(ನ್ಯೂಸ್ ಕಡಬ) newskadaba.com ಮೈಸೂರು, ಅ.23. ಕಳೆದ ಮೂರು ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ ಚಾಮುಂಡಿ ಬೆಟ್ಟದ ರಸ್ತೆ ಬಳಿ ಮಂಗಳವಾರ ಸಂಜೆ ಭೂ ಕುಸಿತವಾಗಿದ್ದು ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇಂದು ಆಗಮಿಸಿ ಪರಿಶೀಲನೆ ನಡೆಸಿದರು.
ಡಾಲ್ ಹೌಸಿ ವ್ಯೂವ್ ಪಾಯಿಂಟ್ ನಿಂದ ನಂದಿ ವಿಗ್ರಹದ ಬಳಿಗೆ ತೆರಳುವ ಮಾರ್ಗದಲ್ಲಿ ಸುಮಾರು 15 ಮೀಟರ್ ನಷ್ಟು ತಡೆಗೋಡೆ 7 ಮೀಟರ್ ನಷ್ಟು ಕುಸಿದಿದೆ. ಮುಂದಿನ I5 ದಿನಗಳಲ್ಲಿ ಉತ್ತಮ ಅಡಿಪಾಯದೊಂದಿಗೆ ಆರ್ ಸಿಸಿ ತಡೆಗೋಡೆ ನಿರ್ಮಿಸಲಾಗುವುದು, ತುರ್ತು ಕಾಮಗಾರಿ ನಡೆಸಲು ಸಿದ್ಧತೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಗೋಕಾಕ್ ನಲ್ಲಿ ಬೃಹತ್ ಬಂಡೆ ಉರುಳುವ ಭೀತಿ; ಭೂ ಕುಸಿತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಲೋಕೋಪಯೋಗಿ ಅಧಿಕಾರಿ ಎಇಇ ರಾಜು, ಇದು ಮರಳು ಮಿಶ್ರಿತ ಮಣ್ಣಿನಿಂದ ನಿರ್ಮಾಣಗೊಂಡ ತಡೆಗೋಡೆಯಾದುದರಿಂದ ಕುಸಿದಿದೆ. ಸ್ಥಳದಲ್ಲಿ ಓರ್ವ ಕೋಬ್ರಾ ಮತ್ತು ಇಬ್ಬರು ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ರಸ್ತೆ ಕುಸಿದಿರುವುದರಿಂದ ನಂದಿಗೆ ಬರುವ ಎರಡು ಮಾರ್ಗವನ್ನು ಬಂದ್ ಮಾಡಲಾಗಿದೆ. ನಂದಿ ವಿಗ್ರಹಕ್ಕೆ ತೆರಳಲು ಅನ್ಯ ಮಾರ್ಗಗಳು ಇದ್ದು ಆ ಮಾರ್ಗಗಳ ಮೂಲಕ ತೆರಳಬಹುದು. ಪ್ರವಾಸಿಗರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ ಎಂದು ಮಾಹಿತಿ ನೀಡಿದರು.