮ್ಮ ಗೆಲುವಿಗಿಂತ, ಕ್ರೀಡೆಯ ಗೆಲುವು ಮುಖ್ಯವಾಗುತ್ತದೆ ಮತ್ತು ಕ್ರೀಡೆಗೆ ಮೌಲ್ಯ ಹೆಚ್ಚಾಗುತ್ತದೆ. ಆದ್ದರಿಂದ ಮುಂಬರುವ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ ಎಂದು ಜಿಲ್ಲಾ ಗೃಹ ರಕ್ಷಕದಳ ಕಮಾಂಡೆಂಟ್ ಡಾ| ಮುರಲೀ ಮೋಹನ ಚೂಂತಾರು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹ ರಕ್ಷಕದಳ ಡೆಪ್ಯುಟಿ ಕಮಾಂಡೆಂಟ್ ರಮೇಶ್, ರಕ್ಷಕದಳ ಕಚೇರಿ, ಅಧೀಕ್ಷಕ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ ಮತ್ತು ಗೃಹ ರಕ್ಷಕರು ಉಪಸ್ಥಿತರಿದ್ದರು.