ಮಧುರ ಕಂಠದ “ಸುಂದರ”ಚಾ……

 (ನ್ಯೂಸ್ ಕಡಬ) newskadaba.com  .25.  ಸುತ್ತಲು ದಟ್ಟ ಕಾನನದ ನಡುವೆ ಇರುವ ಅದೊಂದು ಪುಟ್ಟ ಊರು. ಕಾಲಿಟ್ಟ ಕಡೆಯೆಲ್ಲ ನಮ್ಮದೆ ಹಾದಿಗಳು. ಆ ಕಾಡಲ್ಲಿ ಕಾಡು ಪ್ರಾಣಿಗಳಿಗೇನು ಕಮ್ಮಿ ಇಲ್ಲ. ಕಾಡುಗಳ ಮಧ್ಯೆ ಇರುವ ಮನೆಗಳಿಗೂ ಏನೂ ಕಮ್ಮಿಇಲ್ಲ. ಇನ್ನು ಆ ಊರಿಗೆ ತಕ್ಕಂತ ಜನ ಜೊತೆಗೆ ಅವರ ಜನಜೀವನ ಅದ್ಬುತವಾಗಿದೆ. ಕಾಡುಗಳ ನಡುವೆ ಶಾಲೆ ಕಾಲೇಜುಗಳಿಗಾಗಿ ಕಾಡು ದಾರಿಗಳನ್ನ ಕ್ರಮಿಸಿಬರುವ ಮಕ್ಕಳನ್ನ ಕಾಪಾಡೊದಕ್ಕೆ ಮತ್ತು ಆ ಪುಟ್ಟ ಊರನ್ನ ಕಾಯೋದಕ್ಕೆ ಅಂತನೇ ಒಬ್ಬ ಪುಟ್ಟ ಗೋಪಾಲಕೃಷ್ಣನು ನೆಲೆಸಿರುವ ಊರು ನಮ್ಮದು. ಅಲ್ಲಿ  ಮುಂದೆಲ್ಲ ಇದ್ದದ್ದು ನಾಲ್ಕು ಸಣ್ಣ ಪುಟ್ಟ ಗೂಡಂಗಡಿ, ಒಂದು ಎಮ್‍ಎಮ್ ‍ಅವರ ದಿನಸಿ ಅಂಗಡಿ, ಕೈಲ್‍ ಅಜ್ಜನ ಬಾಳೆಗೊನೆ ಅಂಗಡಿ ಜೊತೆಗೆ ಎಲೆ ಅಡಿಕೆಯಂತ ಗೂಡಂಗಡಿಗಳು, ಇನ್ನೆರಡು ಹೊಟೇಲ್ ಗಳು, ಇತ್ತೀಚಿನ ದಿನಗಳಲ್ಲಿ ಅಲ್ಲೇ ಅಕ್ಕ ಪಕ್ಕದಲ್ಲಿ ಒಂದಷ್ಟು ಅಂಗಡಿಗಳು ಹುಟ್ಟಿಕೊಂಡಿದ್ದರು ನಮ್ಮ ಹಳೆಯ  ಗೂಡಂಗಡಿಗಳಿಗೆ ಇರುವ  ವ್ಯಾಪಾರಕ್ಕೆ ಏನು ಕಮ್ಮಿಇಲ್ಲ. ಯಾವಾಗಲೂ ಜನ ಗೂಡಂಗಡಿಗಳಿಗೆ ಹೋಗಿ ವ್ಯವಹಾರ ಮಾಡ್ತಾರೆ.

