✍?ವಿಜಯ ಕುಮಾರ್ ಕಡಬ
(ನ್ಯೂಸ್ ಕಡಬ) newskadaba.com ಕಡಬ, ನ.13 ನೂತನ ಕಡಬ ತಾಲೂಕು ಉದ್ಘಾಟನೆಯಾಗಿ ಅನುಷ್ಠಾನ ಪ್ರಕ್ರಿಯೆಗಳು ಪ್ರಾರಂಭವಾಗುತ್ತಿದ್ದಂತೆ ಅದರಲ್ಲಿ ಕಡಬ ಗ್ರಾ.ಪಂ. ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿದ ಬಳಿಕ ಇದೀಗ ಕಡಬ ತಾಲೂಕು ಪಂಚಾಯತ್ ಅಸ್ತಿತ್ವಕ್ಕೆ ಸರಕಾರದಿಂದ ಅಧಿಕೃತ ಆದೇಶ ನೀಡಿದೆ. ದಿನಾಂಕ: 14-10-2019ರಿಂದ ಜಾರಿಗೆ ಬರುವಂತೆ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಎಸ್. ಮಹಾಲಕ್ಷ್ಮೀ ಅವರು ಕರ್ನಾಟಕ ರಾಜ್ಯ ಪತ್ರದಲ್ಲಿ ಆದೇಶ ಹೊರಡಿಸಿದ್ದಾರೆ.
13 ತಾ.ಪಂ. ಕ್ಷೇತ್ರಗಳು:
ಪುತ್ತೂರು ತಾಲೂಕು ಪಂಚಾಯತ್‍ನ ಕಡಬ, ಕುಟ್ರುಪಾಡಿ, ಐತ್ತೂರು, ಬಿಳಿನೆಲೆ, ಗೋಳಿತೊಟ್ಟು, ಚಾರ್ವಾಕ, ಸವಣೂರು, ನೆಲ್ಯಾಡಿ, ಕೌಕ್ರಾಡಿ, ಆಲಂಕಾರು, ರಾಮಕುಂಜ, ಸುಳ್ಯ ತಾಲೂಕು ಪಂಚಾಯತ್‍ನ ಸುಬ್ರಹ್ಮಣ್ಯ, ಎಣ್ಮೂರು ಕ್ಷೇತ್ರಗಳನ್ನೊಂಡ ಒಟ್ಟು 13 ತಾ.ಪಂ. ಕ್ಷೇತ್ರಗಳನ್ನು ರಚಿಸಲಾಗಿದೆ. ಪ್ರಸ್ತುತ ಪುತ್ತೂರು ಹಾಗೂ ಸುಳ್ಯ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿರುವ ಕಡಬ ತಾಲೂಕಿಗೆ ಸೇರ್ಪಡೆಯಾಗಿರುವ ಒಟ್ಟು 42 ಗ್ರಾಮಗಳನ್ನೊಳಗೊಂಡ 13 ತಾ.ಪಂ ಕ್ಷೇತ್ರಗಳನ್ನು ಸೇರಿಸಿ ಹೊಸ ಕಡಬ ತಾಲೂಕು ಪಂಚಾಯತ್ ಅಸ್ಥಿತ್ವಕ್ಕೆ ಬರಲಿದೆ. ಹೊಸ ತಾ.ಪಂ ಕಚೇರಿ ತೆರೆಯಲು ಲಭ್ಯವಿರುವ ಕಟ್ಟಡ ಕಾದಿರಿಸಲಾದ ಜಮೀನು ಮುಂತಾದ ಮಾಹಿತಿಗಳನ್ನು ಈಗಾಗಲೇ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಮುಂದಿನ ಅವಧಿಗೆ ಕಡಬ ತಾಲೂಕು ಪಂಚಾಯತ್‍ಗೆ ಚುನಾವಣೆ ನಡೆಯಲಿದೆ, ಚುನಾವಣೆಯ ಬಳಿಕ ಕಡಬದಲ್ಲಿ ನೂತನ ತಾಲೂಕು ಪಂಚಾಯತ್ ಆಡಳಿತ ಮಂಡಳಿ ಅಸ್ಥಿತ್ವಕ್ಕೆ ಬರಲಿದೆ. ಆದರೆ ಈಗಾಗಲೇ ಕಡಬ ಹೊಸ ತಾಲೂಕು ಪಂಚಾಯತ್ ಘೋಷಣೆ ಆದ ಹಿನ್ನಲೆಯಲ್ಲಿ ಪುತ್ತೂರು ಮತ್ತು ಸುಳ್ಯ ತಾಲೂಕು ಪಂಚಾಯತ್ ಸಭೆಯಲ್ಲಿ ಭಾಗವಹಿಸುವಂತಿಲ್ಲ ಎಂದು ತಿಳಿದು ಬಂದಿದೆ.
