30 ವರ್ಷಗಳಿಂದ ಸ್ತ್ರೀ ಪಾತ್ರಧಾರಿ ಕಲಾವಿದ ➤ ಯಕ್ಷರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಕಲ್ಲುಗುಡ್ಡೆ ಲಕ್ಷ್ಮಣ ಪೂಜಾರಿ

(ನ್ಯೂಸ್ ಕಡಬ) newskadaba.com ಕಡಬ, .22. ಕರಾವಳಿಯ ಗಂಡುಗಲಿ ಎಂದೇ ಹೆಸರುವಾಸಿಯಾಗಿರುವ ಯಕ್ಷಗಾನದಲ್ಲಿ ಕಳೆದ 30 ವರ್ಷಗಳಿಂದ ಪೌರಾಣಿಕ ಪ್ರಸಂಗದ ಸ್ತ್ರೀ ಪಾತ್ರಧಾರಿಯಾಗಿ ತಮ್ಮ ಅದ್ಭುತ, ಮನೋಹರ ನಾಟ್ಯ, ಆಕರ್ಷಣೀಯ ನಟನೆಯಿಂದ ಹೆಸರುವಾಸಿಯಾಗಿರುವ ಕಲ್ಲುಗುಡ್ಡೆಯ ಲಕ್ಷ್ಮಣ ಪೂಜಾರಿ ಅವರು ಕಲಾಸೇವೆಯ ಸಾಧನೆಗೆ ಅನೇಕ ಗೌರವ, ಸಮ್ಮಾನಗಳಿಗೂ ಭಾಜನರಾಗಿದ್ದಾರೆ.ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಜಾಲು ನಿವಾಸಿ ದಿ. ಸುಬ್ಬಣ್ಣ ಪೂಜಾರಿ ಹಾಗೂ ಶಿವಮ್ಮ ದಂಪತಿಗಳ 4ನೇ ಪುತ್ರನಾಗಿರುವ ಲಕ್ಷ್ಮಣ ಪೂಜಾರಿ ಕಲ್ಲುಗುಡ್ಡೆಯವರು ಕಳೆದ 34 ವರ್ಷಗಳಿಂದ ಯಕ್ಷಗಾನದಲ್ಲಿ ಪಾತ್ರಧಾರಿಯಾಗಿದ್ದು,  ನೂಜಿಬಾಳ್ತಿಲ ಹಿ.ಪ್ರಾ. ಶಾಲೆಯಲ್ಲಿ 7ನೇ ತರಗತಿ ಶಿಕ್ಷಣ ಪಡೆದಿರುವ ಅವರು, ಬಳಿಕ ಮನೆಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.

 

25ನೇ ವರ್ಷಕ್ಕೆ ರಂಗಕ್ಕೆ; ಲಕ್ಷ್ಮಣ ಪೂಜಾರಿ ಅವರು ತಮ್ಮ 25ನೇ ವಯಸ್ಸಿನಲ್ಲಿ ಯಕ್ಷಗಾನದಲ್ಲಿ ಆಸಕ್ತಿ ತೋರಿ, 1985ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ 1 ವರ್ಷಗಳ ಕಾಲ ಕೆ.ಗೋವಿಂದ ಭಟ್ ಮತ್ತು ಕರ್ಗಲು ವಿಶ್ವೇಶ್ವರ ಭಟ್ಟರಲ್ಲಿ ನಾಟ್ಯಭ್ಯಾಸ ತರಭೇತಿ ಪಡೆದರು. ಬಳಿಕ ಕಾಡುಮನೆ ರಾಮಣ್ಣ ಗೌಡರ ಪ್ರೇರಣೆಯಿಂದ ಹವ್ಯಾಸಿ ಕಲಾವಿಧರಾಗಿ ಬೆಳೆದು ನಂತರದಲ್ಲಿ ಮೇಳದ ತಿರುಗಾಟವನ್ನು ಆರಂಭಿಸಿದರು.

