(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಆಫ್ರಿಕಾದ ದೈತ್ಯ ಬಸವನ ಹುಳು (Achatina fulica) ವಿಶ್ವದ ಅತಿದೊಡ್ಡ ಮತ್ತು ಹಾನಿಕಾರಕ ಭೂಮಿ ಬಸವನ ಕೀಟಗಳಲ್ಲಿ ಒಂದು. ಇದು ಮನುಷ್ಯನ ಹಿಡಿಯಷ್ಟು ದೊಡ್ಡ ಶಂಖದ ಆಕಾರದ ಚಿಪ್ಪುನಲ್ಲಿ ಇರುವಂತಹ ಜೀವಿ. ಕೈಯಲ್ಲಿ ಹಿಡಿದಾಗ ಆಮೆಯಂತೆ ಚಿಪ್ಪಿನೊಳಗೆ ಅಡಗಿಕೊಳ್ಳುತ್ತದೆ.
ರಾತ್ರಿಯಿಡೀ ಎಚ್ಚರವಿದ್ದು ತೋಟದಲ್ಲಿರುವ ಎಲ್ಲಾ ರೀತಿಯ ಬೆಳೆಗಳನ್ನು ನಾಶ ಮಾಡುತ್ತದೆ, ದಿನದ ಹಗಲು ಸಮಯದಲ್ಲಿ ಗಿಡಗಳಲ್ಲಿ/ಪೊದೆಗಳಲ್ಲಿ ಅವಿತುಕೊಂಡು ರಾತ್ರಿ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ.ಬಸವನ ಹುಳುಗಳನ್ನು ಸಮಗ್ರವಾಗಿ ನಿಯಂತ್ರಣ ಮಾಡಬಹುದಾಗಿದ್ದು ಇದರಿಂದ ನಾವು ನಮ್ಮ ಪರಿಸರವನ್ನು ಹಾಗೂ ಬೆಳೆಗಳನ್ನು ಸಂರಕ್ಷಿಸಬಹುದು. ತೋಟದಲ್ಲಿ ಕಳೆಗಿಡಗಳನ್ನು ತೆಗೆದು ಸ್ವಚ್ಚತೆಯನ್ನು ಕಾಪಾಡುವುದು.
ಅಡಿಕೆಯ ಹಾಳೆ/ಸೋಗೆಗಳನ್ನು ತೋಟದಲ್ಲಿ ಅಲ್ಲಲ್ಲಿ ರಾಶಿ ಇಟ್ಟು, ಅದಕ್ಕೆ ಆಕರ್ಷಿಸಿ ಬಂದ ಬಸವನ ಹುಳುಗಳನ್ನು ಬೆಳಗಿನ ಸಮಯದಲ್ಲಿ ನಾಶಪಡಿಸಬಹುದು ಅಥವಾ ಹುಳುಗಳನ್ನು ಆಕರ್ಷಿಸಲು ಸಗಣಿ ದ್ರಾವಣದಿಂದ ಒದ್ದೆ ಮಾಡಿದ ಗೋಣಿಚೀಲಗಳನ್ನು ಅಲ್ಲಲ್ಲಿ ಇಡುವುದರಿಂದ ಹುಳುಗಳನ್ನು ಆಕರ್ಷಿಸಿ, ಸಂಗ್ರಹಿಸಿ ನಂತರದಲ್ಲಿ, ಸಂಗ್ರಹಿಸಿದ ಹುಳುಗಳನ್ನು ಉಪ್ಪು ಅಥವಾ Copper Sulphate ಅಲ್ಲಿ ಹಾಕಿ ನಾಶ ಪಡಿಸಬಹುದು. ಮೆಟಾಲ್ಡಿಹೈಡ್ (Metaldehyde) ಕೀಟನಾಶಕಗಳನ್ನು ಬಳಸಿ ಹುಳುಗಳನ್ನು ನಾಶಪಡಿಸಬಹುದು. ವಿಷ ಆಹಾರ ಬಳಸಿ ಅವುಗಳನ್ನು ನಾಶಪಡಿಸಬಹುದು.
ವಿಷ ಆಹಾರ ತಯಾರಿಸುವ ವಿಧಾನ :1 ಕೆ.ಜಿ. ಪಪ್ಪಾಯ ಅಥವಾ ಅನಾನಸು ಅಥವಾ ಎಲೆಕೋಸು(cabbage) ತುಂಡು ಮಾಡಿ 20 ಮಿ.ಲೀ. . Methomyl ಕೀಟನಾಶಕಗಳನ್ನು ಲೇಪಿಸಿ ಅಡಿಕೆ ಹಾಳೆ ಅಥವಾ ಗೋಣಿ ಮೇಲೆ ಸಾಯಂಕಾಲದ ಸಮಯ ತೋಟದಲ್ಲಿ ಇಡುವುದರಿಂದ ಬಸವನ ಹುಳುಗಳು ರಾತ್ರಿ ಅದನ್ನು ತಿಂದು ಸಾಯುತ್ತವೆ, ಬೆಳಿಗ್ಗೆ ಬಸವನ ಹುಳುಗಳು ಆರಿಸಿ ನಾಶ ಮಾಡಬೇಕು. ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಅವುಗಳು ವಿಷ ಆಹಾರವನ್ನು ತಿನ್ನದಂತೆ ನೋಡಿಕೊಳ್ಳಬೇಕು.
ಮಳೆ ಕಳೆದ ನಂತರ ಹುಳುಗಳು ಕಂಡು ಬಂದಲ್ಲಿ ಸುಣ್ಣವನ್ನು ಗಿಡದ ಸುತ್ತಲೂ ಹರಡುವುದರಿಂದ ಹುಳುಗಳು ಸಾಯುತ್ತವೆ. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಜಿಲ್ಲಾ ಪಂಚಾಯತ್ ಮಂಗಳೂರು ದೂರವಾಣಿ ಸಂಖ್ಯೆ: 8277806372 ಇಲ್ಲಿ ಸಂಪರ್ಕಿಸಬೇಕು ಎಂದು ಉಪನಿರ್ದೇಶಕರು ತೋಟಗಾರಿಕೆ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.