(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.25 ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜು ನೆಲ್ಯಾಡಿ, ಇದರ ವಾರ್ಷಿಕೋತ್ಸವವು ಶುಕ್ರವಾರ ರೆ|ಫಾ|ಡಾ| ವರ್ಗೀಸ್ ಕೈಪನಡುಕ್ಕ ಒಐಸಿ ಅವರ ಆಧ್ಯಕ್ಷತೆಯಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿಷ್ಣು ಪ್ರಸಾದ್ ಅವರು ಏರ್ ಲ್ಯಾಂಟಿನ್ ದೀಪವನ್ನು ಹಾರಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು . ವಿದ್ಯಾರ್ಥಿಗಳು ಮುಂಬರುವ ಪಬ್ಲಿಕ್ ಪರೀಕ್ಷೆಯಲ್ಲಿ ಹಿಂದಿನ ಫಲಿತಾಂಶದ ದಾಖಲೆಯನ್ನು ಮೀರುವಂತಾಗಲಿ ಮತ್ತು ಸಂಸ್ಥೆಯು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸೇಕ್ರೇಟ್ ಹಾರ್ಟ್ ಕಾಲೇಜು ಮಡಂತ್ಯಾರು ಇಲ್ಲಿಯ ಉಪನ್ಯಾಸಕರಾದ ಡಾ| ಜೋಸೆಫ್ ಎನ್ ಎಂ ಮಾತನಾಡುತ್ತಾ ಮೌಲ್ಯಾಧಾರಿತ ಶಿಕ್ಷಣ ನೀಡುವುದರಲ್ಲಿ ಸಂಸ್ಥೆಗಳ ನಡುವೆ ಪೈಪೋಟಿ ಇದ್ದರೆ ಅಭಿವೃದ್ಧಿ ಕಾಣುವುದು ಖಂಡಿತ. ಜ್ಞಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಲ್ಲಕ್ಕಿಂತಲೂ ಶ್ರೇಷ್ಠವಾದದ್ದು ಜ್ಞಾನ. ಜೀವನದಲ್ಲಿ ನಂಬಲು ಕಲಿಯಬೇಕು. ದೇವರು ,ನಮ್ಮ ಸಂಸ್ಥೆ, ನಮ್ಮನ್ನೇ ನಂಬಬೇಕು. ಬದುಕಿನಲ್ಲಿ ಯಶಸ್ವಿಯಾದವರ ಜೀವನ ಯೋಜನಾತ್ಮಕವಾಗಿದ್ದಂತೆ ನಮ್ಮ ಜೀವನವೂ ಯೋಜನಾತ್ಮಕವಾಗಿರಬೇಕು. ಇತರರು ಆಲಸ್ಯದಿಂದಿರುವಾಗ ನಾವು ಶ್ರಮ ಪಟ್ಟು ದುಡಿಯಬೇಕು. ಬದುಕು ಪ್ರಕಾಶಿಸುತ್ತದೆ. ನಾವು ಬೆಳೆಯಬೇಕು ಇತರರನ್ನು ಬೆಳೆಯಲು ಪ್ರೋತ್ಸಾಹಿಸಬೇಕು ಎಂದು ಹೇಳಿ ಶುಭ ಹಾರೈಸಿದರು. ನೆಲ್ಯಾಡಿ ಪಂಚಾಯತ್ ಅಧ್ಯಕ್ಷರು ಹಾಗೂ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಗಂಗಾಧರ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸಂಸ್ಥೆಯು ಒಂದು ಮೌಲ್ಯಯುತ ಶಿಕ್ಷಣವನ್ನು ನೀಡುತ್ತಾ ಬಂದಿದೆ. ವಿಜ್ಞಾನ ವಸ್ತು ಪ್ರದರ್ಶನ ಮತ್ತು ಕಲಾಮೇಳ ಇದು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ಸೂಸುವ ವೇದಿಕೆಯಾಗಿದೆ. ಇಂದಿನ ಈ ವಾಷೀಕೋತ್ಸವ ನಿಜವಾದ ವಾರ್ಷಿಕೋತ್ಸವ ಎಂದೆನಿಸಿಕೊಂಡಿದೆ. ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಮತ್ತು ದೂರದರ್ಶನದಿಂದ ದೂರವಿರುವಂತೆ ಜಾಗೃತೆ ವಹಿಸಬೇಕು. ಉತ್ತಮ ಅಂಶಗಲಿಗೆ ಮಾತ್ರ ಪೋತ್ಸಾಹ ನೀಡಬೇಕು ಎಂದು ಹೆತ್ತವರಿಗೆ ಕಿವಿ ಮಾತು ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಖಾದರ್ ಅವರು ಮಾತನಾಡುತ್ತಾ ಮೂರು ದಶಕಗಳಿಂದ ನಮ್ಮ ವಿದ್ಯಾ ಸಂಸ್ಥೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಯುತ ಶಿಕ್ಷಣವನ್ನು ನೀಡಿ ಯುವ ಜನತೆಗೆ ಉನ್ನತ ಬದುಕನ್ನು ಕಲ್ಪಿಸಿಕೊಟ್ಟಿದೆ. ರಾಷ್ಟ್ರಮಟ್ಟದಲ್ಲಿ ಈ ಸಂಸ್ಥೆಯು ಮಿಂಚಲಿ ಎಂದು ಶುಭ ಹಾರೈಸಿದರು.