ಜಾಗ ಕಾದಿರಿಸಿ ಸರಕಾರಕ್ಕೆ ಪ್ರಸ್ತಾವಣೆ:
ಈಗಾಗಲೇ ಕಡಬ ತಾಲೂಕು ಅನುಷ್ಟಾನದ ಸಂದರ್ಭದಲ್ಲಿ ತಾಲೂಕಿಗೆ ಸಂಬಂಧಪಟ್ಟ ವಿವಿಧ ಇಲಾಖೆಗಳಿಗೆ ಜಾಗ ಕಾದಿರಿಸಲಾಗಿದ್ದು ಅಂತೆಯೇ ತಾಲೂಕು ಪಂಚಾಯತ್ ಕಛೇರಿ ನಿರ್ಮಾಣಕ್ಕೆ ಬಂಟ್ರ ಗ್ರಾಮದ ಸರ್ವೆ ನಂಬ್ರ 99-2ರಲ್ಲಿ 0.50 ಎಕ್ರೆ ಜಮೀನುನ್ನು ಈಗಾಗಲೇ ಕಾದಿರಿಸಿ ಪ್ರಸ್ತಾವಣೆ ಸಲ್ಲಿಸಲಾಗಿದೆ.
14 ಹುದ್ದೆಗಳ ಸೃಷ್ಟಿ
ಸರಕಾರದ ಆದೇಶದ ಪ್ರಕಾರ ತಾ.ಪಂ.ಗೆ 1 ಕಾರ್ಯನಿರ್ವಾಹಕ ಅಧಿಕಾರಿ, 1 ತಾಲೂಕು ಯೋಜನಾಧಿಕಾರಿ, 1 ಸಹಾಯಕ ನಿರ್ದೇಶಕರು(ನರೆಗ), 1 ಸಹಾಯಕ ಲೆಕ್ಕಾಧಿಕಾರಿ, 1 ಹಿರಿಯ ಅಭ್ಯಯಂತರರು, 1 ಪ್ರಥಮ ದರ್ಜೆ ಸಹಾಯಕರು, 1 ಪ್ರಥಮ ದರ್ಜೆ ಲೆಕ್ಕ ಸಹಾಯಕರು, 2 ದ್ವಿತೀಯ ದರ್ಜೆ ಸಹಾಯಕರು, 2 ಬೆರಳಚ್ಚುಗಾರ (1 ಹುದ್ದೆಯನ್ನು ಶೀಘ್ರಲಿಪಿಗಾರರ ಆರ್ಹತೆಯುಳ್ಳವರಿಂದ ಭರ್ತಿ ಮಾಡುವುದು), 1 ವಾಹನ ಚಾಲಕರು, ಹಾಗೂ 2 ಡಿ ಗ್ರೂಪ್ ನೌಕಕರರು ಸೇರಿದಂತೆ ಸಿಬ್ಬಂದಿಗಳನ್ನು ಭರ್ತಿ ಮಾಡಲಾಗುತ್ತದೆ. ಈಗಾಗಲೇ ತಾ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರ್ನು ನೇಮಕಗೊಳಿಸಿದ್ದರು, ಅವರು ಕಡಬದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ.