ಹೌದು ಜೊತೆಗೆ ಹೊಟೇಲ್ ಗಳು… ಅದೇ ರುಚಿ ಅದೇ ಸ್ವಾದ. ಆಗಿನ ದಿನಗಳಿಗೂ ಇಂದಿಗೂ ಏನೂ ಬದಲಾಗಿಲ್ಲ. ಬದಲಾಗಿದ್ದು ಕುಳಿತುಕೊಳ್ಳುವ ಕುರ್ಚಿ, ಟೇಬಲ್ ಮಾತ್ರ. ಹೌದು ದಿನ ಬೆಳಾಗದ್ರೆ ಸಾಕು ಡೈರಿ ಗೆ ಹಾಲು ಹಾಕೋದಕ್ಕೆಅಂತ ಜನ ಹೋಗಿ ಬರೋರು ದಿನದಲ್ಲಿ ಒಂದು ಹೊತ್ತಾದ್ರು ನಮ್ಮ್ ಸುಂದ್ರಣ್ಣ ಹೋಟೆಲ್ ಗೆ ಹೋಗದೆ ಬರೋರು ಇಲ್ಲ. ಎಷ್ಟಾದರೂ ಹಳ್ಳಿಯಲ್ಲಿ ಸಿಗುವ ಚಾಯಕ್ಕೆ ರುಚಿ ಜಾಸ್ತಿಯೆ ಅಲ್ವೇ.. ಇನ್ನು ಮಳೆಗಾಲ ಬಂದ್ರೇ ಕೇಳೊದೆ ಬೇಡ ಶಾಲಾ ಮಕ್ಕಳು ಸಮೇತ  ಸುಂದರಣ್ಣ ನ ಅಂಗಡಿಯೊಳಗೆ ನುಗ್ಗಿ ಬಿಸಿ ಬಿಸಿ ಚಾ ಹೀರುತ್ತಾರೆ. ಯಾಕಂದ್ರೆ ಜನರಿಗೆ ಬೇಕಾದ ರೀತಿಯಲ್ಲಿ ಟೀ ಕಾಫೀ ಮಾಡಿಕೊಡೊದ್ರಲ್ಲಿ ನಮ್ಮ್  ಈ ಅಣ್ಣ ಎತ್ತಿದ್ದ ಕೈ. ಜೊತೆಗೆ ರುಚಿರುಚಿಯಾದ ಅಡುಗೆ ಮಾಡಿ ಹಾಕೊದ್ರಲ್ಲು ಏನ್‍ ಕಮ್ಮಿ ಇಲ್ಲ. ಇನ್ನು ಸಂಜೆ ಹೊತ್ತಲ್ಲಿ ಅಂತೂ ಕೇಳೋದೆ ಬೇಡ.

Also Read  ಜ್ಯೋತಿಷ್ಯ: ನನಗೆ ಎರಡನೇ ಮದುವೆ ಆಗುವ ಭಾಗ್ಯವಿದೆಯೇ?

ಯಾಕಂದ್ರೇ ದಿನದ ಕೆಲ್ಸ ಮುಗಿಸಿಕೊಂಡು ಬರೋರು ಒಂದಿಷ್ಟು ಹೊತ್ತು ಸುಂದ್ರಣ್ಣ ನ ಹೋಟೆಲ್ ನಲ್ಲಿ ಬಂದು ಕುಳಿತು “ ಸುಂದರ ಒಂಜಿ ಚಾ ಪಾಡ್ಲ” (ಸುಂದರಒಂದು ಚಾ ಹಾಕು) ಅಂತ ಆರ್ಡರ್ ‍ಕೊಟ್ಟು ತಮ್ಮ ದಿನಚರಿಯನ್ನ ಒಬ್ಬರಿಂದ ಒಬ್ಬರೂ ಹಂಚಿಕೊಂಡು ತಮಾಷೆ ಮಾಡುತ್ತಾ, ತಲಹರಟೆ ಕುಶಲೋಪರಿಗಳನ್ನ ಆಡಿಕೊಂಡು ಗಮ್ಮತ್ತಲ್ಲಿ ಕಾಲ ಕಳೆಯುತ್ತಾ ರೆ. ನೀರ್‍ದೋಸೆ, ಕಲ್ತಪ್ಪ, ನೈಯಪ್ಪ, ಚಟ್ಟಂಬಡೆ, ಭೂತಾಯಿ ಮೀನು ಸಾರು ಗಳನ್ನ ಸ್ವಾಧಭರಿತವಾಗಿ ತಯಾರಿಸುವ ಸುಂದ್ರಣ್ನ ಅಂದ್ರೇ ಎಲ್ಲರಿಗೂ ಅಚ್ಚು ಮೆಚ್ಚು. ತನ್ನ ಚಿಕ್ಕ ವಯಸ್ಸಿನಲ್ಲೆ ಹೋಟೆಲ್ ಕೆಲಸದಲ್ಲಿ ಭಟ್ಟರ ಜೊತೆ ಕೆಲಸ ಕಲಿತು ನಂತರದ ದಿನಗಳಲ್ಲಿ ಅಂದ್ರೇ 1994 ರ ವೇಳೆಗೆ ತನ್ನದೆ ಸ್ವಂತ ಪುಟ್ಟದಾದ ಒಂದು ಹೋಟೆಲ್ ನಿರ್ಮಿಸಿಕೊಂಡು ಬಂದ ಸುಂದರಣ್ಣ ಈ ವರೆಗೆ ಹಿಂತಿರುಗಿ ನೋಡಲೆ ಇಲ್ಲ. ತನ್ನ  26 ವರ್ಷಗಳ ಕಾಲ ಸುದೀರ್ಘ ಪ್ರಯಾಣದಲ್ಲಿ ಗ್ರಾಹಕರಿಗೆ ಹತ್ತಿರವಾಗಿ ಮೆಚ್ಚುಗೆಗೆ ಪಾತ್ರರಾದವರು ಇವರು.

