(ನ್ಯೂಸ್ ಕಡಬ) newskadaba.com ಮಂಗಳೂರು , ನ.23 ಶಾಲಾ ಆವರಣ ಸುತ್ತ ಮುತ್ತಲಿನ ಸ್ಥಳಗಳಲ್ಲಿ ತಂಬಾಕು ನಿಷೇಧ ಆಜ್ಞೆಯನ್ನು ಪಾಲಿಸದೆ ಇರುವ ಅಥವಾ ಇನ್ನಿತರ ಯಾವುದೇ ಮಾದಕ ವಸ್ತುಗಳ ಮಾರಾಟ ಮಾಡುವಂತಹ ಗೂಡಂಗಡಿಗಳು, ಅನುಮಾಸ್ಪದ ವ್ಯಕ್ತಿಗಳು ಕಂಡು ಬಂದರೆ ನೇರವಾಗಿ ತಾಲೂಕು ಕಚೇರಿಗೆ ದೂರು ನೀಡಬೇಕು, ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ತಹಶೀಲ್ದಾರ್ ಗುರು ಪ್ರಸಾದ್ ಹೇಳಿದರು.
ಶುಕ್ರವಾರ ಮಂಗಳೂರು ತಾಲೂಕು ಕಚೇರಿ, ಮಿನಿವಿಧಾನಸೌಧದಲ್ಲಿ ನಡೆದ ಡಿಪಿಟಿ ಮತ್ತು ಟಿಡಿ ಲಸಿಕಾ ಅಭಿಯಾನ ಕಾರ್ಯಕ್ರಮ ಮತ್ತು ಮೊದಲನೇ ಹಂತದ ತಾಲೂಕು ಮಟ್ಟದ ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ 2.0 ಕಾರ್ಯಕ್ರಮ, ಟಿಟಿಎಫ್ಐ ಸಭೆ ಹಾಗೂ ಆರ್.ಬಿ.ಎಸ್.ಕೆ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಡಿಪಿಟಿ & ಟಿಡಿ ಮತ್ತು ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ 2.0 ಕಾರ್ಯಕ್ರಮಕ್ಕೆ ತಾಲೂಕು ಕಚೇರಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು, ಖಾಸಗಿ ಶಾಲೆಗಳು ಈ ಲಸಿಕೆಯನ್ನು ನಿರಾಕರಿಸುವ ಸಾಧ್ಯತೆ ಇದ್ದಲ್ಲಿ, ಇದರ ಪ್ರಯೋಜನವನ್ನು ಕುರಿತು ಅರಿವು ಮೂಡಿಸಿ ಅಭಿಯಾನದ ಮಹತ್ವ ತಿಳಿಸಬೇಕು. ಅಭಿಯಾನವು ಜಿಲ್ಲೆಯಲ್ಲಿ ಉತ್ತಮ ಪ್ರಗತಿ ಕಾಣುವುದರ ಜೊತೆಗೆ ಮೊದಲ ಸ್ಥಾನ ಪಡೆಯಬೇಕು ಎಂದರು.
ಆಶಾ ಕಾರ್ಯಕರ್ತೆಯರನ್ನು ಕುರಿತು ಮಾತಾಡಿದ ಅವರು ಕಾರ್ಯಕರ್ತೆಯರು ಕ್ಷೇತ್ರ ಪ್ರಚಾರದಲ್ಲಿ ಕಾರ್ಯ ನಿರ್ವಹಿಸುವ ಸಂಧರ್ಭಗಳಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಅಂತಹ ಸಮಸ್ಯೆ ಎದುರಾದರೆ ತಾಲೂಕು ಕಚೇರಿಗೆ ತಿಳಿಸಬೇಕು ಎಂದರು. ತಾಲೂಕಿನಲ್ಲಿ ವಲಸಿಗರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಅಂತಹ ಮಕ್ಕಳು ಲಸಿಕೆಯಿಂದ ವಂಚಿತರಾಗಬಹುದು, ಆದ್ದರಿಂದ ಅವರವರ ಜಿಲ್ಲೆಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಇಂಧ್ರಧನುಷ್ ಮತ್ತು ಡಿಪಿಟಿ & ಟಿಡಿ ಕಾರ್ಯಕ್ರಮವು ಜಿಲ್ಲೆಯಾದ್ಯಂತ ಶೇಕಡಾ 90% ರಷ್ಟು ಯಶಸ್ವಿಗೊಳಿಸುವ ಉದ್ದೇಶ ಹೊಂದಿದೆ. ಈ ಲಸಿಕೆಯಿಂದ ಹೊರಗುಳಿದ ಮಕ್ಕಳು ಮತ್ತು ಅರ್ಧದಲ್ಲಿ ಬಿಟ್ಟು ಹೋದ ಮಕ್ಕಳನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಕುಮಾರ್ ತಿಳಿಸಿದರು.
ಸಭೆಯಲ್ಲಿ ಆಶಾ ಕಾರ್ಯಕರ್ತೆಯರು, ವಿವಿಧ ವಿಭಾಗದ ಮುಖ್ಯಸ್ಥರು, ಸದಸ್ಯರು ಉಪಸ್ಥಿತರಿದ್ದರು.