ನೂತನ ಕಡಬ ತಾಲೂಕು ಪಂಚಾಯತ್ ಕ್ಷೇತ್ರಗಳು ಹಾಗೂ ಸದಸ್ಯರು
ಫಝಲ್ ಕೋಡಿಂಬಾಳ ಕಡಬ ಕ್ಷೇತ್ರ (ಕಡಬ-ಕೋಡಿಂಬಾಳ,)
ಗಣೇಶ್ ಕೈಕುರೆ ಕುಟ್ರುಪ್ಪಾಡಿ ಕ್ಷೇತ್ರ(ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರುಪ್ಪಾಡಿ)
ಪಿ.ವೈ. ಕುಸುಮಾ ಐತೂರು ಕ್ಷೇತ್ರ (ಐತೂರು, ಕೊಣಾಜೆ, ಬಂಟ್ರ, 102 ನೆಕ್ಕಿಲಾಡಿ)
ಆಶಾ ಲಕ್ಷ್ಮಣ್ ಬಿಳಿನೆಲೆ ಕ್ಷೇತ್ರ (ಬಿಳಿನೆಲೆ, ಶೀರಾಡಿ, ಶಿರಿಬಾಗಿಲು, ಕೊಂಬಾರು)
ತೇಜಶ್ವಿನಿ ಶೇಖರ ಗೌಡ ಗೋಳಿತ್ತೊಟ್ಟು ಕ್ಷೇತ್ರ (ಗೊಳಿತ್ತೊಟ್ಟು, ಆಲಂತಾಯ, ಹಳೇನೆರೆಂಕಿ)
ಲಲಿತಾ ಈಶ್ವರ ಚಾರ್ವಾಕ ಕ್ಷೇತ್ರ (ಕಾಣಿಯೂರು, ದೋಳ್ಪಾಡಿ, ಚಾರ್ವಾಕ, ಕಾೈಮಣ, ಕುದ್ಮಾರು)
ರಾಜೇಶ್ವರಿ ಕನ್ಯಮಂಗಲ ಸವಣೂರು ಕ್ಷೇತ್ರ(ಸವಣೂರು-ಪುಣ್ಚಪ್ಪಾಡಿ, ಪಾಲ್ತಾಡಿ, ಬೆಳಂದೂರು)
ಉಷಾ ಅಂಚನ್ ನೆಲ್ಯಾಡಿ ಕ್ಷೇತ್ರ(ನೆಲ್ಯಾಡಿ, ಕೊನಾಲು)
ವಲ್ಸಮ್ಮ ಕೆ.ಟಿ. ಕೌಕ್ರಾಡಿ ಕ್ಷೇತ್ರ (ಕೌಕ್ರಡಿ, ಇಚ್ಲಂಪಾಡಿ, ಬಲ್ಯ)
ತಾರಾ ಕೇಪುಳು ಆಲಂಕಾರು ಕ್ಷೇತ್ರ (ಆಲಂಕಾರು, ಪೆರಾಬೆ, ಕುಂತೂರು)
ಜಯಂತಿ ಆರ್ ಗೌಡ ರಾಮಕುಂಜ ಕ್ಷೇತ್ರ (ರಾಮಕುಂಜ, ಕೊೈಲ)
ಅಶೋಕ್ ನೆಕ್ರಾಜೆ ಸುಬ್ರಹ್ಮಣ್ಯ ಕ್ಷೇತ್ರ (ಸುಬ್ರಹ್ಮಣ್ಯ, ಏನೆಕಲ್ಲು, ಐನೆಕಿದು, ಬಳ್ಪ, ಕೇನ್ಯ)
ಶುಭದಾ ಎಸ್.ರೈ (ಉಪಾಧ್ಯಕ್ಷರು ಸುಳ್ಯ ತಾ.ಪಂ.)ಎಣ್ಮೂರು ಕ್ಷೇತ್ರ (ಎಡಮಂಗಲ, ಎಣ್ಮೂರು)