ಇನ್ನು ಇಷ್ಟಕ್ಕೆ ಮಾತ್ರ ಸೀಮಿತವಲ್ಲದ ನಮ್ಮ್ ಸುಂದ್ರಣ್ಣ ತಮ್ಮ ಮಧುರವಾದ ಗಾಯನದ ಮೂಲಕ ಜನ ಮೆಚ್ಚುಗೆಯನ್ನ ಪಡೆದಿದ್ದಾರೆ. ಕೇರಳದ ಖ್ಯಾತ ಗಾಯಕ ಯೇಸುದಾಸ್‍ ಅವರ ಅಪ್ಪಟ ಅಭಿಮಾನಿಯಾಗಿರುವ ಇವರು ತಮ್ಮ ಗಾಯನಕ್ಕಾಗಿ ಸ್ವತಹ ಯೇಸುದಾಸರಿಂದಲೇ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಶ್ರೀ ವಿದ್ಯಾಭೂಷಣ ತೀರ್ಥ ಸ್ವಾಮೀಜಿಯಿಂದಲೂ ತಮ್ಮ ಗಾಯನಕ್ಕೆ ಸೈ ಎನಿಸಿಕೊಂಡಿದ್ದಾರೆ. ಯಾವುದೇ ಪೂಜೆ ಇರ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ಇರಲಿ ಇವರ ಭಜನೆ ಅಲ್ಲಿ ಇದ್ದೇ ಇರುತ್ತದೆ. ದಿನಂಪ್ರತಿ ದೇವಾಸ್ಥಾನದಲ್ಲಿ ಚಾಚು ತಪ್ಪದೆ ಭಜನೆಯನ್ನ ಮಾಡುವುದು ಇವರ ಅಭ್ಯಾಸ. ನಗರ ಭಜನೆ, ಕುಣಿತ ಭಜನೆಗಳ ಮೂಲಕ ತಮ್ಮ ಮಧುರವಾದ ಕಂಠದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮದೇ ಆದ ಕೃಷ್ಣನ ನಾಮದಲ್ಲಿ ಒಂದು ಭಜನಾ ಮಂಡಳಿಯನ್ನು ಕಟ್ಟಿಕೊಂಡು ದೇವರ ಕಾರ್ಯದಲ್ಲಿ  ಭಾಗಿಯಾಗುತ್ತಾರೆ. ತಮ್ಮ ಬಳಗದ ಮೂಲಕ ಎಲ್ಲೆಡೆ ತಮ್ಮ ಗಾಯನವನ್ನು ಪಸರಿಸುತ್ತಿದ್ದಾರೆ. ಇನ್ನು ನಮ್ಮೂರಿನಲ್ಲಿ ಕೃಷ್ಣನ ಉತ್ಸವ ಅಂದರೆ ಸಾಕು ಸುಂದ್ರಣ್ಣ ನ್ನ ಹಾಡನ್ನ ಕಣ್ಣ್ ತುಂಬಿಕೊಂಡು ಕಿವಿಗೆ ಹಾಕಿಸಿಕೊಳ್ಳಲೆಂದೇ ನೂರಾರೂ ಮಂದಿ ಬರುವುದುಂಟು. ಹೀಗೆ ಹೋದಲ್ಲಿ ಬಂದಲ್ಲಿ ಕುಂತಲ್ಲಿ ನಿಂತಲ್ಲಿ ಎಲ್ಲೆಲ್ಲಿಯೂ ಹಾಡನ್ನೇ ಗುಣುಗುಟ್ಟುತ್ತಿರುವ ಇವರು ಹಾಡನ್ನೇ ಉಸಿರಾಗಿಸಿಕೊಂಡಿದ್ದಾರೆ.

