ಸುಳ್ಯ: 110 ಕೆ.ವಿ. ಸಬ್‌ಸ್ಟೇಷನ್‌ ಗಾಗಿ ಸರ್ವೆ ➤ 2,600 ಮರಗಳಿಗೆ ಬೀಳಲಿದೆ ಕೊಡಲಿಯೇಟು

 (ನ್ಯೂಸ್ ಕಡಬ) newskadaba.com, ಸುಳ್ಯ, ನ.26.  110 ಕೆ.ವಿ. ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಉಭಯ ತಾಲೂಕುಗಳ ವಿದ್ಯುತ್‌ ಪ್ರಸರಣ ಮಾರ್ಗವು ಹಾದು ಹೋಗುವ ಅರಣ್ಯ ಪ್ರದೇಶದಲ್ಲಿ ನಡೆಸಿದ ಸರ್ವೆ ಕಾರ್ಯದಲ್ಲಿ ವಿದ್ಯುತ್‌ ನಿಗಮ ಪ್ರಸ್ತಾವನೆ ಪ್ರಕಾರ ಅರಣ್ಯ ಇಲಾಖೆ ಸ್ಥಳ ಪರಿಶೀಲಿಸಿ, ಪ್ರಾಥಮಿಕ ಹಂತದ ಸರ್ವೆ ಕಾರ್ಯದಲ್ಲಿ 2,605 ಮರಗಳ ತೆರವು ಮಾಡುವಂತೆ ಡಿಸಿಎಫ್‌ಗೆ ವರದಿ ನೀಡಿದೆ.

ಪುತ್ತೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಆರ್ಯಾಪುವಿನಿಂದ ಮಾಡಾವು ತನಕ 1,177 ಮರಗಳು ಹಾಗೂ ಸುಳ್ಯ ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಅಜ್ಜಾವರ, ಸುಳ್ಯ ಪ್ರದೇಶದಲ್ಲಿ 1,428 ಮರಗಳನ್ನು ತೆರವು ಮಾಡಬೇಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರ ಪೈಕಿ ಸುಳ್ಯ ವ್ಯಾಪ್ತಿಯ ಉರುವಲು ನೆಡುತೋಪಿನಲ್ಲಿ ಬೆಳೆಸಲಾದ 1,300 ಅಕೇಶಿಯಾ ಮರಗಳಿವೆ. ಇಲ್ಲಿ ಪ್ರಮುಖ ಮರಗಳು ತೆರವು ಆಗುವುದಿಲ್ಲ. ಮಾಂಜಮ್‌, ಬನ್ಪು ಮೊದಲಾದ ಎಂಟು ಜಾತಿಗೆ ಸೇರಿದ 150 ಮರಗಳನ್ನು ತೆರವು ಮಾಡುವ ಪಟ್ಟಿಯಲ್ಲಿ ಸೇರಿದ್ದು, ಪುತ್ತೂರು ವ್ಯಾಪ್ತಿಯಲ್ಲಿ ಬೆಳೆದು ನಿಂತ ಮರಗಳೇ ಅಧಿಕ ಸಂಖ್ಯೆಯಲ್ಲಿ ತೆರವಾಗುವ ಸಾಧ್ಯತೆ ಹೆಚ್ಚಾಗಿದೆ. ಯೋಜನೆ ಮಂಜೂರಾತಿ ಹಂತದಲ್ಲಿ 110 ಕೆ.ವಿ. ವಿದ್ಯುತ್‌ ಲೈನ್‌ ಹಾದು ಹೋಗುವ ಮಾರ್ಗದಲ್ಲಿ 7.723 ಹೆಕ್ಟೇರ್‌ ಅರಣ್ಯ ಭೂಮಿ ಬಿಡುಗಡೆಗಾಗಿ ವಿದ್ಯುತ್‌ ಪ್ರಸರಣ ನಿಗಮ 2017 ಮಾರ್ಚ್‌ನಲ್ಲಿ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈಗಿನ ಸರ್ವೆಯಲ್ಲಿ 14.187 ಹೆಕ್ಟೇರ್‌ (ಅಂದರೆ 35 ಎಕರೆ) ಅರಣ್ಯ ಪ್ರದೇಶ ಲೈನ್‌ ಹಾದು ಹೋಗುವ ಮಾರ್ಗದಲ್ಲಿ ಬಳಕೆಗೆ ಆಗಲಿದೆ ಎಂದು ಸರ್ವೆ ವೇಳೆ ಬೆಳಕಿಗೆ ಬಂದಿದೆ. ಸುಳ್ಯದಲ್ಲಿ 2.187 ಹೆಕ್ಟೇರ್‌ (5 ಎಕ್ರೆ) ಭೂಮಿ ಹಾಗೂ ಪುತ್ತೂರು ವ್ಯಾಪ್ತಿಯಲ್ಲಿ 12 ಹೆಕ್ಟೇರ್‌ (30 ಎಕ್ರೆ) ಅರಣ್ಯ ಭೂಮಿ ಒಳಗೊಂಡಿದೆ. ಸುಳ್ಯದಲ್ಲಿ ಕಡಿಮೆ ಭೂ ಪ್ರದೇಶ, ಹೆಚ್ಚು ಮರ ಹಾಗೂ ಪುತ್ತೂರಿನಲ್ಲಿ ಹೆಚ್ಚು ಭೂ ಪ್ರದೇಶ, ಕಡಿಮೆ ಮರ ತೆರವಾಗಲಿದೆ.

Also Read  ಶೀಘ್ರದಲ್ಲೇ ಪದವಿ ವಿದ್ಯಾರ್ಥಿಗಳಿಗೆ ಪರಿಷ್ಕøತ ವಾರ್ಷಿಕ ವೇಳಾಪಟ್ಟಿ ➤ ಮಂಗಳೂರು ವಿ.ವಿ.ಕುಲಸಚಿವ ಕೆ. ರಾಜುಮೊಗವೀರ 

error: Content is protected !!
Scroll to Top