ನೂಜಿಬಾಳ್ತಿಲ: ಗ್ರಾಮ ಬೀಟ್ ಪೊಲೀಸ್ ಸಭೆ ➤ ಕಲ್ಲುಗುಡ್ಡೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಗ್ರಹ

(ನ್ಯೂಸ್ ಕಡಬ) newskadaba.com ಕಡಬ, .23,   ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿ ನೂಜಿಬಾಳ್ತಿಲ ಬೀಟ್ ಪೊಲೀಸರಿಂದ ತಿಂಗಳ ಸಭೆಯು ರವಿವಾರ ನಡೆಯಿತು.
ಕಡಬ ಠಾಣಾ ಹೆಡ್‍ಕಾನ್ಸ್ಟೇಬಲ್, ನೂಜಿಬಾಳ್ತಿಲ ಬೀಟ್ ಪೊಲೀಸ್ ಅಧಿಕಾರಿ ಚಿನ್ನಪ್ಪ ಕೆ. ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೂಜಿಬಾಳ್ತಿಲ ಗ್ರಾ.ಪಂ. ಮಾಜಿ ಸದಸ್ಯೆ ಸುಶೀಲ ಕಲ್ಲುಗುಡ್ಡೆ ಮಾತನಾಡಿ, ಕೆಲ ತಿಂಗಳ ಹಿಂದೆ ಸಿಡಿಲು ಬಡಿದು ನಮ್ಮ ಕೃಷಿ ತೋಟ ಹಾಗೂ ಮನೆ, ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದ್ದು, ದಾಖಲೆ ಸಮೇತ ಕಂದಾಯ ಇಲಾಖೆಗೆ ಪರಿಹಾರಕ್ಕೆ ಅರ್ಜಿ ನೀಡಿದರೂ ತಿರಸ್ಕಾರಗೊಂಡಿರುವ ಬಗ್ಗೆ ಸಭೆಯಲ್ಲಿ ದೂರಿದರು. ಈ ಬಗ್ಗೆ ಚರ್ಚೆ ನಡೆದು ಉತ್ತರಿಸಿದ ಚಿನ್ನಪ್ಪ ಕೆ. ಅವರು ಈ ಬಗ್ಗೆ ಪಂಚಾಯತ್ ಹಾಗೂ ಸಂಬಂಧಪಟ್ಟವರಿಗೆ ಇನ್ನೊಮ್ಮೆ ಮನವಿ ಸಲ್ಲಿಸುವಂತೆ ಸೂಚಿಸಿದರು.

ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರತಿದಿನ ರೋಗಿಗಳು ತುಂಬಿಕೊಂಡಿದ್ದರೂ ಅಲ್ಲಿಗೆ ಅಗತ್ಯ ವೈದ್ಯರು, ಸಿಬ್ಬಂದಿಗಳನ್ನು ನೇಮಿಸದೇ ಬಡ ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಸಭೆಯಲ್ಲಿ ದೂರು ವ್ಯಕ್ತವಾಯಿತು. ಉತ್ತರಿಸಿದ ಬೀಟ್ ಪೊಲೀಸ್ ಅವರು ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.
ಕಲ್ಲುಗುಡ್ಡೆಯಲ್ಲಿ ಯಾವುದೇ ಸಭೆ, ಸಮಾರಂಭಗಳು ನಡೆಯಬೇಕಾದರೆ ಶಾಲೆಗಳನ್ನು ಆಶ್ರಯಿಸಬೇಕಾಗಿದ್ದು, ಕೆಲವೊಮ್ಮೆ ಅದು ಅಸಾಧ್ಯವಾಗಿರುವುದರಿಂದ, ಇಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕೆಂದು ಸುಂದರಿ ಕಲ್ಲುಗುಡ್ಡೆ ಆಗ್ರಹಿಸಿದರು. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿಯೇ ಅಂಬೇಡ್ಕರ್ ಭವನಕ್ಕೆ ಜಾಗ ಇರುವ ಬಗ್ಗೆ ಮಾಹಿತಿ ಇದ್ದು, ಅಲ್ಲಿ ಕೂಡಲೇ ಅಂಬೇಡ್ಕರ್ ಭವನ ನಿರ್ಮಿಸುವಂತೆ ಪಂಚಾಯತ್‍ಗೆ ಮನವಿ ಸಲ್ಲಿಸಲಾಗುವುದೆಂದು ಸುಂದರಿ ಅವರು ತಿಳಿಸಿದರು, ಇದಕ್ಕೆ ಎಲ್ಲರೂ ಧ್ವನಿಗೂಡಿಸಿದರು.

ಬೀಟ್ ಪೊಲೀಸ್ ಚಿನ್ನಪ್ಪ ಕೆ. ಮಾತನಾಡಿ, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಪೊಲೀಸ್ ಇಲಾಖೆಯಿಂದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ, ಸದುಪಯೋಗ ಪಡೆದುಕೊಳ್ಳಿ ಎಂದ ಅವರು, ಮೋಟಾರ್ ಕಾಯ್ದೆ ಕಟ್ಟುನಿಟ್ಟಾಗಿ ರೂಪುಗೊಂಡಿದ್ದು, ಸಾರ್ವಜನಿಕರು ತಮ್ಮ ರಕ್ಷಣೆಗೆ ಹೆಲ್ಮೆಟ್ ಧರಿಸುವುದರೊಂದಿಗೆ, ವಾಹನದಲ್ಲಿ ದಾಖಲೆಗಳನ್ನು ಇಟ್ಟುಕೊಳ್ಳಿ ಎಂದರು. ಹೆಣ್ಣು ಮಕ್ಕಳಿಗೆ ಯಾರಿಂದದಾರೂ ತೊಂದರೆಗಳಾದರೆ ಸಮಸ್ಯೆ ಮುಚ್ಚಿಡದೇ ಪೊಲೀಸರಿಗೆ ಮಾಹಿತಿ ನೀಡಿ ಕ್ರಮಕೈಗೊಳ್ಳಲಾಗುವುದು ಎಂದರು. ಮೆಸ್ಕಾಂನ ನೂಜಿಬಾಳ್ತಿಲ ಲೈನ್‍ಮೆನ್ ರಮೇಶ್ ಇಲಾಖೆಯ ಮಾಹಿತಿ ನೀಡಿದರು. ಕಡಬ ಠಾಣಾ ಸಿಬ್ಬಂದಿ ತಿಲಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಲಿತ ಸಂಘರ್ಷ ಸಮಿತಿ ಕಡಬ ತಾಲೂಕು ಒಕ್ಕೂಟದ ಅಧ್ಯಕ್ಷೆ ಸುಂದರಿ ಸ್ವಾಗತಿಸಿ, ವಂದಿಸಿದರು. ನೂಜಿಬಾಳ್ತಿಲ ಗ್ರಾ.ಪಂ. ಸದಸ್ಯೆ ಜಾನಕಿ, ಶ್ಯಾಮ್‍ಪ್ರಸಾದ್ ಕಲ್ಲುಗುಡ್ಡೆ, ಉಕ್ರ ಕಲ್ಲುಗುಡ್ಡೆ, ಬಾಬು, ಚಂದ್ರಾವತಿ ಸೇರಿದಂತೆ ಕಾಲೋನಿಯ ಸಾರ್ವಜನಿರು ಸಭೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!

Join the Group

Join WhatsApp Group