(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ರಾಷ್ತ್ರೀಯ ಸೇವಾ ಯೋಜನೆ ದಿನ ಸೆಪ್ಟೆಂಬರ್ 24 ಇದರ ಅಂಗವಾಗಿ ಚೂಂತಾರು ಸರೋಜಿನಿ ಪ್ರತಿಷ್ಠಾನ (ರಿ) ಮಂಗಳೂರು ಇದರ ವತಿಯಿಂದ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಕೃಷ್ಣಾಪುರ ಕಾಟಿಪಳ್ಳ ಇಲ್ಲಿನ ಶಾಲಾ ಗ್ರಂಥಾಲಯಕ್ಕೆ 24-09-2019 ರಂದು 350 ಪುಸ್ತಕ ಕೊಡುಗೆ ನೀಡಲಾಯಿತು.
ಹಾಗೂ ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಶಿಬಿರ ನಡೆಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದ.ಕ. ಜಿಲ್ಲಾ ಗೃಹರಕ್ಷಕ ದಳ ಇದರ ಸಮಾದೇಷ್ಟರು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಇದರ ಕಾರ್ಯದರ್ಶಿಯಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಭಾಗವಹಿಸಿದ್ದರು. ಶಾಲಾ ಗ್ರಂಥಾಲಯಕ್ಕೆ ಸುಮಾರು 350 ಪುಸ್ತಕಗಳನ್ನು ಪ್ರತಿಷ್ಠಾನದ ವತಿಯಿಂದ ನೀಡಲಾಯಿತು. ಅವರು ಮಾತನಾಡುತ್ತಾ ಪ್ರತಿಯೊಬ್ಬ ಮಗುವು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.
ಸಣ್ಣ ವಯಸ್ಸಿನ ಮಕ್ಕಳು ಮೊಬೈಲ್‍ನಲ್ಲಿ ಆಟವಾಡುವುದನ್ನು ಬಿಟ್ಟು ದಿನಕ್ಕೆ ಕನಿಷ್ಟ ಒಂದು ಗಂಟೆಗಳ ಕಾಲ ಓದುವ ಹವ್ಯಾಸ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು. ನಿರಂತರ ಓದುವಿಕೆಯಿಂದ ಜ್ಞಾನವೃದ್ಧಿಯಾಗಿ ಅಂತಹ ಮಕ್ಕಳೇ ದೇಶದ ಸತ್ಪ್ರಜೆಯಾಗಿ ರೂಪುಗೊಳ್ಳುತ್ತಾರೆ ಎಂದರು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ವಸಂತಿಯವರು ಮಾತನಾಡಿ ಯಾವುದೇ ಫಲಾಪೇಕ್ಷೆ ಇಲ್ಲದೆ, ಸ್ವಾರ್ಥ ಇಲ್ಲದೆ ನೀಡುವ ಸೇವೆ ಮತ್ತು ಸಹಾಯ ನಿಜಕ್ಕೂ ಶ್ಲಾಘನೀಯ.
ಸರಕಾರಿ ಶಾಲೆಗಳಿಗೆ ಸಹೃದಯಿ ದಾನಿಗಳ ಅಗತ್ಯ ಇದೆ ಎಂದು ನುಡಿದರು. ಶಾಲಾ ವತಿಯಿಂದ ಪ್ರತಿಷ್ಠಾನಕ್ಕೆ ತುಂಬು ಹೃದಯದ ಧನ್ಯವಾದವನ್ನು ಅವರು ಸಲ್ಲಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಸುಶೀಲ ಇವರು ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಶಿಕ್ಷಕಿಯರಾದ ಪ್ರಪುಲ್ಲ, ಚಂದ್ರಿಕಾ, ರೇಖಾ ಮತ್ತು ಶಾಲಾ ಶಿಕ್ಷಕ ಮತ್ತು ಹೆತ್ತವರ ಸಂಘದ ಅಧ್ಯಕ್ಷೆ ಶ್ರೀಮತಿ ಶಾಹಿರಾಬಾನು ಉಪಸ್ಥಿತರಿದ್ದರು. ಸುಮಾರು 150 ಮಂದಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.