Also Read  ಮಾಟ ಮಂತ್ರ, ದುಷ್ಟಶಕ್ತಿಗಳಿಂದ ನೊಂದಿದ್ದರೆ ಏನು ಮಾಡಬೇಕು ಎಂದು ತಿಳಿದಿದೆಯೇ ನಿಮಗೆ ? ಇಲ್ಲಿದೆ ಸುಲಭ ಪರಿಹಾರ

ಸರಳ ಸಜ್ಜನವಾಗಿ ಜೀವನ ನಡೆಸುತ್ತಿರುವ ಇವರಿಗೆ ಚಿತ್ರ ಅನ್ನೋ ಹೆಸರಿನ ಮುದ್ದಾದ ಹೆಂಡತಿ ಹಾಗೂ ಎರಡು ಗಂಡು ಮಕ್ಕಳನ್ನ ಹೊಂದಿದ್ದಾರೆ.  ಒಟ್ಟಿನಲ್ಲಿ ತಮ್ಮ ಪುಟ್ಟ ಹೋಟೆಲ್ ನಲ್ಲಿ ಹತ್ತಾರು ಜನರಿಗೆ ರುಚಿರುಚಿಯಾದ ತಿಂಡಿ ಹಾಗೂ ಖಡಕ್ ಚಾ ನೀಡುವುದರ ಮೂಲಕ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಮತ್ತು ತಮ್ಮ ಮಧುರವಾದ ಕಂಠದ  ಮೂಲಕ ಸಾಕಷ್ಟು ಪ್ರಶಂಸೆಗೆ ಪಾತ್ರರಾಗಿರುವ ನಮ್ಮ ಸುಂದ್ರಣ್ಣನ ಯಾವಾಗ್ಲೂ ಗಮ್ಮತ್ತಲ್ಲಿ ಇರ್ಲಿ ಅನ್ನೋದೆ ನಮ್ಮ ಆಶಯ.

“ದಿನಂಪ್ರತಿ ತಮ್ಮ ಪುಟ್ಟ ಹೋಟೆಲ್ ನಲ್ಲಿ ಮಧುರ ಕಂಠದ ಮೂಲಕ ಕೆಲಸ ಆರಂಭಿಸಿ ತನ್ನ ಜೊತೆ ಇತರರನ್ನು ಖುಷಿ ಪಡಿಸಿಕೊಂಡು ಮುಂದುವರಿಯುತ್ತಾರೆ ಇವರು. ಕೆಲಸ ಯಾವುದೇ ಆಗಿರಲಿ, ಪ್ರತಿಯೊಬ್ಬ ವ್ಯಕ್ತಿಯೊಳಗೆ ಒಂದು ವಿಶೇಷವಾದ ಹೊಸ ಕಲೆ ಅಡಗಿರುತ್ತದೆ”.

Also Read  ಮಂಗಳವಾರ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾತ್ರ ಮಾಡಬೇಡಿ! ಕಷ್ಟಗಳು ಕಟ್ಟಿಟ್ಟ ಬುತ್ತಿ

ಆಶಿತಾ ಎಸ್.ಗೌಡ

ಬಿಳಿನೆಲೆ

 

error: Content is protected !!
Scroll to Top