(ನ್ಯೂಸ್ ಕಡಬ) newskadaba.com, ಮಂಗಳೂರು, ನ.27. ದ.ಕ ಜಿಲ್ಲೆಯ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಸಾಗಾಟವನ್ನು ಕಟ್ಟುನಿಟ್ಟಾಗಿ ತಡೆಯಲು ನವೆಂಬರ್ 21 ರಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿದ್ದು, ಜಿಲ್ಲೆಯಲ್ಲಿ ಸಂಪೂರ್ಣವಾಗಿ ಅಕ್ರಮ ಮರಳು ಗಣಿಗಾರಿಕೆ, ಸಾಗಾಟ ಹಾಗೂ ದಾಸ್ತಾನನ್ನು ತಡೆಗಟ್ಟಲು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ.
ಜಿ.ಪಿ.ಎಸ್ ಅಳವಡಿಸಿ ಕಾರ್ಯಾಚರಿಸುತ್ತಿರುವ ವಾಹನಗಳು ಮಾತ್ರ ಮರಳು ಸಾಗಾಟ ಮಾಡಬೇಕು ಮತ್ತು ಜಿಲ್ಲೆಯ ಕೇರಳ ಗಡಿ ಭಾಗದಲ್ಲಿ ಯಾವುದೇ ಅಕ್ರಮ ಗಣಿಗಾರಿಕೆ ಅಥವಾ ದಾಸ್ತಾನು ಮಾಡಿದ್ದಲ್ಲಿ ಭಾರತೀಯ ದಂಡ ಸಂಹಿತೆ ಅನ್ವಯ ಮೊಕದ್ದಮೆ ಹೂಡಿ ಕ್ರಮ ಕೈಗೊಳ್ಳಲಾಗುವುದು. ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಮರಳು ಸಾಗಾಟದ ವಾಹನಗಳು ಪರವಾನಿಗೆಯೊಂದಿಗೆ ಮರಳನ್ನು ಪೂರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು ಜಿಲ್ಲಾ ಮರಳು ಉಸ್ತುವಾರಿ ಸಮಿತಿ ದ.ಕ ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.