ತೈಲ ಸೋರಿಕೆ ನಿರ್ವಹಣೆ ➤ನಿರಂತರ ಎಚ್ಚರ ವಹಿಸಲು ಡಿಸಿ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು ,ಸಪ್ಟೆಂಬರ್.18. ನವಮಂಗಳೂರು ಬಂದರಿಗೆ ವಿದೇಶಗಳಿಂದ ಸಾಕಷ್ಟು ತೈಲ ಹೊತ್ತ ನೌಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಯಾವುದೇ ರೀತಿಯ ತೈಲ ಸೋರಿಕೆಯಾದರೆ, ಅದರ ನಿರ್ವಹಣೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ನಿರಂತರವಾಗಿಡುವಂತೆ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸೂಚಿಸಿದ್ದಾರೆ. ಅವರು ಮಂಗಳವಾರ ಕೋಸ್ಟ್ ಗಾರ್ಡ್ ವತಿಯಿಂದ ಪಣಂಬೂರು ಕೋಸ್ಟ್ ಗಾರ್ಡ್ ಕಚೇರಿಯಲ್ಲಿ ಮಾಲಿನ್ಯ ನಿಯಂತ್ರಣ ಕುರಿತು ರಾಜ್ಯ ಮಟ್ಟದ ಎರಡು ದಿನಗಳ ವಿಚಾರಸಂಕಿರಣ ಹಾಗೂ ದ.ಕ. ಜಿಲ್ಲಾ ತೈಲ ಸೋರಿಕೆ ವಿಪತ್ತು ನಿರ್ವಹಣಾ ಯೋಜನೆಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ತೈಲ ಸೋರಿಕೆಯು ದೊಡ್ಡ ವಿಪತ್ತಾಗಿದ್ದು, ಈ ಬಗ್ಗೆ ಸಾಕಷ್ಟು ಶಾಸನಗಳಿದ್ದರೂ ಮಾಹಿತಿ ಇಲ್ಲದೇ ಇರುವುದರಿಂದ, ಪರಸ್ಪರ ಸಂವಹನ ಕೊರತೆಯಾಗಿ ತುರ್ತು ಸಂದರ್ಭಗಳಲ್ಲಿ ಸಾಕಷ್ಟು ಸಮಸ್ಯೆಯಾಗುವ ಸಾಧ್ಯತೆಗಳಿರುತ್ತವೆ. ತೈಲ ಸೋರಿಕೆಯಂತಹ ಘಟನೆಗಳಲ್ಲಿ ಸಾಕಷ್ಟು ಪರಿಸರ ಸಂಬಂಧಿ ಸಮಸ್ಯೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇಂತಹ ಸಂದರ್ಭಗಳಲ್ಲಿ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಈ ಯೋಜನಾ ಪುಸ್ತಕವನ್ನು ಹೊರತಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಇತ್ತೀಚೆಗೆ ಜಿಲ್ಲೆಯಲ್ಲಿ ತೀವ್ರ ಮಳೆ ಬಂದು, ನೆರೆ ಪ್ರವಾಹ, ಭೂಕುಸಿತ ಉಂಟಾಗಿದ್ದರೂ, ಜಿಲ್ಲಾಡಳಿತವು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ.

Also Read  ➤ಮಹಿಳಾ ಐಪಿಎಲ್ ಖರೀದಿಸಲು ಮುಂದೆ ಬಂದ 30 ಕಂಪನಿಗಳು

ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ವಿಪತ್ತುಗಳನ್ನು ನಿರ್ವಹಿಸಲು ಜಿಲ್ಲಾಡಳಿತವು ನಿರಂತರ ಕ್ರಮಗಳನ್ನು ನಡೆಸಲಿದೆ ಎಂದು ಸಿಂಧೂ ರೂಪೇಶ್ ಹೇಳಿದರು. ಇತ್ತೀಚಿನ ದಿನಗಳಲ್ಲಿ ಸಮುದ್ರ ಮಧ್ಯದಲ್ಲಿಯೇ ನೌಕೆ, ಬೋಟುಗಳು ತಾಂತ್ರಿಕ ಸಮಸ್ಯೆಗಳಿಂದ ಅಥವಾ ಪ್ರಾಕೃತಿಕ ಕಾರಣಗಳಿಂದ ಸಂಚಾರ ನಿಂತು ಶಾಶ್ವತವಾಗಿ ಅಲ್ಲಿಯೇ ಮುಳುಗಿ ಹೋಗುವ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿವೆ. ಈ ನಿಟ್ಟಿನಲ್ಲಿ ಇಂತಹ ಪ್ರಕರಣಗಳನ್ನು ಶಾಸನಬದ್ಧವಾಗಿ ನಿರ್ವಹಿಸಲು ನಿಯಮ ಜಾರಿಗೆ ತರಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಕರಾವಳಿ ತೀರ ರಕ್ಷಣೆಯಲ್ಲಿ ಕೋಸ್ಟ್‍ಗಾರ್ಡ್ ಸೇವೆಯನ್ನು ಶ್ಲಾಘಿಸಿದ ಅವರು, ಜಿಲ್ಲಾಡಳಿತವು ಈ ನಿಟ್ಟಿನಲ್ಲಿ ಕೋಸ್ಟ್‍ಗಾರ್ಡ್‍ಗೆ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಕೋಸ್ಟ್‍ಗಾರ್ಡ್ ಡಿಐಜಿ ಎಸ್.ಎಸ್. ದಸೀಲಾ ಮಾತನಾಡಿ, ಸಮುದ್ರದಲ್ಲಿ ತೈಲ ಸೋರಿಕೆಯಂತಹ ಘಟನೆಗಳ ಸಂದರ್ಭದಲ್ಲಿ ಕೋಸ್ಟ್‍ಗಾರ್ಡ್ ನೋಡಲ್ ಏಜನ್ಸಿಯಾಗಿದೆ. ಮೂರು ಹಂತದಲ್ಲಿ ಇಂತಹ ಘಟನೆಗಳನ್ನು ನಿರ್ವಹಿಸಲಾಗುತ್ತದೆ. ತೈಲ ಸೋರಿಕೆಯನ್ನು ತಡೆಯಲಾಗಿದಿದ್ದರೂ, ಅಂತಹ ಘಟನೆಗಳ ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆ ಪ್ರಮುಖವಾಗಿದೆ. ಇದಕ್ಕಾಗಿ ಉತ್ಕøಷ್ಟ ಮಟ್ಟದ ಪೂರ್ವಸಿದ್ಧತೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ವಿಚಾರಸಂಕಿರಣದಲ್ಲಿ ಒತ್ತು ನೀಡಲಾಗುವುದು ಎಂದು ಹೇಳಿದರು. ಕರಾವಳಿ ತಟ ರಕ್ಷಣೆಯಲ್ಲಿ ಎನ್‍ಎಂಪಿಟಿಯಲ್ಲಿರುವ 3ನೇ ಕೋಸ್ಟ್ ಗಾರ್ಡ್ ಜಿಲ್ಲಾ ಘಟಕವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ರೀತಿಯ ನೌಕೆ, ಬೋಟು, ಉಪಕರಣಗಳೊಂದಿಗೆ ಸುಸಜ್ಜಿತವಾಗಿದೆ. ಸಮುದ್ರದಲ್ಲಿ ನಡೆಯುವ ಎಲ್ಲಾ ರೀತಿಯ ಮಾನವ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ದಸೀಲಾ ತಿಳಿಸಿದರು.

Also Read  ಕಡಬ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ► ಶಿವಮೊಗ್ಗ ಜಿ.ಪಂ.ಸದಸ್ಯ ಮಂಜುನಾಥ ನಾಯ್ಕ್‌ ಭೇಟಿ

ಈಗಾಗಲೇ ಮೀನುಗಾರಿಕಾ ಇಲಾಖೆಯ ನೆರವಿನೊಂದಿಗೆ ಜಿಲ್ಲೆಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಬೋಟು, ನಾಡದೋಣಿಗಳಿಗೆ ಕಲರ್ ಕೋಡ್ ಅಳವಡಿಸಲಾಗಿದ್ದು, ಇದು ಶೇಕಡಾ 100 ರಷ್ಟು ಪೂರ್ತಿಯಾಗಿದೆ ಎಂದು ಅವರು ಶ್ಲಾಘಿಸಿದರು. ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿಜಯಕುಮಾರ್ ಅವರು ತೈಲ ಸೋರಿಕೆ ವಿಪತ್ತು ನಿರ್ವಹಣೆ ಪುಸ್ತಕದ ಮಾಹಿತಿ ನೀಡಿದರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಜಯಪ್ರಕಾಶ್ ನಾಯಕ್, ಸಿಎಂಎಫ್‍ಆರ್‍ಐ ವಿಜ್ಞಾನಿ ಡಾ. ಬಿಂದು ಸುಲೋಚನಾ, ಎನ್.ಐ.ಟಿ.ಕೆ. ಉಪನ್ಯಾಸಕ ಡಾ. ರಾಜ್‍ಮೋಹನ್ ಅವರು ವಿವಿಧ ಮಾಲಿನ್ಯ ವಿಷಯಗಳ ಕುರಿತು ವಿಷಯ ಮಂಡಿಸಿದರು. ಕೋಸ್ಟ್‍ಗಾರ್ಡ್ ಉಪಕಮಾಂಡೆಂಟ್ ರಾಜ್‍ಕುಮಾರ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!
Scroll to Top