(ನ್ಯೂಸ್ ಕಡಬ) newskadaba.com, ನ.28. ಶೈಕ್ಷಣಿಕ ಮತ್ತು ವೃತ್ತಿಪರವಾಗಿ ಇತ್ತೀಚಿನ ದಿನಗಳಲ್ಲಿ ಪ್ಯಾರಾಮೆಡಿಕಲ್ ಕೋರ್ಸ್ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿದ್ದು, ವೈದ್ಯಕೀಯ ಕ್ಷೇತ್ರವು ದಿನದಿಂದ ದಿನಕ್ಕೆ ಹೆಚ್ಚು ಬೆಳವಣಿಗೆಯಾಗುತ್ತಿದ್ದು, ಉದ್ಯೋಗಗಳಿಗೆ ಅವಕಾಶಗಳು ಇರುವುದರಿಂದ ಇದು ಉದ್ಯೋಗವನ್ನು ಸೃಷ್ಟಿಸುವ ಕ್ಷೇತ್ರವಾಗಿ ಮಾರ್ಪಟ್ಟಿದೆ. ಇದು ಕೇವಲ ಮೂರು ವರ್ಷದ ಕೋರ್ಸ್ ಆಗಿದೆ.
ಎಸೆಸೆಲ್ಸಿ ಮತ್ತು ಪಿಯುಸಿ ಕಲಿತ ಬಳಿಕ ಮುಂದೇನು? ಎಂಬ ಯೋಚನೆ ವಿದ್ಯಾರ್ಥಿಗಳನ್ನು ಹಾಗೂ ಹೆತ್ತವರನ್ನು ಕಾಡುತ್ತಿರುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಹೆಚ್ಚಿನ ಬೇಡಿಕೆ ಹೊಂದಿದ್ದು, ವಿದ್ಯಾರ್ಥಿಗಳು ಈ ಕೋರ್ಸ್ ಆಯ್ಕೆ ಮಾಡುತ್ತಿದ್ದಾರೆ. ಇದನ್ನು ಕಲಿತ ಮಂದಿ ಮೆಡಿಕಲ್ ಲ್ಯಾಬ್ ಟೆಕ್ನೀಶಿಯನ್, ಮೆಡಿಕಲ್ ರೆಕಾರ್ಡ್ಸ್ ಟೆಕ್ನಾಲಜಿ, ಎಕ್ಸ್ ರೇ ಟೆಕ್ನಾಲಜಿ, ಡೆಂಟಲ್ ಮೆಕ್ಯಾನಿಕ್, ಹೆಲ್ತ್ ಇನ್ಸ್ಪೆಕ್ಟರ್ ಸಹಿತ ವಿವಿಧ ವೃತ್ತಿಯಲ್ಲಿ ಗುರುತಿಸಿಕೊಳ್ಳಬಹುದಾಗಿದೆ.
ಹತ್ತನೇ ತರಗತಿ ಕಲಿತು ಅನಂತರ ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಮಾಡಬಹುದು. ಒಂದು ವೇಳೆ ಪಿಯುಸಿ ವಿದ್ಯಾಭ್ಯಾಸದ ಬಳಿಕ ಸೇರಿದರೆ ಎರಡು ವರ್ಷದ ಡಿಪ್ಲೊಮಾ ಕೋರ್ಸ್ ಗೆ ಸೇರಬಹುದಾಗಿದೆ. ಎಸೆಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಯಾವ ರೀತಿ ಅಂಕ ಗಳಿಸುತ್ತೇವೆ ಎನ್ನುವುದರ ಮೇಲೆ ಸೀಟು ಸಿಗುತ್ತದೆ. ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಇದನ್ನು ಕಲಿತ ವಿದ್ಯಾರ್ಥಿಗಳು ಕ್ಲಿನಿಕ್ ಗಳು, ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಅಪಘಾತ ಚಿಕಿತ್ಸೆ ಕೇಂದ್ರಗಳಲ್ಲಿ ತುರ್ತುನಿಗಾ ಘಟಕಗಳಲ್ಲಿ, ರೋಗ ಪತ್ತೆ ಮಾಡುವಂತಹ ಪ್ರಯೋಗಾಲಯಗಳಲ್ಲಿ, ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ, ನರ್ಸಿಂಗ್ ಹೋಂಗಳಲ್ಲಿ, ಡಯಾಲಿಸಿಸ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ.