(ನ್ಯೂಸ್ ಕಡಬ) newskadaba.com ಕಡಬ ಅ.23: ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾದು ಹೋಗುತ್ತಿರುವ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ರೆಂಜಿಲಾಡಿ ಗ್ರಾಮದ ಪೇರಡ್ಕ ಬಳಿಯ ಕಾಜರಕಟ್ಟೆ ಸೇತುವೆ ಅಗಲ ಕಿರಿದಾಗಿದ್ದು, ಅಪಘಾತವಾಗುವ ಸಂಭವವಿರುವುದರಿಂದ ಸೇತುವೆಯನ್ನು ಅಗಲೀಕರಣ ಅಥವಾ ಬೃಹತ್ ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹ ವ್ಯಕ್ತವಾಗಿದೆ. ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ ದೇವಸ್ಥಾನಗಳನ್ನು ಸಂಪರ್ಕಿಸುವ ಸುಬ್ರಹ್ಮಣ್ಯ-ಮರ್ದಾಳ-ಪೆರಿಯಶಾಂತಿ-ಧರ್ಮಸ್ಥಳ ರಾಜ್ಯ ಹೆದ್ದಾರಿ ಡಾಮರೀಕರಣಗೊಂಡು ಅಭಿವೃದ್ಧಿ ಹೊಂದಿದ್ದು, ಪೇರಡ್ಕ ಬಳಿಯ ಕಾಜರಕಟ್ಟೆ ಸೇತುವೆ ಅಗಲ ಕಿರಿದಾಗಿದ್ದು, ತಡೆಗೋಡೆಗಳೂ ಶಿಥಿಲಾವಸ್ಥೆಯಿಂದ ಕೂಡಿವೆ. ಪ್ರಸಕ್ತ ಒಂದು ವಾಹನ ಮಾತ್ರ ಸಂಚರಿಸಲು ಸಾಧ್ಯವಾಗಿದ್ದು, ಇದು ವಾಹನ ಸವಾರರಿಗೂ, ಪಾದಚಾರಿಗಳಿಗೂ ಅಪಾಯಕಾರಿ. ಸೇತುವೆಯ ಅಗಲೀಕರಣ ಅಥವಾ ಬದಲಿ ಬೃಹತ್ ಸೇತುವೆ ನಿರ್ಮಿಸುವ ಅಗತ್ಯವಿದೆ. ನೂಜಿಬಾಳ್ತಿಲ ಗ್ರಾ.ಪಂ. ಸಭೆಯಲ್ಲೂ ಈ ಬಗ್ಗೆ ಆಗ್ರಹ ವ್ಯಕ್ತವಾಗಿತ್ತು.
ಮರ್ದಾಳ-ಪೆರಿಯಶಾಂತಿ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರುವ ಮೊದಲು 30 ವರ್ಷಗಳ ಹಿಂದೆ ಪೇರಡ್ಕ ಕಾಜರಕಟ್ಟೆ ಎಂಬಲ್ಲಿ ತೋಡಿಗೆ ಸೇತುವೆ ನಿರ್ಮಿಸಿದ್ದು, ಬಳಿಕ ರಸ್ತೆ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿ ಅಭಿವೃದ್ಧಿಗೊಂಡು, ಅಗಲೀಕರಣವಾದರೂ ಈ ಸೇತುವೆಯನ್ನು ಅಗಲೀಕರಿಸದ ಕಾರಣ ಸೇತುವೆ ಕಿರಿದಾಗಿದ್ದು, ಒಂದು ವಾಹನ ಸಂಚಾರ ಮಾತ್ರ ಸಾಧ್ಯವಾಗುತ್ತಿದ್ದು, ರಾತ್ರಿ ಹೊತ್ತು ಸೇತುವೆ ಕಿರಿದಾಗಿರುವುದು ಬೇಗನೆ ತಿಳಿಯುತ್ತಿಲ್ಲ, ಮುಂದೆ ತಿರುವು ಇರುವುದರಿಂದಲೂ ಅಪಘಾತವಾಗುವ ಸಂಭವವನ್ನು ಅಲ್ಲಗೆಳೆಯುವಂತಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಇಚ್ಲಂಪಾಡಿಯಲ್ಲಿ ಗುಂಡ್ಯ ಹೊಳೆಗೆ ಸೇತುವೆ ನಿರ್ಮಾಣಗೊಂಡು ಹೆದ್ದಾರಿ ಅಭಿವೃದ್ಧಿಯಾದ ಬಳಿಕ ಪೆರಿಯಶಾಂತಿ-ಮರ್ದಾಳ ರಸ್ತೆಯಲ್ಲಿ ಸುಬ್ರಹ್ಮಣ್ಯ, ಧರ್ಮಸ್ಥಳ ಪುಣ್ಯ ಕ್ಷೇತ್ರಗಳಿಗೆ ಬೇಟಿಕೊಡುವ ಭಕ್ತಾದಿಗಳು ಇಲ್ಲಿಂದಲೇ ಪ್ರಯಾಣಿಸುತ್ತಿದ್ದು, ದಿನಂಪ್ರತಿ ಐನೂರಕ್ಕೂ ಅಧಿಕ ವಾಹನಗಳು, ಸುಮಾರು ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಸಂಚರಿಸುತ್ತಿದ್ದು ವಾಹನ ದಟ್ಟನೆಯೂ ಈ ರಸ್ತೆಯಲ್ಲಿ ಹೆಚ್ಚುತ್ತಿದೆ.
ಈ ರಸ್ತೆಯಲ್ಲಿ ಅಧಿಕ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಹೊರ ಜಿಲ್ಲೆ, ರಾಜ್ಯದ ಪ್ರಯಾಣಿಕರಿಗೆ ಇಲ್ಲಿ ಅಗಲ ಕಿರಿದಾದ ಸೇತುವೆ ಇರುವುದು ತಕ್ಷಣಕ್ಕೆ ಗಮನಕ್ಕೆ ಬಾರದಿರುವುದರಿಂದ ಅಪಾಯದ ಭೀತಿಯನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದು, ಈ ಕಿರಿದಾದ ಸೇತುವೆಯನ್ನು ಅಗಲೀಕರಣ ಅಥವಾ ಬೃಹತ್ ಸೇತುವೆ ನಿರ್ಮಾಣ ಮಾಡುವಲ್ಲಿ ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಪೇರಡ್ಕ ಕಾಜರಕಟ್ಟೆ ಸೇತುವೆಯನ್ನು ಅಗಲೀಕರಣ ಮಾಡುವುದು ಕಷ್ಟಕರವಾಗಬಹುದು, ಜೊತೆಗೆ ಕಾಮಗಾರಿ ನಡೆಸಲೂ ತ್ರಾಸದಾಯಕವಿದ್ದು, ಬದಲಿ ಬೃಹತ್ ಸೇತುವೆ ನಿರ್ಮಿಸುವುದು ಸೂಕ್ತ ಎನ್ನುವುದು ಸಾರ್ವಜನಿಕರ ಮಾತು. ಕೈಕಂಬ ಕೋಟೆ ಹೊಳೆ ಸೇತುವೆ ಮೇಲ್ದರ್ಜೆಗೇರಿಸಿದಲ್ಲಿ ಈ ಭಾಗದಲ್ಲಿ ಮುಳುಗು ಸೇತುವೆಗಳಿಗೆ ಅಂತ್ಯ ಸಿಗಲಿದೆ.
ಪ್ರಸ್ತಾವಣೆ ಸಲ್ಲಿಕೆಯಾಗಿದೆ; ಧರ್ಮಸ್ಥಳ-ಮರ್ದಾಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿರುವ ಪೇರಡ್ಕದ ಅಗಲ ಕಿರಿದಾದ ಸೇತುವೆಯನ್ನು ಅಗಲೀಕರಣಕ್ಕೆ ಕೆ.ಆರ್.ಡಿ.ಸಿ.ಎಲ್. ಅವರಿಗೆ ಪ್ರಸ್ತಾವಣೆ ಸಲ್ಲಿಕೆಯಾಗಿದ್ದು, ಜೊತೆಗೆ ಬಿಳಿನೆಲೆ ಗ್ರಾಮದ ಕೈಕಂಬ ಕೋಟೆಹೊಳೆ ಸೇತುವೆಯನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾವಣೆ ಸಲ್ಲಿಸಲಾಗಿದೆ. ಸುಳ್ಯ ಶಾಸಕರಾದ ಎಸ್.ಅಂಗಾರ ಅವರೂ ಈ ಬಗ್ಗೆ ಸೂಚನೆ ನೀಡಿದ್ದಾರೆ.
– ಪ್ರಮೋದ್
ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಪುತ್ತೂರು.
ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಪುತ್ತೂರು. ಪೇರಡ್ಕ ಹೆದ್ದಾರಿಯಲ್ಲಿರುವ ಕಿರಿದಾದ ಸೇತುವೆ ವಾಹನ ಸವಾರರಿಗೆ, ಪಾದಚಾರಿಗಳಿಗೂ ಅಪಾಯಕಾರಿಯಾಗಿದ್ದು, ಸೇತುವೆ ಅಗಲೀಕರಣ ಅಥವಾ ಬೃಹತ್ ಸೇತುವೆಗೆ ಇಲಾಖೆ ಕೂಡಲೇ ಮುಂದಾಗಲಿ.
– ವಸಂತ ಕುಬುಲಾಡಿ, ಕಡಬ ತಾಲೂಕು ಸಂಚಾಲಕರು
ದ.ಸಂ.ಸ.(ಅಂಬೇಡ್ಕರ್ ವಾದ)
ವರದಿ: ದಯಾನಂದ ಕಲ್ನಾರ್