(ನ್ಯೂಸ್ ಕಡಬ) newskadaba.com ಚೀನಾ, ನ.21 ಮಂಗಳವಾರ ಸಂಜೆ ಚಾರ್ಮಾಡಿ ಘಾಟಿಯಲ್ಲಿ ಮಿನಿ ಬಸ್ ಪ್ರಾಯೋಗಿಕ ಸಂಚಾರ ನಡೆಸಿತು. ಕೊಟ್ಟಿಗೆಹಾರದಿಂದ ಚಾರ್ಮಾಡಿ ಗ್ರಾಮದವರೆಗೂ ಮಿನಿ ಬಸ್ ಸಂಚರಿಸಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಕಡಿದಾದ ತಿರುವುಗಳಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸುಗಮ ಬಸ್ ಸಂಚಾರ ಸಾಧ್ಯವೇ ಎಂಬುದನ್ನು ಪರೀಕ್ಷಿಸಿದರು.
ಆಗಸ್ಟ್ ನ ಭಾರೀ ಮಳೆಯಿಂದ ಚಾರ್ಮಾಡಿಯ ಕೆಲವು ತಿರುವುಗಳಲ್ಲಿ ಗುಡ್ಡ ಕುಸಿತವಾಗಿದ್ದು, ಕೆಲವು ಕಡೆಗಳಲ್ಲಿ ರಸ್ತೆ ಕುಸಿದಿತ್ತು. ಒಂದು ತಿಂಗಳ ಕಾಲ ಎಲ್ಲ ವಾಹನ ಸಂಚಾರ ಸ್ಥಗಿತಗೊಳಿಸಿ ತಾತ್ಕಾಲಿಕ ದುರಸ್ತಿ ನಡೆಸಿದ ಬಳಿಕ ಹಗಲು ಮಾತ್ರ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಸ್ ಸಂಚಾರ ಇಲ್ಲದೆ ವಿದ್ಯಾರ್ಥಿಗಳು ಮತ್ತು ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ಮಿನಿ ಬಸ್ ಸಂಚಾರಕ್ಕೆ ಮನವಿ ಮಾಡಿದ್ದರು.
ಮಿನಿ ಬಸ್ ಸಂಚಾರಕ್ಕೆ ರಸ್ತೆ ಸುರಕ್ಷಿತವಾಗಿದ್ದು, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಹಾಗೂ ಚಾರ್ಮಾಡಿ ಘಾಟಿಯಲ್ಲಿ ಮಿನಿ ಬಸ್ ಸಂಚಾರ ಆರಂಭಿಸುವ ಬಗ್ಗೆ ಮೇಲಧಿಕಾರಿಗಳು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಶಿವಮೊಗ್ಗ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್, ಕೆಎಸ್ಸಾರ್ಟಿಸಿ ಮತ್ತು ರಾ.ಹೆ. ಪ್ರಾಧಿಕಾರದವರಿಗೆ ಮಿನಿಬಸ್ ಓಡಿಸಿ ವರದಿ ಸಲ್ಲಿಸುವಂತೆ ತಿಳಿಸಲಾಗಿತ್ತು. ಅವರ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.