(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24.ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮತ್ತು ಪ್ಲಾಸ್ಟಿಕ್‍ಗೆ ಪರ್ಯಾಯವಾಗಬಹುದಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟವನ್ನು ವಿಶ್ವವಿದ್ಯಾನಿಲಯ ಕಾಲೇಜಿನ ಸೂಕ್ಷ್ಮಾಣು ಜೀವಿಶಾಸ್ರ್ತ ವಿಭಾಗ, ಎನ್‍ಎನ್‍ಎಸ್ ಘಟಕದ ಸಹಯೋಗದೊಂದಿಗೆ ರವೀಂದ್ರ ಕಲಾಭವನದ ಬಳಿ ಇತ್ತೀಚೆಗೆ ಆಯೋಜಿಸಿತ್ತು.
ಬೀಜದ ಪೆನ್‍ಗಳು ಪೆನ್ಸಿಲ್‍ಗಳು, ನೆಡಬಹುದಾದ ಪೆನ್‍ಗಳು, ಪುನರ್ಬಳಕೆ ಮಾಡಿದ ಪೇಪರ್‍ನಿಂದ ತಯಾರಿಸಿದ ನೋಟ್‍ಬುಕ್‍ಗಳು, ಸೆಣಬಿನ ಬ್ಯಾಗ್, ಕೈಚೀಲಗಳು, ಬಾಳೆ ಎಲೆ, ಪೇಪರ್ ಬ್ಯಾಗ್, ಬಟ್ಟೆಯ ಚೀಲಗಳು, ವಿಭಾಗಗಳಿರುವ ಶಾಪಿಂಗ್ ಬ್ಯಾಗ್‍ಗಳು, ಅಡಿಕೆ ಹಾಳೆಯ ತಟ್ಟೆ, ಪ್ಲೇಟ್, ಬೌಲ್, ಟ್ರೇಗಳು, ತಾಮ್ರ ಮತ್ತು ಸ್ಟೀಲ್‍ನ ನೀರಿನ ಬಾಟಲ್‍ಗಳು ಆಕರ್ಷಿಸಿದವು. ಕೆಲವು ಮಳಿಗೆಗಳಲ್ಲಿ ಉತ್ತಮ ಮಾರಾಟವೂ ದಾಖಲಾಯಿತು.
ಪ್ರಾಂಶುಪಾಲ ಡಾ. ಉದಯ ಕುಮಾರ ಉದ್ಘಾಟಿಸಿದ ವಸ್ತುಪ್ರದರ್ಶನದಲ್ಲಿ ಮೈಸೂರಿನ ಜೀವ್ ಇಕೋಫ್ರೆಂಡ್ಲಿ ಪ್ರೊಡಕ್ಟ್ಸ್, ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಮಂಗಳೂರಿನ ಆಧ್ಯತಾ ಇಕೋಫ್ರೆಂಡ್ಲಿ ಸೊಲ್ಯೂಶನ್ಸ್, ಸೇವಾ ಭಾರತಿ ಟ್ರಸ್ಟ್, ಚೇತನಾ ಶಾಲೆ, ಹರಿಣ ವಾತಾವರಣ ಸ್ನೇಹಿ ಗೃಹೋದ್ಯೋಗ ಮೊದಲಾದ ಸಂಸ್ಥೆಗಳು ಭಾಗವಹಿಸಿದ್ದವು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ, ಉದ್ಯಮಿ ನಂದಗೋಪಾಲ ಶೆಣೈ ಮೊದಲಾದವರು ಮಳಿಗೆಗಳಿಗೆ ಭೇಟಿ ನೀಡಿ ಪ್ರೋತ್ಸಾಹಿಸಿದರು.
ಅಕ್ಟೋಬರ್ 2 ರಿಂದ ಕೇಂದ್ರ ಸರ್ಕಾರ ಮರುಬಳಕೆಯಾಗದ ಪ್ಲಾಸ್ಟಿಕ್ ನಿಷೇಧಕ್ಕೆ ತೀರ್ಮಾನಿಸಿರುವುದರಿಂದ ಸರ್ಕಾರದ ಆದೇಶದ ಅನುಗುಣವಾಗಿ ಈ ಪ್ಲಾಸ್ಟಿಕ್ ವಿರೋಧಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಯೋಜಕಿ, ಸೂಕ್ಷ್ಮಾಣು ಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಾರತೀ ಪ್ರಕಾಶ್, ಪ್ರೊ. ಸುಮಂಗಲಾ, ಎನ್‍ಎಸ್‍ಎಸ್ ಅಧಿಕಾರಿಗಳಾದ ಡಾ. ಗಾಯತ್ರಿ, ಸುರೇಶ್ ಮಾರ್ಗದರ್ಶನ ನೀಡಿದರು.