 

28 ವರ್ಷಗಳಿಂದ ಕಟೀಲು ಮೇಳದಲ್ಲಿ; ಲಕ್ಷ್ಮಣ ಕಲ್ಲುಗುಡ್ಡೆ ಅವರು ಅರುವ, ಕೂಡ್ಲು, ಮಲ್ಲ, ಕಾಂತವರ, ಮದೂರು ಮೇಳಗಳಲ್ಲಿ ತಿರುಗಾಟ ನಡೆಸಿ, ಕಳೆದ 28 ವರ್ಷಗಳಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ತಂಡದ 3ನೇ ಮೇಳದಲ್ಲಿ ಸ್ತ್ರೀ ವೇಷಧಾರಿಯಾಗಿದ್ದು, ಮೇಳದ ಹಿರಿಯ ಕಲಾವಿಧರಾಗಿಯೂ ಇವರು ಗುರುತಿಸಿಕೊಂಡಿದ್ದಾರೆ.

Also Read  ಕಡಬ: ತೋಟಕ್ಕೆ ನುಗ್ಗಿದ ಕಾಡಾನೆ ➤ ಅಪಾರ ಕೃಷಿ ನಾಶ

 

ಸ್ತ್ರೀ ಪಾತ್ರದಾರಿಯಾಗಿ ಜನಪ್ರಿಯ; ಹೆಚ್ಚಿನ ಪ್ರಸಂಗಗಳಲ್ಲಿ ಸ್ತ್ರೀ ಪಾತ್ರಧಾರಿಯಾಗಿ ತಮ್ಮ ವಿಶೇಷ, ಅದ್ಭುತ, ಮನೋಹರ ನಟನೆ, ಸುಮಧುರ ಧ್ವನಿಯಿಂದ ತಮ್ಮ ಪಾತ್ರಕ್ಕೆ ಜೀವತುಂಬುವ ಲಕ್ಷ್ಮಣ ಪೂಜಾರಿ ಅವರು, ಈವರೆಗೆ ಹೆಚ್ಚು ಜನಪ್ರಿಯರಾಗಿದ್ದು ಸ್ತ್ರೀ ಪಾತ್ರಧಾರಿಯಾಗಿ. ಶ್ರೀದೇವಿ, ಮಾಲಿನಿ, ಲಕ್ಷ್ಮೀ, ಪುಲೋಮ, ಭೂದೇವಿ, ಗಿರಿಜ, ದ್ರೌಪದಿ, ಯಶೋಧೆ, ರಾಧೆ, ರುಕ್ಮಿಣಿ, ರೇಣುಕೆ, ಪಾರ್ವತಿ ಸೇರಿದಂತೆ ವಿವಿಧ ಸ್ತ್ರೀ ಪಾತ್ರಗಳನ್ನು ತಮ್ಮ ಪೌರಾಣಿಕ ಪ್ರಸಂಗಗಳಲ್ಲಿ ನಿರ್ವಹಿಸಿದ್ದಾರೆ. ಜೊತೆಗೆ ಪುರುಷ ಪಾತ್ರದಲ್ಲೂ ಸೈ ಎನಿಸಿರುವ ಇವರು ಧರ್ಮರಾಯ, ವಿಷ್ಣು, ಕೃಷ್ಣ, ಬ್ರಹ್ಮ, ನಾರದ, ಶಲ್ಯ, ರಾಮ ಮೊದಲಾದ ಪೋಷಕ ಪಾತ್ರಗಳಿಗೂ ಬಣ್ಣ ಹಚ್ಚಿದ್ದಾರೆ.

 