ಪ್ರಾಂಶುಪಾಲರಾದ ರೆ|ಫಾ|ಮ್ಯಾಥ್ಯು ಪ್ರಫುಲ್ ಒಐಸಿ ವಾರ್ಷಿಕ ವರದಿಯನ್ನು ವಾಚಿಸಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಪ್ರತಿನಿಧಿ ಹಾಗೂ ಕರ್ನಾಟಕ ಬ್ಯಾಂಕ್‍ನ ಮಡಂತ್ಯಾರು ಶಾಖಾ ಮ್ಯಾನೇಜರ್ ಆದ ಸೂರಜ್ ಕೆ ಎಸ್ ,ಸಂಸ್ಥೆಯ ಬರ್ಸರ್ ಆದ ರೆ|ಫಾ|| ಐಸಕ್ ಸಾಮ್ ಒಐಸಿ, ಸಪೆನ್ಸಿಯಾ ಪ್ರಥಮ ದರ್ಜೆ ಕಾಲೇಜು ಉಪ ಪ್ರಾಂಶುಪಾಲರಾದ ಗೀತಾ ಯು, ಐಟಿಐ ಪ್ರಾಂಶುಪಾಲರಾದ ಸಜಿ ಕೆ ತೋಮಸ್, ಜ್ಞಾನೋದಯ ಬೆಥನಿ ಮುಖ್ಯೋಪಾದ್ಯಾಯರಾದ ಜೋರ್ಜ್ ಕೆ ತೋಮಸ್, ಉಪ ಪ್ರಾಂಶುಪಾಲರಾದ ಸುಶಿಲ್ ಕುಮಾರ್, ಮಾಸ್ಟರ್ ನಿಖಿಲ್ ಹಾಗೂ ಮಾಸ್ಟರ್ ಮೊಹ್ಮದ್ ಝೀಯಾದ್ , ಆಸುಪಾಸಿನ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರುಗಳು, ಉಪನ್ಯಾಸಕರು, ರಕ್ಷಕ ಶಿಕ್ಷಕ ಸಂಘದ ಎಲ್ಲಾ ಪದಾಧಿಕಾರಿಗಳು, ಪೋಷಕರು , ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು. ಸಂಸ್ಥೆಯು ಆಟೋಟ ಸ್ಪರ್ದೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಬಹುಮಾನ ವಿತರಿಸಲಾಯಿತು ಈ ಸಂದರ್ಭದಲ್ಲಿ ಪೆನ್ಸಿಲ್ ಆರ್ಟ್‍ನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಹಳೆ ವಿದ್ಯಾರ್ಥಿ ಪರಿಕ್ಷಿತ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಶ್ರದ್ದಾ ಮತ್ತು ತಂಡ ಪ್ರಾರ್ಥಿಸಿದರು. ಸಂಚಾಲಕರಾದ ರೆ|ಡಾ| ವರ್ಗೀಸ್ ಕೈಪನಡುಕ್ಕ ಸ್ವಾಗತಿಸಿ, ವಿದ್ಯಾರ್ಥಿ ಕಾಲೇಜು ನಾಯಕ ಮೊಹ್ಮದ್ ಝೀಯಾದ್ ವಂದಿಸಿದರು. ಬಬಿತ ಹಾಗೂ ಶಾರೋನ್ ಜಿಜನ್ ಕಾರ್ಯಕ್ರಮದ ನಿರೂಪಿಸಿದರು.