ವಿಷಮುಕ್ತ ತರಕಾರಿ ಸೇವನೆಗೆ ಕೈತೋಟ ಮತ್ತು ತಾರಸಿ ತೋಟ ಸಹಕಾರಿ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.12.ಮನುಷ್ಯನೂ ನಗರದಲ್ಲಿದ್ದರೂ, ಗ್ರಾಮೀಣದಲ್ಲಿದ್ದರೂ ತರಕಾರಿ ಹಾಗೂ ಆಹಾರವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಇವುಗಳಿಗೆ ಮೂಲ ಆಧಾರವಾಗಿರುವುದು ಕೃಷಿ. ಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿಯು ಮಾಯವಾಗಿ ನಗರದ ವಿಸ್ತೀರ್ಣ ಹೆಚ್ಚಾಗಿರುವಂತೆಯೇ ಉತ್ತಮ ಜೀವನ ಮಟ್ಟವನ್ನು ನಿರೀಕ್ಷಿಸಿ ಯುವ ರೈತರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.


ಇತ್ತೀಚಿನ ದಿನಗಳಲ್ಲಿ ತರಕಾರಿಗೆ ಹೆಚ್ಚಿನ ಬೇಡಿಕೆ, ಉತ್ತಮ ಬೆಲೆ ಸಿಗುವುದರಿಂದ ರೈತರು ಹೆಚ್ಚು ಇಳುವರಿ ನೀಡುವ ಸುಧಾರಿತ ಮತ್ತು ಹೈಬ್ರಿಡ್ ತಳಿಗಳನ್ನು ಬೆಳೆಸುತ್ತಿದ್ದಾರೆ. ಈ ತಳಿಗಳು ಶೀಘ್ರವಾಗಿ ಕೀಟ-ರೋಗಕ್ಕೆ ತುತ್ತಾಗುವುದರಿಂದ ನಿವಾರಣೆಗೆ ಅಧಿಕ ಪ್ರಮಾಣದಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಸಿಂಪಡಣೆ ಮಾಡಲಾಗುತ್ತಿದೆ. ಇದರಿಂದ ಜನರು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಗರವಾಸಿಗಳು ಸ್ವಯಂಪ್ರೇರಿತವಾಗಿ ಸಾಧ್ಯವಾದ ಎಲ್ಲಾ ರೀತಿಯ ತರಕಾರಿ ಮತ್ತು ಇತರೆ ಬೆಳೆಗಳನ್ನು ಬೆಳೆಯುವುದೇ ಇದಕ್ಕೆಲ್ಲಾ ಇರುವ ಪರಿಹಾರ.

ಒಂದು ಕುಟುಂಬಕ್ಕೆ ಬೇಕಾಗುವ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಪಡೆಯಲು ತಮ್ಮ ಮನೆಯ ಆವರಣ/ಹಿತ್ತಲಲ್ಲಿ ಬೆಳೆಸುವ ತೋಟವನ್ನು ಕೈತೋಟ ಎಂದು ಕರೆಯುತ್ತೇವೆ.ಕೈತೋಟ ಮಾಡಲು ಸ್ಥಳ ಇಲ್ಲದೇ ಇರುವ ಪಕ್ಷದಲ್ಲಿ ಮನೆಯ ತಾರಸಿ ಮೇಲೆ ಕುಂಡಗಳಲ್ಲಿ, ಗ್ರೋಬ್ಯಾಗ್‍ಗಳಲ್ಲಿ ಸುಲಭವಾಗಿ ತರಕಾರಿ ಹಣ್ಣುಗಳನ್ನು ಬೆಳೆಯುವುದೇ ತಾರಸಿ ತೋಟ. ತಾರಸಿ ತೋಟದ ಕುಂಡಗಳಲ್ಲಿ/ಗ್ರೋಬ್ಯಾಗ್‍ಗಳಲ್ಲಿ ತುಂಬುವ ಮಿಶ್ರಣ ತಯಾರಿಸುವ ವಿಧಾನ ಈ ಕೆಳಕಂಡಿರುತ್ತದೆ.