ಸಮ್ಮಾನ ಗೌರವ; ಯಕ್ಷರಂಗದಲ್ಲಿ ಜನಪ್ರಿಯರಾಗಿರುವ ಲಕ್ಷ್ಮಣ ಪೂಜಾರಿ ಅವರನ್ನು ಕಲ್ಲುಗುಡ್ಡೆ ಶ್ರೀ ರಾಮ್ ಫ್ರೆಂಡ್ಸ್ ವತಿಯಿಂದ, ಕುಲಶೇಖರ ಹತ್ತು ಸಮಸ್ತರ ಯಕ್ಷಗಾನ ಸೇವಾ ಸಮಿತಿ ಹಾಗೂ ಸುವರ್ಣ ಮಹೋತ್ಸವ ಸಮಿತಿ ವತಿಯಿಂದ, ಕಟೀಲು ಶ್ರೀ ಗೋಪಾಲಕೃಷ್ಣ ಅಶ್ರಣ್ಣರ ಸಂಸ್ಮರಣೆಯ ರಜತಮಹೋತ್ಸವದ ಅಂಗವಾಗಿ ನಡೆದ ಯಕ್ಷಗಾನ ಬಯಲಾಟದಲ್ಲಿ, ಕಟೀಲು ಮೇಳದ 50ರ ಸಂಭ್ರಮದಲ್ಲಿ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಮ್ಮಾನ, ಗೌರವಗಳನ್ನು ಪಡೆದುಕೊಂಡಿದ್ದಾರೆ. ಯಕ್ಷರಂಗದ ಘಟಾನುಘಟಿಗಳಾದ ಕುರಿಯ ಗಣಪತಿ ಶಾಸ್ತ್ರೀ, ಕೆರಗತಿ ದಿ. ಗುಡ್ಡಪ್ಪ, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಕೈರಂಗಳ ಕೃಷ್ಣ ಮೂಲ್ಯ, ಬೆಳ್ಳಾರೆ ಮಂಜುನಾಥ ಭಟ್, ಪುಂಡರೀಕ್ಷಾ ಉಪಾಧ್ಯಯರು ಸೇರಿದಂತೆ ಹಲವಾರು ಹಿರಿಯ ಕಲಾವಿಧರೊಂದಿಗೆ ಪಾತ್ರ ನಿರ್ವಹಿಸಿರುವ ಇವರು ಅವರೆಲ್ಲರ ಪ್ರೋತ್ಸಾಹ, ಸಹಕಾರವನ್ನು ಪಡೆದಿರುತ್ತಾರೆ. ನೂಜಿಬಾಳ್ತಿಲ ಬೆಥನಿ ಕಾಲೇಜಿನ ವಿದ್ಯಾರ್ಥಿಗಳಿಗೆ ತರಭೇತಿ ನೀಡಿರುವ ಇವರು ಚಂದ್ರಾವತಿ ಅವರನ್ನು ವರಿಸಿದ್ದು, ನರ್ಸ್ ಆಗಿರುವ ಪುತ್ರಿ ರೂಪಶ್ರೀ ಯವರನ್ನು ವಿವಾಹ ಮಾಡಿಕೊಡಲಾಗಿದ್ದು, ಪುತ್ರ ಚೇತನ್ ಕುಮಾರ್ ಬಿ.ಇ ವ್ಯಾಸಂಗ ಮಾಡುತ್ತಿದ್ದಾರೆ.

Also Read  ಮಂಗಳೂರು: ಸಿಇಟಿ ಪರೀಕ್ಷೆ ಆರಂಭ !!

 

ಯಕ್ಷರಂಗ ಅಜರಾಮರ; ಯಕ್ಷಗಾನವು ಭಕ್ತಿ, ಶಕ್ತಿಯ ಹೋರಾಟ. ಪೌರಾಣಿಕ, ಭಕ್ತಿ ಪ್ರಧಾನ ಕಥೆಯಾಧರಿತ ಪ್ರಸಂಗಗಳಿಂದ ಜನಜನಿತವಾಗಿದ್ದು, ಯಕ್ಷಗಾನದ ಸಂದೇಶಗಳು ಸಮಾಜದ ಅಂಕುಡೊಂಕು ಸರಿಪಡಿಸಲು ಸ್ಪೂರ್ತಿ. ಯಕ್ಷರಂಗ ಅಜರಾಮರವಾಗಿದ್ದು, ಯುವಕರು ಯಕ್ಷಗಾನದತ್ತ ಒಲವು ಬೆಳೆಸಿಕೊಳ್ಳುವ ಅನಿವಾರ್ಯತೆಯಿದೆ.

 – ಲಕ್ಷ್ಮಣ ಪೂಜಾರಿ ಕಲ್ಲುಗುಡ್ಡೆ

    ವರದಿ: ದಯಾನಂದ ಕಲ್ನಾರ್

 

 

error: Content is protected !!
Scroll to Top