(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.13.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆ.11ರಂದು ಉತ್ತರ ಪ್ರದೇಶ ರಾಜ್ಯದ ಮಥುರಾದಲ್ಲಿ ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಯಿತು.
ಈ ಉದ್ಘಾಟನಾ ಸಮಾರಂಭದ ನೇರ ಪ್ರಸಾರವನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದಕ್ಷಿಣ ಕನ್ನಡ ಮತ್ತು ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ಇವರ ಸಹಯೋಗದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ಇಲ್ಲಿ ಏರ್ಪಡಿಸಲಾಯಿತು. ಜಿಲ್ಲೆಯ ಪ್ರಗತಿ ಪರ ರೈತರಾದ ಮರಿಯಾ ಡಿಸೋಜ ಇವರು ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ 70 ಕ್ಕೂ ಹೆಚ್ಚು ರೈತರು, ಪಶುವೈದ್ಯಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಜಾನುವಾರುಗಳಿಗೆ ಸಾಂಕೇತಿಕವಾಗಿ ಕಾಲು ಬಾಯಿ ಜ್ವರದ ಲಸಿಕೆಯನ್ನು ಹಾಕಲಾಯಿತು.ಜಾನುವಾರುಗಳಲ್ಲಿ ಕಂಡು ಬರುವ ಕಾಲು ಬಾಯಿ ಜ್ವರದ ನಿಯಂತ್ರಣ ಮತ್ತು ಕಂದು ರೋಗದ (ಬ್ರೂಸೆಲ್ಲೋಸಿಸ್) ಬಗ್ಗೆ ಪಶುವೈದ್ಯಾಧಿಕಾರಿಗಳಾದ ಡಾ. ವಸಂತ್ ಶೆಟ್ಟಿ ಮತ್ತು ಡಾ. ನಿತಿನ್ ಪ್ರಭು ಇವರು ರೈತರಿಗೆ ಉಪನ್ಯಾಸ ನೀಡಿದರು. ಡಾ. ಟಿ.ಜಿ. ರಮೇಶ್, ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.