(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.24ವಿಶ್ವವಿದ್ಯಾನಿಲಯ ಕಾಲೇಜಿನ ಪರಿಸರ ಸಂಘ ಮತ್ತು ಇನೋವೇಶನ್ ಕ್ಲಬ್‍ಗಳ ಪ್ರಸಕ್ತ ವರ್ಷದ ಕಾರ್ಯ ಚಟುವಟಿಕೆಗಳಿಗೆ ರವೀಂದ್ರ ಕಲಾಭವನದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ವಿದ್ಯಾರ್ಥಿಗಳು ಮತ್ತು ಗಣ್ಯರು ದೀಪ ಬೆಳಗಿಸಿ ಔಪಚಾರಿಕ ಉದ್ಘಾಟನೆ ನಡೆಸಿದರು. ಕಾಗದ ಮತ್ತು ಇತರ ಮಣ್ಣಿನಲ್ಲಿ ಕರಗಬಲ್ಲ ವಸ್ತುಗಳಿಂದ ತಯಾರಿಸಿದ ಆವಿಷ್ಕಾರಕ ಪಾಪ್-ಅಪ್ ಬ್ಯಾನರನ್ನು, ಸಂಶೋಧನೆ ಮತ್ತು ಪರಿಸರ ಸ್ನೇಹಿ ನಡೆಯ ಸೂಚಕದಂತೆ ವೇದಿಕೆಯಲ್ಲಿ ಸ್ಥಾಪಿಸಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಇಕೋ ಮತ್ತು ಇನೋವೇಶನ್ ಕ್ಲಬ್‍ಗಳ ಸಂಚಾಲಕ ಡಾ. ಸಿದ್ಧರಾಜು ಎಂ.ಎನ್ ಅವರ ಫೂಟ್ ಪ್ರಿಂಟ್ಸ್ 2018 ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಪರಿಸರ ವಿಜ್ಞಾನಿ ಮತ್ತು ನಗರದ ಕಾರ್ ಸ್ಟ್ರೀಟ್‍ನ ಸರ್ಕಾರಿ ಮೊದಲ ದರ್ಜೆ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಜಯಕರ ಭಂಡಾರಿ, ಎನ್ವಿರಾನ್‍ಮೆಂಟಲ್ ಇಶ್ಯೂಸ್ ಆಂಡ್ ಎಥಿಕಲ್ ರೆಸ್ಪಾನ್ಸಿಬಿಲಿಟೀಸ್ ಕುರಿತಾಗಿ ಮಾಹಿತಿಯುಕ್ತ ಉಪನ್ಯಾಸ ನೀಡಿದರು. ವಿವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಕೆ ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು.