(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.14.ಮಂಗಳೂರು ತಾಲೂಕು ಕಚೇರಿಯ ಆಹಾರ ನಿರೀಕ್ಷಕರು 2014ನೇ ಸಾಲಿನ ನವೆಂಬರ್ 5ರಂದು ಹಳೆಯಂಗಡಿ ಗ್ರಾಮದಲ್ಲಿರುವ ಬದ್ರುದಿನ್ ಎಂಬವರ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ 29.51 ಕ್ವಿಂಟಾಲ್ ಅಕ್ಕಿಯನ್ನು ಅಗತ್ಯ ವಸ್ತುಗಳ ಪರವಾನಿಗೆ ಆದೇಶ 1986ರ ನಿಯಮ 3,4,9 ಮತ್ತು 10ನ್ನು ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಸರಕಾರದ ಪರ ವಶಪಡಿಸಿಕೊಂಡು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುತ್ತಾರೆ.
ಅಕ್ಕಿಯನ್ನು ಟಿ.ಎ.ಪಿ.ಸಿ.ಎಂ. ಗೋದಾಮಿನಲ್ಲಿ ದಾಸ್ತಾನಿರಿಸಲಾಗಿದೆ. ಪ್ರಕರಣವು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಬಾಕಿ ಇದ್ದು ಇದುವರೆಗೂ ಕ್ರಮ ಜರುಗಿಸದೇ ಇರುವುದರಿಂದ ಸದರಿ ಅಕ್ಕಿ ಬಹಳ ಸಮಯ ಉಪಯೋಗಿಸದೆ ಇದ್ದಲ್ಲಿ ಹಾಳಾಗುವ ಸಂಭವ ವಿರುವುದರಿಂದ ಈ ಪ್ರಕರಣದಲ್ಲಿ ವಶಪಡಿಸಿಕೊಂಡ ಅಕ್ಕಿಯನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಸೂಕ್ತವೆಂದು ತೀರ್ಮಾನಿಸಿ ಉಲ್ಲೇಖಿತ ನಡವಳಿಯಂತೆ ಮಾನ್ಯ ಜಿಲ್ಲಾಧಿಕಾರಿಯವರು ಮದ್ಯಂತರ ಆದೇಶ ಹೊರಡಿಸಿದ್ದು ಈ ಪ್ರಕರಣದಲ್ಲಿ ವಶಪಡಿಸಿಕೊಂಡ 29.51 ಕ್ವಿಂಟಾಲ್ ಅಕ್ಕಿಯನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಗೊಳಿಸುವಂತೆ ಆದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಆಹಾರ ಶಿರಸ್ತೇದಾರರು ಮಂಗಳೂರು ತಾಲೂಕು ಸೆಪ್ಟೆಂಬರ್ 21 ರಂದು ಬೆಳಿಗ್ಗೆ 11.30 ಗಂಟೆಗೆ ಟಿ.ಎ.ಪಿ.ಸಿ.ಎಂ.ಎಸ್ ಕೂಳೂರು ಸಗಟು ಗೋದಾಮಿನ ಆವರಣದಲ್ಲಿ ಹರಾಜು ನಡೆಸುವರು. ಯಶಸ್ವೀ ಬಿಡ್ಡುದಾರರು ಸ್ಥಳದಲ್ಲಿ ಬಿಡ್ಡಿನ ಮೊತ್ತದ ಅರ್ಧದಷ್ಟು ಹಣ ಪಾವತಿಸಬೇಕು. ಉಳಿದ ಮೊತ್ತವನ್ನು ಮುಂದಿನ ಮೂರು ದಿನಗಳಲ್ಲಿ ಪೂರ್ಣವಾಗಿ ಪಾವತಿಸಿದ ನಂತರ ಅಕ್ಕಿಯನ್ನು ಪೂರ್ಣವಾಗಿ ಎತ್ತುವಳಿ ಮಾಡಲಾಗುವುದು.ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಮುಂಗಡ ಠೇವಣಿ ರೂ. 2200/-ನ್ನು ಸಂದಾಯ ಮಾಡಿ ಏಲಂ ನಲ್ಲಿ ಭಾಗವಹಿಸಬಹುದಾಗಿದೆ ಎಂದು ಮಂಗಳೂರು ತಾಲೂಕು, ತಹಶೀಲ್ದಾರರ ಪ್ರಕಟಣೆ ತಿಳಿಸಿದೆ.