Also Read  ಸುಬ್ರಹ್ಮಣ್ಯ: ಮಳೆಯ ಅಬ್ಬರಕ್ಕೆ ಪರ್ವತಮುಖಿಯಲ್ಲಿ ಮನೆಯ ಮೇಲ್ಛಾವಣಿ ಕುಸಿತ

ಮಣ್ಣು, ಮರಳು ಅಥವಾ ಕೋಕೋಪಿಟ್ ಮತ್ತು ಕಾಂಪೋಸ್ಟ್/ಬಯೋಮಿಕ್ಸ್ ಅನ್ನು 1:1:1 ಪ್ರಮಾಣದಲ್ಲಿ ಬೆರೆಸಿ ಮಿಶ್ರಣ ಮಾಡಿಕೊಳ್ಳುವುದು. ಈ ಮಿಶ್ರಣವನ್ನು ಕುಂಡಗಳಲ್ಲಿ/ಗ್ರೋಬ್ಯಾಗ್‍ಗಳಲ್ಲಿ ತುಂಬಿಸಿ ಬೀಜಗಳನ್ನು ಅಥವಾ ಸಸಿಗಳನ್ನು ನಾಟಿ ಮಾಡಿ, ದಿನಾಲೂ ನೀರು ಹಾಕುವುದು. ಬಳ್ಳಿಗಳು ಇರುವ ತರಕಾರಿಗೆ ಚೆನ್ನಾಗಿ ಹರಡಿಕೊಳ್ಳಲು ಆಧಾರಕೋಲು ಕೊಡುವುದು.ಕೈತೋಟ ಮತ್ತು ತಾರಸಿ ತೋಟ ಬೆಳೆಸುವಾಗ ಆರೋಗ್ಯವನ್ನು ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ಶುಚಿತ್ವವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಹಾಗೂ ಸಾವಯವ ಕೃಷಿಗೆ ಹೆಚ್ಚಿನ ಮಹತ್ವನ್ನು ನೀಡಿ ಹಾನಿಕಾರಕ ರಾಸಾಯನಿಕಗಳನ್ನು ಬಳಸದೇ ತೋಟವನ್ನು ಮಾಡಬೇಕಾಗುವುದು.

ಮುಖ್ಯವಾಗಿ ತರಕಾರಿ ಬೆಳೆಯುವಾಗ ಗಮನದಲ್ಲಿ ಇರಬೇಕಾದ ಅಂಶಗಳೇನೆಂದರೆ ಗಿಡಗಳಿಗೆ ಅಗತ್ಯಕ್ಕಿಂತ ಜಾಸ್ತಿ ನೀರು ಕೊಡಬಾರದು, ಗಿಡಗಳಿಗೆ ಸಾಧ್ಯವಾದಷ್ಟು ಬಿಸಿಲು ಬೀಳುವಂತೆ ನೋಡಿಕೊಳ್ಳಬೇಕು, ತರಕಾರಿ ಗಿಡಗಳಲ್ಲಿ ರೋಗದ ಲಕ್ಷಣ ಪ್ರಥಮ ಬಾರಿಗೆ ಕಂಡ ಕೂಡಲೇ ಅದನ್ನು ಅಲ್ಲಿಂದ ದೂರಕ್ಕೆ ಸ್ಥಳಾಂತರಿಸಬೇಕು ಹಾಗೂ ಬೇವಿನ ಸತ್ವದ ದ್ರಾವಣವನ್ನು ಬಳಸಿ ಪೀಡೆ ನಿವಾರಣೆಗೆ ಆಧ್ಯತೆ ನೀಡಬೇಕು. ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ತೋಟಗಾರಿಕೆ ಉಪನಿರ್ದೇಶಕರ ಕಛೇರಿ, ಜಿಲ್ಲಾ ಪಂಚಾಯತ್ ಮಂಗಳೂರು ದೂರವಾಣಿ ಸಂಖ್ಯೆ: 8277806372 ಸಂಪರ್ಕಿಸಬೇಕು ಎಂದು ಉಪನಿರ್ದೇಶಕರು ತೋಟಗಾರಿಕೆ ಇಲಾಖೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಕ.ರ.ವೇ ಸ್ವಾಭಿಮಾನಿ ಬಣ ಕಡಬ ತಾಲೂಕು ಘೋಷಣಾ ಸಮಾವೇಷ

error: Content is protected !!
Scroll to Top